ರಾಯಚೂರು

ರಸ್ತೆ ನಿಯಮ ಉಲ್ಲಂಘನೆ

Published On :

ಸಿಂಧನೂರು: ಬೆಂಗಳೂರಂತ ಸಿಟ್ಯಾಗ ಬೇಕಾದ್ರ ರೋಡ್ ದಾಟಬಹುದ್ರಿ, ಆದ್ರ ಸಿಂಧನೂರಿನ್ಯಾಗ ದಾಟದು ಅಷ್ಟು ಸರಳಿಲ್ರಿ.. - ಇದು ದೂರದೃಷ್ಟಿ ದೋಷವುಳ್ಳ ಅಂಗವಿಕಲರೊಬ್ಬರು ತಮ್ಮ ಅಸಹಾಯಕತೆ ತೋಡಿಕೊಂಡ ಪರಿ. ತಹಸೀಲ್ದಾರ್ ಕಾರ್ಯಾಲಯ ಮತ್ತು ಕೋರ್ಟ್‌ನ ಕೂಗಳತೆಯ ದೂರದಲ್ಲಿರುವ ಗಾಂಧಿ ಸರ್ಕಲ್ ಹೆಸರಿಗಷ್ಟೇ ಇದೆ. ಇಲ್ಲಿ ರಸ್ತೆಯ ನಿಯಮಗಳನ್ನು ಉಲ್ಲಂಘಿಸಿ ವಾಹನ ಚಲಾಯಿಸುತ್ತಿದ್ದಾರೆ. ನಡುವೆ ಸರ್ಕಲ್ ಇಲ್ಲದ ಕಾರಣ ಮಹಿಳೆಯರು, ವೃದ್ಧರು, ಶಾಲಾ ಮಕ್ಕಳು, ಅಂಗವಿಕಲರು ರಸ್ತೆ ದಾಟುವುದೇ ದುಸ್ತರವಾಗಿದೆ. ಸಿಂಧನೂರು ನಗರದ ಹೃದಯ ಭಾಗದ ಸರ್ಕಲ್‌ನಲ್ಲೇ ರಸ್ತೆ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದರೂ ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಜನರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಿರುವ ಬಗ್ಗೆ ಬಸವರಾಜ ಬಾದರ್ಲಿ, ಬುಡ್ಡಾಸಾಬ, ಬಸವರಾಜ ಚಿಂಚರಕಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ದೌರ್ಜನ್ಯ; ಇಂದು ದಸಂಸ ಧರಣಿ
ರಾಯಚೂರು: ಜಿಲ್ಲೆಯಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಖಂಡಿಸಿ ಹಾಗೂ ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಜು.22ರಂದು ದಲಿತ ಸಂಘರ್ಷ ಸಮಿತಿಯಿಂದ ಧರಣಿ ಆಯೋಜಿಸಲಾಗಿದೆ. ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಆಯೋಜಿಸಲಾಗಿದ್ದು, ಸರ್ಕಾರಿ ವಸತಿ ನಿಲಯಗಳಿಗೆ ಮೂಲಸೌಲಭ್ಯಕ್ಕೆ ಆಗ್ರಹಿಸಲಾಗುತ್ತದೆ. ಸದಾಶಿವ ವರದಿ ಶೀಘ್ರ ಜಾರಿ ಹಾಗೂ ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.
ಡಿಕ್ಕಿ: ಮಾನಸಿಕ ಅಸ್ವಸ್ಥ ಸಾವು
ರಾಯಚೂರು: ಲಿಂಗಸ್ಗೂರು ತಾಲೂಕಿನ ಮಸ್ಕಿಯ ಹೊರವಲಯದಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ಮಾನಸಿಕ ಅಸ್ವಸ್ಥನೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಖಾದರಸಾಬ ಎಂದು ಗುರುತಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಿದ್ದು ಊರಲ್ಲಿ ಅಲ್ಲಿಲ್ಲಿ ಅಲೆದಾಡುತ್ತಿದ್ದ. ಈತ ರಸ್ತೆ ಬದಿ ಸಾಗುತ್ತಿದ್ದ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದ್ದರಿಂದ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನರಲ್ಲಿ ಆತಂಕ
ರಾಯಚೂರು: ಯಾದಗಿರಿ ಜಿಲ್ಲೆಯ ನಾರಾಯಣಪುರ ಜಲಾಶಯದಿಂದ ಭಾರೀ ಪ್ರಮಾಣದ ನೀರು ಹೊರ ಹರಿಸುತ್ತಿರುವುದರಿಂದ ಜಿಲ್ಲೆಯ ದೇವದುರ್ಗ ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ದೇವದುರ್ಗ ತಾಲೂಕಿನ ಹೂವಿನಹೆಡಗಿ ಸೇತುವೆಯ ಬಳಿ ಭಾನುವಾರ ಕೃಷ್ಣಾ ನದಿಯು ಉಕ್ಕಿ ಹರಿಯುತ್ತಿದ್ದು, ರಾಯಚೂರು-ಗುಲ್ಬರ್ಗ ಮಧ್ಯೆ ರಸ್ತೆ ಸಂಪರ್ಕ ಕಡಿತದ ಭೀತಿ ಎದುರಾಗಿದೆ. ಅದೇ ರೀತಿ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿಗೆ ಜನತೆ ಸಿಲುಕಿದ್ದಾರೆ. ಈಗಾಗಲೇ ಜಿಲ್ಲಾಡಳಿತ ನದಿ ತೀರದ ಗ್ರಾಮಸ್ಥರಿಗೆ ಮುನ್ನೆಚ್ಚರಿಕೆ ನೀಡಿದ್ದು, ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದ್ದು, ಅಗತ್ಯ ಕ್ರಮ ಕೈಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.