ಹಣ ಕೊಡಿ, ನೀರು ಕುಡಿ!
ಕನ್ನಡಪ್ರಭ ವಾರ್ತೆ ರಾಯಚೂರು ಜು.6
ಕೃಷ್ಣಾ ಮತ್ತು ತುಂಗಭದ್ರಾ ನದಿಗಳು ಹರಿದರೂ ಶುದ್ಧ ನೀರು ಇಲ್ಲಿ ಈಗಲೂ ಅಲಭ್ಯ. ಉದ್ದೇಶಿತ ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನ ಇಚ್ಛಾಶಕ್ತಿ ಕೊರತೆಯಿಂದ ವಿಳಂಬ. ಜೀವ ಹಿಂಡುವ ಆರ್ಸೆನಿಕ್ ಮತ್ತು ಫ್ಲೋರೈಡ್ನಿಂದ ಪಾರಾಗಲು ಗ್ರಾಮಗಳ ಜನತೆಯೀಗ ಹಣ ಕೊಟ್ಟು ನೀರು ಖರೀದಿಸುವ ದುಸ್ಥಿತಿಯಲ್ಲಿದ್ದಾರೆ.
ಜಿಲ್ಲೆಯ 44 ಗ್ರಾಮಗಳಲ್ಲಿ ಆರ್ಸೆನಿಕ್ ಮತ್ತು 111 ಫ್ಲೋರೈಡ್ಯುಕ್ತ ಕುಡಿಯುವ ನೀರಿನ ಸಮಸ್ಯಾತ್ಮಕ ಗ್ರಾಮಗಳ ನಿವಾಸಿಗಳ ಸದ್ಯದ ಚಿತ್ರಣವಿದು.
ಬಡವರಿಗೆ ಶುದ್ಧ ಕುಡಿಯುವ ನೀರೊದಗಿಸುವ ಅತ್ಯಾಸಕ್ತಿಯಲ್ಲಿ ಹಣ ಕೊಟ್ಟು ನೀರು ಖರೀದಿಸಿ ಕುಡಿಯಿರಿ, ಆರೋಗ್ಯ ಕಾಪಾಡಿ ಕೊಳ್ಳಿ ಎಂದು ಹೇಳುತ್ತಲೇ ಗ್ರಾಮೀಣ ಜನರನ್ನು ಮತ್ತಷ್ಟು ಬಡತನಕ್ಕೆ ನೂಕುವ ಇಂಥದ್ದೊಂದು ಪದ್ಧತಿ ರೂಢಿಸಲು ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ನೀರಿನ ಸಮಸ್ಯೆ ಎದುರಿಸುತ್ತಿರುವುದು ಇಂದು, ನಿನ್ನೆಯಿಂದ ಅಲ್ಲ. ಕಳೆದ ದಶಕದಿಂದೀಚೆಗೆ ಈ ಗ್ರಾಮಗಳಲ್ಲಿನ ಕುಡಿಯುವ ನೀರು ಅಶುದ್ಧ ಎಂಬುದು ಪತ್ತೆಯಾಗಿ ಅನೇಕರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಪರೀಕ್ಷೆಯಲ್ಲಿ ಅಪಾಯದ ಮಟ್ಟ ಪತ್ತೆ: ಎನ್ಜಿಒಗಳು ಮತ್ತು ಸರ್ಕಾರದ ಜಿಪಂನ ಪ್ರಯೋಗಾಲಯಗಳಲ್ಲಿ ನಡೆಸಿದ ನೀರಿನ ಅಂಶಗಳ ಕುರಿತ ಪರೀಕ್ಷೆಯಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ಅಂಶ ಅಪಾಯಕಾರಿ ಮಟ್ಟದಲ್ಲಿರುವುದು ಪತ್ತೆಯಾಗಿದೆ. ಸರ್ಕಾರದ ವರದಿಯಂತೆ ಜಿಲ್ಲೆಯ 44 ಗ್ರಾಮಗಳ ಕುಡಿಯುವ ನೀರಿನಲ್ಲಿ ಆರ್ಸೆನಿಕ್ ಮತ್ತು 111 ಗ್ರಾಮಗಳ ಕುಡಿಯುವ ನೀರಿನಲ್ಲಿ ಫ್ಲೋರೈಡ್ ಇದೆ.
ಕಳೆದ ತಿಂಗಳು ಸಚಿವ ಎಚ್. ಕೆ. ಪಾಟೀಲ್ ಜಿಲ್ಲೆಯಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ಯುಕ್ತ ನೀರಿನ ಸಮ ಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿ, ಆ ಗ್ರಾಮಗಳಿಗೆ ಒದಗಿಸುತ್ತಿದ್ದ ನೀರು ಪೂರೈಕೆ ಜು.1 ರಿಂದ ಸಂಪೂರ್ಣ ಸ್ಥಗಿತಗೊಳಿಸಲು ಆದೇಶಿಸಿದ್ದರು. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸೂಚಿಸಿದ್ದರು. ಇದಕ್ಕೂ ಮೊದಲೇ ಜಿಪಂನಿಂದ ಸ್ಮಾಟ್ ಮತ್ತು ದಕ್ಷಿಣ್ ಗ್ರೂಪ್ ಎಂಬ ಸಂಸ್ಥೆಗಳೊಂದಿಗೆ ಶುದ್ಧ ಕುಡಿವ ನೀರೊದಗಿಸುವ ಘಟಕಗಳ ಸ್ಥಾಪನೆಗೂ ಒಪ್ಪಂದ ಮಾಡಿಕೊಳ್ಳಲಾಗಿದೆ.
ಈ ಕಂಪನಿಗಳು ಆಯಾ ಘಟಕಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಕಲ್ಪಿಸುತ್ತವೆ ಎಂಬ ಭರವಸೆಯನ್ನೂ ಅಧಿಕಾರಿಗಳು ನೀಡುತ್ತಿದ್ದಾರೆ.
ಲೀಟರ್ಗೆ 15 ಪೈಸೆ: ಜತೆಗೆ ಶುದ್ಧೀಕರಿಸಿದ ನೀರು ಪ್ರತಿ ಲೀಟರ್ಗೆ 15 ಪೈಸೆಯಂತೆ ಜನತೆಗೆ ಲಭ್ಯವಾಗಲಿದೆ. ಪ್ರತಿ ಮನೆಗೆ ತಮ್ಮ ಅಗತ್ಯಕ್ಕೆ ತಕ್ಕಂತೆ ನೀರು ಖರೀದಿಸಬಹುದು ಎಂಬುದು ಆಡಳಿತದ ಭರವಸೆ. ಆದರೆ ಜಿಲ್ಲೆಯಲ್ಲಿ ಸದ್ಯ ಆರ್ಸೆನಿಕ್ಯುಕ್ತ ಹಾಗೂ ಫ್ಲೋರೈಡ್ಯುಕ್ತ ಕುಡಿಯುವ ನೀರು ಪಡೆಯುವ ಸಮಸ್ಯಾತ್ಮಕ 155 ಗ್ರಾಮಗಳಲ್ಲಿ ಬಹುತೇಕರು ಬಡವರೇ ವಾಸವಾಗಿದ್ದಾರೆ. ಪ್ರತಿ ಕುಟುಂಬವೂ ಕುಡಿಯುವ ನೀರೊದಗಿಸುವ ಘಟಕಗಳಿಗೆ ಪ್ರತಿ ತಿಂಗಳು ಕನಿಷ್ಠವೆಂದರೂ 120-150ರವರೆಗೆ ಪಾವತಿಸಿದರೆ ಮಾತ್ರ ನೀರು ದೊರೆಯುತ್ತದೆ. ತಪ್ಪಿದಲ್ಲಿ ಅಶುದ್ಧ ಹಾಗೂ ಅಪಾಯಕಾರಿ ನೀರೇ ಗತಿ.
ವೆಚ್ಚ-ವ್ಯರ್ಥ: ಜಿಲ್ಲೆಯ ಅನೇಕ ಗ್ರಾಮಗಳಿಗೆ ಜಿಪಂನಿಂದ ಶುದ್ಧ ಕುಡಿಯುವ ನೀರಿನ ಯೋಜನೆಗಳ ಜಾರಿ ನೆಪದಲ್ಲಿ ಕೋಟ್ಯಂತರ ರುಪಾಯಿ ವ್ಯಯಿಸಲಾಗಿದೆ. ಆದರೆ, ಅನೇಕ ಕಡೆ ನಿಧಾನಗತಿಯ ಯೋಜನೆ ಅನುಷ್ಠಾನದಿಂದ ಶುದ್ಧ ಕುಡಿಯುವ ನೀರು ದೊರೆತಿಲ್ಲ. ಅಧಿಕಾರಿಗಳ, ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಈಗಲೂ ಆರೋಗ್ಯಕ್ಕೆ ಅಪಾಯ ತರುವ ನೀರೇ ಗತಿಯಾಗಿದೆ.
ಸರ್ಕಾರದ ಉದ್ದೇಶಿತ ನೀರು ಪೂರೈಕೆ ಯೋಜನೆಗಳು ಕಾಲಮಿತಿಯಲ್ಲಿ ಜಾರಿಯಾಗದ ಕಾರಣ ಜಿಲ್ಲಾಡಳಿತದ ಅಧಿಕಾರಿಗಳು ಬೀಸೋ ದೊಣ್ಣೆಯಿಂದ ಪಾರಾಗಲು ನೀರು ಶುದ್ಧೀಕರಣ ಘಟಕಗಳ ಸ್ಥಾಪನೆಗೆ ಮೊರೆ ಹೋಗಿದ್ದಾರೆ. ಆದರಿದು ಬಡವರಿಗೆ ಹೊರೆ ಆಗದಿರಲಿ.
ಜಗನ್ನಾಥ ಆರ್. ದೇಸಾಯಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

