ಎಪಿಎಂಸಿಗೆ ಭರಪೂರ ಅನುದಾನ
ಕನ್ನಡಪ್ರಭ ವಾರ್ತೆ , ರಾಯಚೂರು , ಜೂ.1
ರಾಯಚೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕಳೆದ 8 ತಿಂಗಳಿನಲ್ಲಿ ಸುಮಾರು 12 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರದಿಂದ ಒಪ್ಪಿಗೆ ದೊರೆತಿದ್ದು, ಅವುಗಳಲ್ಲಿ ಬಹುತೇಕ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ತಿಮ್ಮಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಎಪಿಎಂಸಿ ಅಧ್ಯಕ್ಷರಾಗಿ 8 ತಿಂಗಳ ಕಾಲ ಆಡಳಿತ ನಡೆಸಿದ್ದು ಈ ಅವಧಿಯಲ್ಲಿ 12 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅಂಥ ಎಲ್ಲ ಪ್ರಸ್ತಾವನೆಗಳಿಗೆ ಸರ್ಕಾರ ಸಮ್ಮತಿಸಿದ್ದು ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಅಧಿಕಾರ ಹಸ್ತಾಂತರ: ರಾಜ್ಯ ಸರ್ಕಾರವು ಇತ್ತೀಚೆಗೆ ಸದ್ಯದ ನಾಮ ನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದರಿಂದ ತಾವು ತಮ್ಮ ಅಧಿಕಾರ ಹಸ್ತಾಂತರಿಸಿರುವುದಾಗಿ ತಿಳಿಸಿದ ಅವರು, ತಾವು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರೈತರೊಂದಿಗೆ ಹಾಗೂ ವರ್ತಕರೊಂದಿಗೆ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದಾಗಿ ತಿಳಿಸಿದರು.
ನಗರದ ಹತ್ತಿ ಮಾರುಕಟ್ಟೆಯಲ್ಲಿ ಬೀದಿ ದೀಪ ವ್ಯವಸ್ಥೆಗೆ ಅಗತ್ಯ ಕ್ರಮ ಕೈಗೊಂಡಿದ್ದು 100 ಹೈಮಾಸ್ಟ್ ವಿದ್ಯುತ್ ದೀಪಗಳನ್ನು ಈಗಾಗಲೇ ಅಳವಡಿಸಿದ್ದು, ದುರಸ್ತಿಗೀಡಾಗಿದ್ದ ವಿದ್ಯುತ್ ಜನರೇಟರ್ ಕಾರ್ಯನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ರಸ್ತೆ ದುರಸ್ತಿಗೆ ಕ್ರಮ: ಹತ್ತಿ ಮಾರುಕಟ್ಟೆಯಲ್ಲಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗಿದೆ. ರಾಜೇಂದ್ರ ಗಂಜ್ ಮತ್ತು ಹತ್ತಿ ಮಾರುಕಟ್ಟೆಯಲ್ಲಿ ವ್ಹೇ ಬ್ರಿಡ್ಜ್ ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದಕ್ಕೆ ಸರ್ಕಾರದಿಂದ ಮಂಜೂರಾತಿ ದೊರೆತಿದೆ ಎಂದು ಹೇಳಿದರು.
ಎಪಿಎಂಸಿಯಲ್ಲಿ ಮಾರುಕಟ್ಟೆ ಶುಲ್ಕ ವಸೂಲಿಯ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಂಡ ಫಲವಾಗಿ 2011- 12ರಲ್ಲಿ 1 ಲಕ್ಷದಷ್ಟಿದ್ದ ಮಾರುಕಟ್ಟೆ ಶುಲ್ಕದ ಆದಾಯವು ಕಳೆದ 8 ತಿಂಗಳಿನಲ್ಲಿ ಪ್ರತಿ ತಿಂಗಳು ಸರಿಸುಮಾರು 2 ಕೋಟಿಗೆ ಏರಿಕೆ ಕಂಡಿದೆ ಎಂದು ತಿಳಿಸಿದರು.
ಹಿರಿಯ ನಿರ್ದೇಶಕರಿಗೆ ಪತ್ರ: ಮಾರುಕಟ್ಟೆಯ ಶುಲ್ಕ ವಸೂಲಿಯಲ್ಲಿ ಆಗುತ್ತಿರುವ ಲೋಪದ ಬಗ್ಗೆ ಎಪಿಎಂಸಿ ಇಲಾಖೆಯ ಹಿರಿಯ ನಿರ್ದೇಶಕರಿಗೆ ಈಗಾಗಲೇ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿಯೂ ಈ ಬಗ್ಗೆ ನಿರಂತರ ಒತ್ತಡ ಹೇರುವುದಾಗಿ ತಿಳಿಸಿದ ಅವರು, 3ರಿಂದ 4 ಕೋಟಿ ಮಾರುಕಟ್ಟೆ ಶುಲ್ಕ ಸಂಗ್ರಹ ಸಾಧ್ಯತೆಯ ಬಗ್ಗೆಯೂ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಅಂಗಡಿಗೆ ನಿವೇಶನ- ನೋಟಿಸ್: ರಾಜೇಂದ್ರ ಗಂಜ್ನಲ್ಲಿ ಪಟೇಲ್ ರಸ್ತೆಯ ವರ್ತಕರ ಅಂಗಡಿಗಳ ನಿರ್ಮಾಣಕ್ಕೆ ಈ ಹಿಂದೆ ನಿವೇಶನಗಳನ್ನು ಒದಗಿಸಲಾಗಿತ್ತು. ಆದರೆ ಅವರು ನಿಗದಿತ ಗಡುವು ಮೀರಿದ್ದರೂ ಇದುವರೆಗೆ ಸ್ಥಳಾಂತರಗೊಳ್ಳದಿರುವ ಬಗ್ಗೆ ಕಳೆದ 10 ದಿನಗಳ ಹಿಂದಷ್ಟೇ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.
ನಗರದ ಪಟೇಲ್ ರಸ್ತೆಯಲ್ಲಿ ಸಂಚಾರ ಅಡಚಣೆಯ ಹಿನ್ನೆಲೆ ಪೊಲೀಸ್ ಇಲಾಖೆಯ ಸೂಚನೆ ಮೇರೆಗೆ ಪಟೇಲ್ ರಸ್ತೆಯಲ್ಲಿರುವ ಸುಮಾರು 70 ಅಂಗಡಿಗಳ ಮಾಲೀಕರಿಗೆ ನಿವೇಶನ ಹಂಚಿಕೆ ಮಾಡಿದ್ದರೂ ಅವರು ಸ್ಥಳಾಂತರಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಅನೇಕ ತಿಂಗಳಿಂದ ತಾವು ಸಭೆ ಕರೆದು ಚರ್ಚಿಸಿದ್ದು, ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿದ್ದಾಗಿ ತಿಳಿಸಿದರು.
ವಿವಿಧ ಅಭಿವೃದ್ಧಿ ಕಾಮಗಾರಿ: ಎಪಿಎಂಸಿ ಆವರಣದಲ್ಲಿ ರೈತ ಸಮುದಾಯ ಭವನ ನಿರ್ಮಾಣ, ರಸ್ತೆ ದುರಸ್ತಿ, ಚರಂಡಿ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಒಟ್ಟು 12 ಕೋಟಿ ಯೋಜನೆಗೆ ಸರ್ಕಾರದಿಂದ ಸಮ್ಮತಿ ದೊರೆತಿದೆ ಎಂದು ಆರ್.ತಿಮ್ಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಾಬುರಾವ್, ಬಂಡೇಶ್ ವಲ್ಕಂದಿನ್ನಿ, ನಾರಾಯಣರಾವ್ ಪೂರತಿಪ್ಲಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

