ರಾಯಚೂರು

ರೈತ ಸಂಘದಿಂದ ಪ್ರತಿಭಟನೆ

Published On :

ಕ.ಪ್ರ. ವಾರ್ತೆ, ರಾಯಚೂರು, ಜೂ.20
ಭೂಮಿಯ ವರ್ಗಾವಣೆಯ ಪ್ರಮಾಣ ಪತ್ರ, ಪಡಿತರ ಚೀಟಿ ಸೇರಿದಂತೆ ವಿವಿಧ ದಾಖಲೆಗಳನ್ನು ನೀಡುವಲ್ಲಿ ಸ್ಥಳೀಯ ತಹಸೀಲ್ದಾರ್ ಕಚೇರಿಯಲ್ಲಿ ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಗುರುವಾರ ಧರಣಿ ನಡೆಸಿದರು. ನಗರದ ತಹಸೀಲ್ದಾರ್ ಕಚೇರಿ ಎದುರು ಸಂಘದ ರಾಜ್ಯಾಧ್ಯಕ್ಷ ಚಾಮರಸ ಮಾಲಿಪಾಟೀಲ್ ಅವರ ನೇತೃತ್ವದಲ್ಲಿ ಧರಣಿ ನಡೆಸಿದ ಕಾರ್ಯಕರ್ತರು, ತಹಸೀಲ್ದಾರ್ ಮತ್ತು ನಾಡ ಕಚೇರಿಗಳಲ್ಲಿ ರೈತರು ಹಾಗೂ ವಿದ್ಯಾರ್ಥಿಗಳು ವಿವಿಧ ಪ್ರಮಾಣ ಪತ್ರ ಪಡೆಯಲು ಅಲೆದಾಡುವಂಥ ಸ್ಥಿತಿಯಿದೆ. ನಿಗದಿತ ಅವಧಿಯಲ್ಲಿ ಯಾವುದೇ ದಾಖಲೆಗಳು ದೊರೆಯುತ್ತಿಲ್ಲ ಎಂದು ಆರೋಪಿಸಿದರು.
ಹೋಟೆಲ್‌ಗಳಲ್ಲಿ ಪಡಿತರ ಚೀಟಿ ತಯಾರಿ: ಪಡಿತರ ಚೀಟಿ ವಿತರಣೆಗಾಗಿ ಭಾವಚಿತ್ರ ತೆಗೆಯುವ ಕಾರ್ಯ ತೀರಾ ವಿಳಂಬವಾಗಿ ಸಾಗುತ್ತಿದೆ. ಹಳೆಯ ಪಡಿತರ ಚೀಟಿಗಳು ಈಗಾಗಲೇ ರದ್ದಾಗಿವೆ. ಗ್ರಾಪಂ ಪಿಡಿಒಗಳು ಗ್ರಾಮೀಣ ಭಾಗದಲ್ಲಿನ ತಮ್ಮ ಆಪ್ತರ ಪಡಿತರ ಚೀಟಿಗಳನ್ನು ರಾಯಚೂರು ನಗರದ ಹೊಟೇಲ್‌ಗಳಲ್ಲಿ ತಯಾರಿಸುತ್ತಿದ್ದಾರೆಂದು ಆರೋಪಿಸಿದರು.
ರೈತರು, ಕೃಷಿ ಕೂಲಿಕಾರರು ಕೃಷಿ ಕಾರ್ಯ ಕೈಬಿಟ್ಟು ಪಡಿತರ ಚೀಟಿ ಪಡೆಯಲು ಕಚೇರಿಗಳಿಗೆ ಅಲೆದಾಡುವಂತಾಗಿದೆ. ವಾರದಲ್ಲಿಯೇ ಈ ಕಾರ್ಯ ಪೂರ್ಣಗೊಳಿಸಬೇಕು. ಸದ್ಯ ಪಡಿತರ ಚೀಟಿಗಳು ರದ್ದಾಗಿರುವುದರಿಂದ ಗ್ರಾಮೀಣ ಭಾಗದಲ್ಲಿ ಬಡವರಿಗೆ ಪಡಿತರ ಆಹಾರ ಧಾನ್ಯ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ ಎಂದು ದೂರಿದರು.
6 ತಿಂಗಳಿಂದ ಮಾಸಾಶನವಿಲ್ಲ: ವಿಧವಾ ವೇತನ, ಅಂಗವಿಕಲರ ಮಾಸಾಶನ ಕಳೆದ 6 ತಿಂಗಳಿಂದ ಪಾವತಿಯಾಗುತ್ತಿಲ್ಲ. ಈ ಬಗ್ಗೆ ತಹಸೀಲ್ದಾರರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ನಿಟ್ಟಿನಲ್ಲಿ ಕೂಡಲೇ ತಾಲೂಕು ಆಡಳಿತ ಎಲ್ಲ ಬೇಡಿಕೆಗಳನ್ನು ಈಡೇರಿಸಿ ವ್ಯವಸ್ಥೆ ಸರಿಪಡಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂಘಟನೆಯಿಂದ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಸಂಘಟನೆಯ ಪ್ರಮುಖರಾದ ಅಮರಣ್ಣ ಗುಡಿಹಾಳ, ಲಕ್ಷ್ಮಣಗೌಡ ಕಡಗಂದೊಡ್ಡಿ, ನರಸಿಂಗರಾವ್ ಕುಲಕರ್ಣಿ, ಬೂದಯ್ಯಸ್ವಾಮಿ, ಜಯಪ್ಪಸ್ವಾಮಿ ಉಡಮಗಲ್, ವೆಂಕಟೇಶ್, ನರಸಪ್ಪ, ತಿಕ್ಕಯ್ಯ, ಮಾಸದೊಡ್ಡಿ ನರಸಣ್ಣ ಸೇರಿದಂತೆ ಅನೇಕರಿದ್ದರು.
--
ನೋಟ್‌ಬುಕ್ ವಿತರಣೆ
ಸಿಂಧನೂರು: ನಗರದ ಮಹೆಬೂಬಿಯ ಕಾಲೋನಿ, ಬಡಿಬೇಸ್ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಬಡ ಮಕ್ಕಳಿಗೆ ಸ್ಟೂಟೆಂಡ್ ಇಸ್ಲಾಮಿಕ್ ಆರ್ಗನೈಸೇಷನ್(ಎಸ್‌ಐಒ) ಸಿಂಧನೂರು ಘಟಕದ ವತಿಯಿಂದ ಉಚಿತವಾಗಿ ಸ್ಕೂಲ್ ಬ್ಯಾಗ್ ಮತ್ತು ನೋಟ್ ಬುಕ್‌ಗಳನ್ನು ಸುಮಾರು 76 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಘಟನೆ ಅಧ್ಯಕ್ಷ ಮಹ್ಮದ್ ಅಲಿ ಮುರ್ತುಜಾ, ಕಾರ್ಯದರ್ಶಿ ಜಾಕೀರ್ ಹುಸೇನ್, ಕ್ಯಾಂಪಸ್ ಕಾರ್ಯದರ್ಶಿ ಸೈಯ್ಯದ್ ತನ್ವೀರ್, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ವಸೀಮ್ ಅಹ್ಮದ್ ಹಾಗೂ ಸದ್ಯಸರು ಶಾಹಿದ್ ಹುಸೇನ್, ಅಶ್ವಾಕ್ ಅಹ್ಮದ್, ಇಸ್ಮಾಯಿಲ್, ಮೀಘದಾದ್, ಮುಜ್ಜಮಿಲ್ ಮತ್ತು ಶಾಲೆಯ ಮುಖ್ಯ ಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.