ರಾಯಚೂರು

ರೈತರ ಉತ್ಸಾಹ ಇಮ್ಮಡಿ

Published On :

ಕನ್ನಡಪ್ರಭ ವಾರ್ತೆ ,   ಲಿಂಗಸ್ಗೂರು ,   ಜೂ.1
ರಾಜ್ಯದ ಹೈದರಾಬಾದ್ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಿರುವುದು ಸಾಮಾನ್ಯ. ಬೇಸಿಗೆ ಬಿರು ಬಿಸಿಲಿನ ತಾಪಕ್ಕೆ ತತ್ತರಿಸಿದ ಜನತೆಗೆ ಮುಂಗಾರು ಮಳೆಯ ಶುಭಾರಂಭದಿಂದ ಕೃಷಿ ಚಟುವಟಿಕೆ ಆರಂಭಗೊಂಡು ರೈತರಲ್ಲಿ ಉತ್ಸಾಹ ಇಮ್ಮಡಿಗೊಂಡಿದೆ.
ತಾಲೂಕಿನಲ್ಲಿ ಕಳೆದೆರಡು ವರ್ಷಗಳಿಂದ ಸಮಯಕ್ಕೆ ಸರಿಯಾಗಿ ಮಳೆ ಬಾರದ ಪರಿಣಾಮ ಬರಗಾಲ ಆವರಿಸಿ ರೈತರು ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಯಿತು. ಅಲ್ಲದೆ ಬೇಸಿಗೆ ಸಮಯದಲ್ಲಿ 44 ಡಿಗ್ರಿ ತಾಪಮಾನದಿಂದ ಜನ- ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಕೃಷಿ ಚಟುವಟಿಕೆ ಆರಂಭ: ಪ್ರಸಕ್ತ ಮುಂಗಾರು ಬಿತ್ತನೆಗೆ ಆರಂಭದಲ್ಲಿಯೇ ಗುಡುಗು- ಸಿಡಿಲಿನ ಆರ್ಭಟದೊಂದಿಗೆ ಸುರಿದ ಭಾರೀ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸುವ ಜೊತೆಗೆ ಕೃಷಿ ಚಟುವಟಿಕೆಗಳು ಜೋರಾಗಿವೆ.
ತಾಲೂಕಿನಲ್ಲಿ ಶುಕ್ರವಾರ ಮಧ್ಯರಾತ್ರಿ ಭಾರೀ ಮಳೆ ಸುರಿದಿದ್ದು, ಲಿಂಗಸ್ಗೂರು ವ್ಯಾಪ್ತಿಯಲ್ಲಿ 67 ಮಿಮೀ, ಮುದಗಲ್ ವ್ಯಾಪ್ತಿಯಲ್ಲಿ 57 ಮಿಮೀ, ಮಸ್ಕಿ ವ್ಯಾಪ್ತಿಯಲ್ಲಿ 63 ಮಿಮೀ, ಗುರುಗುಂಟಾ ವ್ಯಾಪ್ತಿಯಲ್ಲಿ 41 ಮಿಮೀ ಮಳೆಯಾಗಿರುವ ಕುರಿತು ವರದಿಯಾಗಿದೆ.
ಮುಂಗಾರು ಬಿತ್ತನೆಗೆ ತಯಾರಿ: ಇದರಿಂದ ಜಮೀನುಗಳಲ್ಲಿ ತೇವಾಂಶ ಹೆಚ್ಚಿದ್ದು, ರೈತರು ಮುಂಗಾರು ಬಿತ್ತನೆಗೆ ತಯಾರಿ ನಡೆಸಿದ್ದಾರೆ. ಇನ್ನೊಂದೆಡೆ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬಹುತೇಕ ಹಳ್ಳ- ಕೊಳ್ಳಗಳಲ್ಲಿ ನೀರು ಹರಿಯುತ್ತಿದೆ.
ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡಿದ್ದು, ಹಲವೆಡೆ ಚರಂಡಿಗಳು ತುಂಬಿ ರಸ್ತೆ ಮೇಲೆ ಹರಿದು, ಮನೆಗಳಿಗೆ ನೀರು ನುಗ್ಗಿ ಜನತೆಯ ನಿದ್ದೆಗೆಡಿಸಿತು. ಬೆಳಗ್ಗೆ ಮನೆ, ತಗ್ಗು ಪ್ರದೇಶಗಳಿಂದ ನೀರೆತ್ತುವ ಕಾರ್ಯ ಭರದಿಂದ ಸಾಗಿರುವ ದೃಶ್ಯ ಕಂಡು ಬಂದಿತು.
ಆರಂಭಶೂರತ್ವ ಅಷ್ಟೇ ಸಾಲದು: ಒಟ್ಟಾರೆ ಕಳೆದ ಸುಮಾರು 2 ವರ್ಷದಿಂದ ಆರಂಭದಲ್ಲಿ ಶೂರತನ ತೋರುತ್ತಿದ್ದ ಮೇಘರಾಜ, ನಂತರ ಮಳೆಯ ಅಭಾವದಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದ ರೈತರು ಹಾಗೂ ಜನ- ಜಾನುವಾರುಗಳು, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಚಟುವಟಿಕೆಯಿಂದ ಬೆಳೆ ಕೈಗೆ ಬರುವವರೆಗೆ ಹಾಗೂ ಜನ- ಜಾನುವಾರುಗಳಿಗೆ ಅಗತ್ಯಕ್ಕೆ ತಕ್ಕಂತೆ ಮಳೆ ಸುರಿದರೆ ಒಳ್ಳೆಯದು ಎಂಬ ಭಾವನೆ ಮೂಡಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.