ರಾಯಚೂರು

ಅವಸಾನದತ್ತ ಮುದಗಲ್ ಕೋಟೆ

Published On :

ಕನ್ನಡಪ್ರಭ ವಾರ್ತೆ, ಮುದಗಲ್, ಜು.24
ಸುಮಾರು 1,200 ವರ್ಷಗಳ ಇತಿಹಾಸವಿರುವ ಪಟ್ಟಣದ ಐತಿಹಾಸಿಕ ಎರಡು ಸುತ್ತಿನ ಕೋಟೆ ನೆರೆ ಮತ್ತು ಮಳೆಗೆ ಎಲ್ಲೆಂದರಲ್ಲಿ ಕುಸಿದು ಬಿದ್ದಿದ್ದು, ದುರಸ್ತಿಗೆ ಪ್ರಾಚ್ಯ ವಸ್ತು ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ನೆರೆ ಹಾವಳಿಗೆ ಸಾಕಷ್ಟು ಮನೆ- ಮಠ, ಮಂದಿರ- ಮಸೀದಿಗಳು ಕುಸಿದವು. ಅದೇ ಸಮಯದಲ್ಲಿ ಕೋಟೆಯ ಮುಂಭಾಗ 6 ಕಡೆಗಳಲ್ಲಿ ಕುಸಿದಿದೆ. ಸರ್ಕಾರ ಮನೆ- ಮಠಗಳಿಗೆ ಪರಿಹಾರ ನೀಡಿತು, ಮತ್ತೆ ಮನೆಗಳು ನಿರ್ಮಾಣವಾದವು. ಆದರೆ ಕೋಟೆ ಗೋಡೆ ಕುಸಿದು 3 ವರ್ಷಗಳೇ ಕಳೆದರೂ ಪುನಃ ಕಟ್ಟುವಲ್ಲಿ ಇಲಾಖೆ ಮತ್ತು ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿವೆ.
ಗೋಡೆ ಕುಸಿಯಲು ಕಾರಣ: ಮಳೆಗೆ ಅಲ್ಲಲ್ಲಿ ಕೋಟೆ ಗೋಡೆ ಕುಸಿದಿದೆ. ಗೋಡೆಯ ಮೇಲ್ಭಾಗದಲ್ಲಿ ಮುಳ್ಳಿನ ಗಿಡ ಗಂಟಿಗಳು ಬೆಳೆದು ಬಿರುಕು ಬಿಟ್ಟಿದ್ದು, ಮಳೆ ನೀರು ಗೋಡೆಯೊಳಗೆ ಸೇರಿ ಹತ್ತಾರು ಕಡೆಗಳಲ್ಲಿ ಕೋಟೆ ಕುಸಿಯಲು ಕಾರಣವಾಗಿದೆ.
ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಮುದಗಲ್ ಕೋಟೆ ಭಾರಿ ಮಹತ್ವ ಪಡೆದಿತ್ತು. ಇದರ ಬಗ್ಗೆ ವಿದೇಶಿಗರು ಮೆಚ್ಚುಗೆ ವ್ಯಕ್ತಪಡಿಸಿ ಸಾಕಷ್ಟು ಪುಸ್ತಕಗಳನ್ನು ಬರೆದಿದ್ದಾರೆ. ಸಾಕಷ್ಟು ಮಂದಿ ಪಿಎಚ್‌ಡಿ ಅಧ್ಯಯನವನ್ನೂ ಮಾಡಿದ್ದಾರೆ. ಇಂತಹ ಸುಂದರ ಕೋಟೆಯನ್ನು ರಕ್ಷಿಸುವ ಅವಶ್ಯಕತೆ ಇದೆ ಎನ್ನುವುದು ಇತಿಹಾಸ ಪ್ರೇಮಿಗಳ ಅಭಿಮತ.
ಕೋಟೆಯಿಂದೇನು ಅನುಕೂಲ?: ಕೋಟೆಯ ಮುಂಭಾಗದಲ್ಲಿ ಕಂದಕವಿದ್ದು, ಅದರಲ್ಲಿ ಮಳೆ ನೀರು ಸಂಗ್ರಹವಾಗುತ್ತವೆ. ಇದರಿಂದ ಪಟ್ಟಣದ ಬೋರ್‌ವೆಲ್, ತೆರೆದಬಾವಿ. ಕೆರೆಗಳಲ್ಲಿ ಅಂತರ್ಜಲ ಹೆಚ್ಚಿ ಕುಡಿಯುವ ನೀರು, ಜಾನುವಾರುಗಳಿಗೆ ಅನುಕೂಲವಾಗುತ್ತವೆ. ಈ ಐತಿಹಾಸಿಕ ಕೋಟೆಯನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಇತಿಹಾಸ ತಿಳಿಯಲು ಅನುಕೂಲ ಮಾಡಬೇಕು. ಕೋಟೆ ಮುಂಭಾಗದ ಮತ್ತು ಅಲ್ಲಲ್ಲಿ ಬಿದ್ದಿರುವ ಸ್ಥಳಗಳನ್ನು ಪುನಾ ನಿರ್ಮಾಣ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಂದ ಹಿಡಿದು ಉಸ್ತುವಾರಿ ಮಂತ್ರಿಗಳಿಗೂ ಸ್ಥಳೀಯರು, ಇತಿಹಾಸ ಪ್ರೇಮಿಗಳು ಮನವಿ ಮಾಡಿದ್ದಾರೆ.
ಪ್ರವಾಸಿ ತಾಣವನ್ನಾಗಿಸಿ: ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಮುದಗಲ್ ಕೋಟೆ ವಿಶೇಷ ಸ್ಥಾನವನ್ನು ಹೊಂದಿತ್ತು. ಇಲ್ಲಿ ಸುಂದರವಾದ ಎರಡು ಸುತ್ತಿನ ಕೋಟೆ, ವಿಶಾಲವಾದ ಹೊಕ್ರಾಣಿ, ಇತಿಹಾಸವನ್ನು ಸಾರುವ ಶಿಲ್ಪ ಕಲೆಗಳು, ಪುರಾತನ ಶಿಲಾಶಾಸನಗಳು, ದೇವಾಲಯಗಳು, ದ್ವಾರ ಬಾಗಿಲುಗಳು, ತೋಪುಗಳು, ಬುರುಜಗಳು, ಪ್ರವಾಸಿಗರ ಕಣ್ಮನ ಸೆಳೆಯುವಂತಿವೆ.
ಆದರೆ ಪ್ರವಾಸೋದ್ಯಮ ಇಲಾಖೆ ಅವುಗಳ ರಕ್ಷಣೆಗೆ ಮುಂದಾಗಿಲ್ಲ. ಹೈದ್ರಾಬಾದ್- ಬೆಳಗಾವಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಈ ಕೋಟೆ ಪ್ರವಾಸಿ ತಾಣವಾದಲ್ಲಿ ಪ್ರವಾಸೋದ್ಯಮ ಇಲಾಖೆಗೆ, ಇತಿಹಾಸ ಪ್ರೇಮಿಗಳಿಗೆ ಹೆಚ್ಚಿನ ಲಾಭವಾಗುತ್ತದೆ. ಇದರಿಂದ ಸಾಕಷ್ಟು ನಿರುದ್ಯೋಗಿಗಳಿಗೆ ಉದ್ಯೋಗ, ವ್ಯಾಪಾರಿಗಳಿಗೆ ಅನುಕೂಲವಾಗುವುದರ ಜೊತೆಗೆ ಮುದಗಲ್ ಹೆಸರು ಪ್ರವಾಸಿ ತಾಣಗಳ ಭೂಪಟದಲ್ಲಿ ಸೇರುತ್ತದೆ. ಆದ್ದರಿಂದ ಪ್ರಾಚ್ಯವಸ್ತು, ಪ್ರವಾಸೋದ್ಯಮ ಇಲಾಖೆ ಇತ್ತಕಡೆ ಗಮನಹರಿಸಿ ಪ್ರವಾಸಿ ತಾಣವನ್ನಾಗಿ ಪರಿವರ್ತಿಸಬೇಕು ಎನ್ನುವುದು ಇಲ್ಲಿನ ಜನತೆಯ ಆಶಯ.
ಇಚ್ಛಾಶಕ್ತಿ ತೋರಲಿ: ಈ ನಿಟ್ಟಿನಲ್ಲಿ ಕ್ಷೇತ್ರದ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಇಚ್ಛಾಶಕ್ತಿಯನ್ನು ತೋರಬೇಕಿದೆ. ಐತಿಹಾಸಿಕ ಸ್ಥಳವನ್ನು ಉಳಿಸಿ ಬೆಳೆಸುವಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳ ಸಹಯೋಗದ ಪಾತ್ರವು ಅಗತ್ಯವಾಗಿ ಬೇಕಾಗಿದೆ.
ಪ್ರಚಾರಕ್ಕೆ ಸೀಮಿತ: ರಾಯಚೂರು ಜಿಲ್ಲಾಧಿಕಾರಿಗಳಾಗಿ ಬರುವವರೆಲ್ಲಾ ಮುದಗಲ್ ಕೋಟೆಗೆ ಭೇಟಿ ನೀಡಿ ಬಿಟ್ಟಿ ಪ್ರಚಾರ ಪಡೆಯುತ್ತಾರೆ. ಆದರೆ ಅದರ ದುರಸ್ತಿಗೆ ಒಂದು ಪೈಸೆಯನ್ನೂ ಬಿಡುಗಡೆ ಮಾಡದಿರುವುದು ವಿಷಾದವೇ ಸರಿ.
ಗುಲ್ಬರ್ಗ ವಿಭಾಗಿಯ ಅಧಿಕಾರಿಯಾಗಿದ್ದ ರಜನೀಶ್ ಗೋಯಲ್, ರಾಯಚೂರು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಮನೋಜ್ ಜೈನ್, ಎಸ್ಪಿಯಾಗಿದ್ದ ಅರುಣ ಚಕ್ರವರ್ತಿ, ಜಿಲ್ಲಾಧಿಕಾರಿಗಳಾಗಿದ್ದ ಅಶೋಕ ದಳವಾಯಿ, ಜಿ.ಎನ್. ನಾಯಕ, ಕುಮಾರ ನಾಯಕ, ಪ್ರಸ್ತುತ ಜಿಲ್ಲಾಧಿಕಾರಿ ನಾಗರಾಜ ಅವರು ಭೇಟಿ ನೀಡಿ ಕೋಟೆಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದುರಸ್ತಿ ಮತ್ತು ಕೋಟೆ ಉತ್ಸವ ಮಾಡುವ ಭರವಸೆಗಳನ್ನು ಮಾತ್ರ ನೀಡಿದ್ದಾರೆ. ಆದರೆ ಇದಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಕೋಟೆಯ ಬಗ್ಗೆ ಕೇವಲ ಅನುಕಂಪ ಮಾತ್ರ ವ್ಯಕ್ತವಾಗುತ್ತದೆ ವಿನಃ ರಕ್ಷಣೆಗೆ ಮುಂದಾಗೋದು ಯಾವಾಗ ಎಂಬುದು ಯಕ್ಷಪ್ರಶ್ನೆ.
-ಪಂಪಯ್ಯ ಮಠ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.