ರಾಯಚೂರು

ನಡುಗಡ್ಡೆ ಸಂಪರ್ಕ ಕಡಿತ

Published On :

ಕನ್ನಡಪ್ರಭ ವಾರ್ತೆ   ಲಿಂಗಸ್ಗೂರು   ಜು.30
ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಸಿದ ಪರಿಣಾಮ ನದಿಯಲ್ಲಿ ಪ್ರವಾಹ ಉಂಟಾಗಿ ಶೀಲಹಳ್ಳಿ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ.
ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ 2.62 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದ ಮಂಗಳವಾರ ನೀರಿನ ಮಟ್ಟ 490.700 ಮೀಟರ್ ಇದ್ದು, ಕೃಷ್ಣಾ ನದಿಗೆ 2.69 ಲಕ್ಷ ಕ್ಯುಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ.
ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತ:  ಇದರಿಂದಾಗಿ ನಡುಗಡ್ಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಶೀಲಹಳ್ಳಿ ಗ್ರಾಮದ ಬಳಿಯ ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದ್ದು, ತಾಲೂಕಿನ ಯರಗೋಡಿ, ಹಂಚಿನಾಳ, ಕಡದರಗಡ್ಡಿ, ಯಳಗುಂದಿ, ಮ್ಯಾದರಗಡ್ಡಿ, ಕರಕಲಗಡ್ಡಿ ಸೇರಿದಂತೆ ನಡುಗಡ್ಡೆ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ನದಿಯಲ್ಲಿ ನೀರು ಕಡಿಮೆ ಇದ್ದಾಗ ನಡುಗಡ್ಡೆ ಗ್ರಾಮಸ್ಥರು ಶೀಲಹಳ್ಳಿ ಸೇತುವೆ ಮೂಲಕ ತೆರಳುತ್ತಿದ್ದರು. ಅಥವಾ ಕಡದರಗಡ್ಡಿಯಿಂದ ಗೋನವಾಟ್ಲ ಗ್ರಾಮಕ್ಕೆ ಹಾಗೂ ಮ್ಯಾದರಗಡ್ಡಿಯಿಂದ ಯಳಗುಂದಿ ಗ್ರಾಮಕ್ಕೆ ತೆಪ್ಪ ಬಳಸಿ ಲಿಂಗಸ್ಗೂರು ಪಟ್ಟಣ ಹಾಗೂ ಇತರೆ ಗ್ರಾಮಗಳಿಗೆ ಬಂದು ಹೋಗುತ್ತಿದ್ದರು.
ಜಲದುರ್ಗ ಮೂಲಕ ತೆರಳಬೇಕು: ಆದರೆ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿರುವ ಪ್ರಯುಕ್ತ ತೆಪ್ಪ ಬಳಸಲು ಆತಂಕ ಎದುರಾಗಿದೆ. ಇದರಿಂದ ನಡುಗಡ್ಡೆ ಗ್ರಾಮಗಳ ಜನತೆ 40 ಕಿಮೀ ಸುತ್ತುವರಿದು ಜಲದುರ್ಗ ಗ್ರಾಮದ ಮೂಲಕ ತೆರಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಲ್ಲದೆ ನಡುಗಡ್ಡೆ ಗ್ರಾಮಗಳ ಸರಕಾರಿ ಶಾಲೆಗಳಿಗೆ ಶಿಕ್ಷಕರು ಜಲದುರ್ಗ ಮೂಲಕ ಬಂದು ಹೋಗುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸ್ಥಳಾಂತರಕ್ಕೆ ಯತ್ನ: ನಡುಗಡ್ಡೆಯ ಮ್ಯಾದರಗಡ್ಡಿ ಮತ್ತು ಕರಕಲಗಡ್ಡಿ ಪ್ರದೇಶದಲ್ಲಿ ಸುಮಾರು 40 ಜನರು ಜಾನುವಾರುಗಳ ಸಮೇತ ವಾಸವಾಗಿದ್ದು, ಇವರು ಬೇರೆ ಗ್ರಾಮಗಳಿಗೆ ತೆರಳಲು ತೆಪ್ಪ ಬಳಕೆ ಅಥವಾ ಕಾಲ್ನಡಿಗೆ ಗತಿಯಾಗಿತ್ತು. ಆದರೆ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾದ ಪ್ರಯುಕ್ತ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಇತ್ತಿಚಿಗೆ ತಾಲೂಕು ಆಡಳಿತ ಮ್ಯಾದರಗಡ್ಡಿ ಮತ್ತು ಕರಕಲಗಡ್ಡಿಯ ನಿವಾಸಿಗಳನ್ನು ಯರಗೋಡಿಗೆ ಸ್ಥಳಾಂತರಿಸಲು ಮುಂದಾಗಿ ಕೆಲವರನ್ನು ಕರೆತಂದು ಗಂಜಿ ಕೇಂದ್ರದ ವ್ಯವಸ್ಥೆ ಕಲ್ಪಿಸಲಾಗಿದೆ.
ಗಂಜಿಕೇಂದ್ರದಲ್ಲಿ ಇರಲೊಲ್ಲರು: ಈ ಕುರಿತು ಯರಗೋಡಿಯಲ್ಲಿ ತಂಗಿರುವ ಮ್ಯಾದರಗಡ್ಡಿಯ ಮಲ್ಲಪ್ಪ ಮ್ಯಾದರ ಅವರನ್ನು ಮಂಗಳವಾರ ಪತ್ರಿಕೆ ದೂರವಾಣಿ ಮೂಲಕ ಸಂಪರ್ಕಿಸಿ ವಿಚಾರಿಸಿದಾಗ, ಇತ್ತೀಚಿಗೆ ಅಧಿಕಾರಿಗಳು ಮ್ಯಾದರಗಡ್ಡಿಯಿಂದ ಯರಗೋಡಿಗೆ ಕರೆತಂದು ಗಂಜಿ ಕೇಂದ್ರ ತೆರೆದಿದ್ದಾರೆ. ಆದರೆ ಯರಗೋಡಿಯಲ್ಲಿ ವಾಸ ಮಾಡಿದರೆ ನಡುಗಡ್ಡೆಯ ಜಮೀನಿನಲ್ಲಿ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಲಿದೆ ಹಾಗೂ ಮಹಿಳೆಯರು, ಮಕ್ಕಳು ಸೇರಿದಂತೆ ಜನ- ಜಾನುವಾರುಗಳು ಅಲ್ಲಿಯೇ ವಾಸವಿರುವ ಪ್ರಯುಕ್ತ ಅವರಿಗೆ ಅನಾನುಕೂಲವಾಗಲಿದೆ ಎಂದು ಈಗಾಗಲೇ ಇಬ್ಬರು ಮರಳಿ ಮ್ಯಾದರಗಡ್ಡಿಗೆ ತೆರಳಿದ್ದಾರೆ.
ಯರಗೋಡಿಯಲ್ಲಿ ಗಂಜಿಕೇಂದ್ರ ತೆರೆಯುವ ಬದಲು ಆಹಾರ ಪದಾರ್ಥ ನೀಡಿದರೆ ಮ್ಯಾದರಗಡ್ಡಿಗೆ ಕೊಂಡೊಯ್ಯುವುದಾಗಿ ಅಧಿಕಾರಿಗಳಿಗೆ ಮನವಿ ಮಾಡಿದರೆ ನೀಡಲು ನಿರಾಕರಿಸಿದ್ದಾರೆ. ಇದರಿಂದ ಗಂಜಿಕೇಂದ್ರದಲ್ಲಿ ಊಟ ಮಾಡುವವರಿಲ್ಲದಂತಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.