ಬಿತ್ತನೆ ಬೀಜ, ರಸಗೊಬ್ಬರ ಲಭ್ಯ
ಕನ್ನಡಪ್ರಭ ವಾರ್ತೆ, ರಾಯಚೂರು, ಜೂ.15
ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಅಗತ್ಯ ಪ್ರಮಾಣದ ಬಿತ್ತನೆ ಬೀಜ, ರಸಗೊಬ್ಬರ ಲಭ್ಯವಿದೆ. ನಕಲಿ ಬಿತ್ತನೆ ಬೀಜ ಹಾವಳಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿಗೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದು ಸಂತಸ ತಂದಿದೆ. ರೈತರು ಕೃಷಿ ಕಾರ್ಯ ಆರಂಭಿಸಿದ್ದಾರೆ. ರೈತರಿಗೆ ಪ್ರಸಕ್ತ ಮುಂಗಾರು ಹಂಗಾಮಿಗೆ ಅಗತ್ಯವಿರುವ ಎಲ್ಲ ಬಿತ್ತನೆ ಬೀಜಗಳ ದಾಸ್ತಾನಿರಿಸಲಾಗಿದೆ ಎಂದು ತಿಳಿಸಿದರು.
2.99 ಹೆಕ್ಟೇರ್ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಜೂನ್ ತಿಂಗಳ ವಾಡಿಕೆ ಮಳೆಯು 75 ಮಿಮೀ ಆಗಿದ್ದು, ಈಗಾಗಲೇ 96 ಮಿಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2.99 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದ್ದು, ಅದರಲ್ಲಿ 1,59,500 ಹೆಕ್ಟೇರ್ ಮಳೆಯಾಶ್ರಿತ ಮತ್ತು 1.40 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆಯ ಗುರಿಯಿರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ 26,100 ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆಯಿದ್ದು, 4,260 ಕ್ವಿಂಟಲ್ ಇದುವರೆಗೆ ವಿತರಿಸಲಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಸದ್ಯ 5,588 ಕ್ವಿಂಟಲ್ ವಿವಿಧ ಬಿತ್ತನೆ ಬೀಜ ದಾಸ್ತಾನಿರಿಸಲಾಗಿದೆ. ರಾಜ್ಯ ಬೀಜ ನಿಗಮದಲ್ಲಿ 6,444 ಕ್ವಿಂಟಲ್ ಮತ್ತು ರಾಷ್ಟ್ರೀಯ ಬೀಜ ನಿಗಮದಲ್ಲಿ 3,600 ಕ್ವಿಂಟಲ್ ಬಿತ್ತನೆ ಬೀಜ ಲಭ್ಯವಿದೆ ಎಂದು ತಿಳಿಸಿದರು.
27,440 ಕ್ವಿಂ. ಬಿತ್ತನೆ ಬೀಜ ದಾಸ್ತಾನು: ಕೆಒಎಫ್ ಬಳಿ 410 ಕ್ವಿಂಟಲ್, ಖಾಸಗಿ ಸಂಸ್ಥೆಗಳಲ್ಲಿ 11,398 ಕ್ವಿಂಟಲ್ ಬೀಜ ಲಭ್ಯವಿದೆ. ಸದ್ಯ ಒಟ್ಟು 27,440 ಕ್ವಿಂಟಲ್ ಬಿತ್ತನೆ ಬೀಜ ದಾಸ್ತಾನಿದ್ದು, ಜಿಲ್ಲೆಯ 37 ರೈತ ಸಂಪರ್ಕ ಕೇಂದ್ರಗಳು ಹಾಗೂ 4 ಮಳಿಗೆಗಳಲ್ಲಿ ಸಹಾಯ ಧನದಲ್ಲಿ ಬೀಜದ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಥೇಚ್ಛ ಯೂರಿಯಾ ಬಳಕೆ ಸರಿಯಲ್ಲ: ಜಿಲ್ಲೆಗೆ ಒಟ್ಟು 1,70,700 ಮೆಟ್ರಿಕ್ ಟನ್ ರಸಗೊಬ್ಬರದ ಅವಶ್ಯಕತೆಯಿದ್ದು, ಸದ್ಯ ಜಿಲ್ಲೆಯ ವಿವಿಧೆಡೆ ಒಟ್ಟು 89,018 ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆ. ಸದ್ಯಕ್ಕೆ ಡಿಎಪಿ, ಯೂರಿಯಾ ಸೇರಿದಂತೆ ಯಾವುದೇ ರಸಗೊಬ್ಬರದ ಕೊರತೆ ಜಿಲ್ಲೆಯಲ್ಲಿಲ್ಲ ಎಂದ ಅವರು, ಯೂರಿಯಾ ರಸಗೊಬ್ಬರದ ಹೆಚ್ಚಿನ ಬಳಕೆಯಿಂದ ರೈತರು ಬೆಳೆ ಹಾನಿ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ರೈತರಿಗೆ ತಿಳಿವಳಿಕೆ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೆಲ ಪ್ರಮುಖ ರಸಗೊಬ್ಬರ ತಯಾರಿಕೆ ಕಂಪನಿಗಳು ರಸಗೊಬ್ಬರದ ದರವನ್ನು ಕಡಿತಗೊಳಿಸಿದ್ದು, ನಿಗದಿಪಡಿಸಿದ ದರದಲ್ಲಿಯೇ ರೈತರು ರಸಗೊಬ್ಬರ ಖರೀದಿಸುವಂತೆ ಮನವಿ ಮಾಡಿದ ಅವರು, ರೈತರು ತಾವು ಖರೀದಿಸಿದ ರಸಗೊಬ್ಬರಕ್ಕೆ ಪ್ರತಿಯಾಗಿ ರಸೀದಿ ಪಡೆಯುವಂತೆ ಸಲಹೆ ನೀಡಿದರು.
ನಕಲಿ ಬೀಜ- ತಂಡ ರಚನೆ: ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಪತ್ತೆಗೆ ಇಬ್ಬರು ಅಧಿಕಾರಿಗಳ ತಂಡ ರಚಿಸಲಾಗಿದೆ. ಈಗಾಗಲೇ ಐದು ಕಡೆ ನಕಲಿ ಹತ್ತಿ ಬೀಜ ಮಾರಾಟದ ಪ್ರಕರಣ ಪತ್ತೆ ಹಚ್ಚಿ ಕೇಸ್ ದಾಖಲಿಸಲಾಗಿದೆ. ಕೃಷಿ ಇಲಾಖೆ ಸಿಬ್ಬಂದಿ ಕೊರತೆಯಿಂದಾಗಿ ಈ ನಿಟ್ಟಿನಲ್ಲಿ ಇಲಾಖೆ ತನಿಖಾ ತಂಡಕ್ಕೆ ಮತ್ತಷ್ಟು ನೇಮಕ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

