ಇನ್ನೂ ಅಪ್ಡೇಟ್ 'ಅಂತರ' ಜಾಲ!
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.11
ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರ ಅಭಿವೃದ್ಧಿ ಹೊಂದಿದಾಗಿನಿಂದ ಎಲ್ಲ ಮಾಹಿತಿ ಬೆರಳ ತುದಿಯಲ್ಲಿಯೇ ಲಭ್ಯ. ದೇಶ ವಿದೇಶದ ಮಾಹಿತಿಯನ್ನು ಕುಳಿತಲ್ಲಿಯೇ ಪಡೆಯುವುದು ಸಾಧ್ಯವಾಗಿದೆ. ಹೀಗೆಯೇ ಜಿಲ್ಲೆಯ ಮಾಹಿತಿಯನ್ನು ನೀಡಬೇಕಿದ್ದ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿರುವ ಮಾಹಿತಿಗಳು ಬದಲಾಗದೇ ಹುಡುಕಾಡುವವರ ದಿಕ್ಕು ತಪ್ಪಿಸುವಂತಿರುವುದು ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸುವ ವೆಬ್ಸೈಟ್ ನೀಡುತ್ತಿರುವ ತಪ್ಪು ಮಾಹಿತಿಯೇ ಇದಕ್ಕೆ ಕಾರಣ.
ಗೊಂದಲ: ಜಿಲ್ಲೆಯ ಅಧಿಕೃತ ಆಡಳಿತದ ವೆಬ್ ಸೈಟ್- ರಾಯಚೂರು.ಎನ್ನೈಸಿ.ಇನ್ ತಾಣಕ್ಕೆ ಭೇಟಿ ನೀಡುವ ಎಲ್ಲರಿಗೂ ಅಲ್ಲಿನ ಹಳತಾದ ಮಾಹಿತಿ ತಬ್ಬಿಬ್ಬುಗೊಳಿಸುತ್ತದೆ. ಗೊಂದಲಕ್ಕೆ ಬೀಳಿಸುತ್ತಿದೆ. ಹೊಸ ಅಂಶಗಳಿಗಿಂತ ಹಳೆಯ ವಿಷಯಗಳೇ ಅಲ್ಲಿ ಜಾಗ ಪಡೆದಿರುವುದು ಈ ಗೊಂದಲಕ್ಕೆ ಕಾರಣ.
ದೇಶ, ವಿದೇಶಗಳಲ್ಲಿ ಕುಳಿತು ರಾಯಚೂರು ಜಿಲ್ಲೆಯ ಆಡಳಿತದ ಮಾಹಿತಿ ಪಡೆಯಲು ಯಾರಾದರೂ ಮುಂದಾದರೆ ಅಂಥವರಿಗೆ ಈ ತಾಣದಲ್ಲಿ ಸಿಗುವುದು ತೀರಾ ಹಳೆಯ ಮಾಹಿತಿ. ತಾಣವೂ ನಿರಂತರವಾಗಿ ಅಪಡೇಟ್ ಆಗುತ್ತಿಲ್ಲ ಎಂಬುದು ಸಾರ್ವಜನಿಕರ ಆರೋಪ. ಅದಕ್ಕೆ ಸಾಕ್ಷಿಯೆಂಬಂತೆ ತಾಣದಲ್ಲಿ ಅನೇಕ ಲೋಪಗಳಿವೆ.
ಜಿಲ್ಲೆಗೆ ಸಂಬಂಧಿಸಿದ ಕ್ಷೇತ್ರದಿಂದ ಎಂಎಲ್ಸಿಗಳಾಗಿರುವವರ ಹೆಸರು ಇದುವರೆಗೆ ಬದಲಾಗಿಲ್ಲ. ವೆಬ್ಸೈಟ್ ನಲ್ಲಿ ಈಗಲೂ ಎಚ್.ಆರ್. ಶ್ರೀನಾಥ್, ಮನೋಹರ ಮಸ್ಕಿ ಮತ್ತು ಎನ್.ಶಂಕ್ರಪ್ಪ ಅವರೇ ಎಂಎಲ್ಸಿಗಳಾಗಿದ್ದಾರೆಂದು ತಾಣದಲ್ಲಿ ಮಾಹಿತಿ ಒದಗಿಸಲಾಗಿದೆ.
ತಿಂಗಳಾದರೂ ಬದಲಿಲ್ಲ: ಈ ಮೂವರು ಈ ಸ್ಥಾನಗಳಲ್ಲಿಲ್ಲ. ಇವರ ಬದಲಿಗೆ ಅಮರನಾಥ್ ಪಾಟೀಲ್, ಹಾಲಪ್ಪ ಆಚಾರ್ ಆಯ್ಕೆಯಾಗಿದ್ದಾರೆ. ಶಂಕ್ರಪ್ಪ ಅವರು ಸದಾನಂದಗೌಡರಿಗೆ ಸ್ಥಾನ ಬಿಟ್ಟುಕೊಡಲು ರಾಜಿನಾಮೆ ನೀಡಿದ್ದರಿಂದ ಅವರು ಎಂಎಲ್ಸಿಯಾಗಿಲ್ಲ. ಇನ್ನು ಶಶಿಲ್ ನಮೋಶಿ ಈಚೆಗೆ ರಾಜೀನಾಮೆ ನೀಡಿದ್ದರಿಂದ ಆ ಸ್ಥಾನ ತೆರವಾಗಿದೆ. ಆದರೆ ತಾಣದಲ್ಲಿ ಮಾತ್ರ ಹಳೆಯ ಹೆಸರುಗಳು ಇನ್ನೂ ರಾರಾಜಿಸುತ್ತಿವೆ. ಜನರಿಗೆ ದಿಕ್ಕು ತಪ್ಪಿಸುತ್ತಿವೆ.
ಇನ್ನು ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮೇ 8ರಂದು ಹೊರಬಿದ್ದಿದೆ. ಫಲಿತಾಂಶ ಹೊರಬಂದು ಒಂದು ತಿಂಗಳಾಗಿದೆ. ಚುನಾವಣೆಯ ಫಲಿತಾಂಶದ ಮಾಹಿತಿ ಸಹ ಇಲ್ಲಿ ಹಳಸಲಾಗಿದೆ. ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಈಗಲೂ ರಾಯಚೂರು ನಗರ ಕ್ಷೇತ್ರದ ಶಾಸಕರಾಗಿ ಸೈಯದ್ ಯಾಸೀನ್, ಗ್ರಾಮೀಣ ಶಾಸಕರಾಗಿ ರಾಜಾ ರಾಯಪ್ಪ ನಾಯಕ, ದೇವದುರ್ಗ ಶಾಸಕರಾಗಿ ಶಿವನಗೌಡ ನಾಯಕ ಹಾಗೂ ಸಿಂಧನೂರು ಶಾಸಕರಾಗಿ ವೆಂಕಟರಾವ್ ನಾಡಗೌಡ ಇದ್ದಾರೆ. ಹಾಗೆಯೇ ಮಸ್ಕಿ ಶಾಸಕರಾಗಿ ಪ್ರತಾಪಗೌಡ ಪಾಟೀಲ್ ಹಾಗೂ ಲಿಂಗಸ್ಗೂರು ಶಾಸಕರಾಗಿ ಮಾನಪ್ಪ ವಜ್ಜಲ್ ಅವರಿರುವುದು ಸರಿ. ಆದರೆ ಅವರು ಪಕ್ಷ ಬದಲಿಸಿದ್ದಾರೆ. ಆದರೆ ಜಿಲ್ಲಾಡಳಿತದ ತಾಣದಲ್ಲಿ ಅವರು ಬಿಜೆಪಿಯಲ್ಲಿದ್ದಾರೆಂದು ದಾಖಲಿಸಲಾಗಿದೆ.
ಜಾಗ ಖಾಲಿ: ಇನ್ನು ಜಿಪಂ ಅಧ್ಯಕ್ಷರಾಗಿ ಲಲಿತಮ್ಮ ಹಾಗೂ ಉಪಾಧ್ಯಕ್ಷರಾಗಿ ಕೆ. ಶರಣಪ್ಪ ಆಯ್ಕೆಯಾಗಿ ಒಂದು ವರ್ಷಕ್ಕೂ ಹೆಚ್ಚಿನ ಸಮಯ ಕಳೆದಿದೆ. ಹಾಗೆಯೇ ಜಿಪಂಗೆ 35 ಸದಸ್ಯರು ಆಯ್ಕೆಯಾಗಿದ್ದಾರೆ. ತಾಪಂ ಅಧ್ಯಕ್ಷರಾಯ್ಕೆಯೂ ನಡೆದಿದೆ. ಆದರೆ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ಈ ಸ್ಥಾನಗಳ ವಿವರವನ್ನು ಭರ್ತಿ ಮಾಡದೇ ಖಾಲಿ ಬಿಡಲಾಗಿದೆ. ಅದೇ ರೀತಿ ತಾಪಂ ಅಧ್ಯಕ್ಷರ ವಿವರಗಳೂ ಇಲ್ಲಿಲ್ಲ. ಹೀಗಾಗಿ ಅಂತರ್ಜಾಲದಿಂದ ಜಿಲ್ಲೆಯ ಮಾಹಿತಿ ಪಡೆಯಲು ಬಯಸುವವರಿಗೆ ಜಿಲ್ಲಾಡಳಿತದ ಅಧಿಕೃತ ವೆಬ್ಸೈಟ್ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದೆ. ಜಿಲ್ಲಾಡಳಿತ ಇನ್ನಾದರೂ ಈ ಬಗ್ಗೆ ಗಮನಹರಿಸಿ ಸಮರ್ಪಕ ಹಾಗೂ ಸರಿಯಾದ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

