ವಸತಿ ಸೌಲಭ್ಯ; ಅರ್ಜಿ ಆಹ್ವಾನ
ರಾಯಚೂರು: ಜಿಲ್ಲೆಯ ದೇವದಾಸಿ ಮಹಿಳೆಯರಿಗೆ ವಸತಿ ಸೌಲಭ್ಯ ಕಲ್ಪಿಸಲು ಪ್ರಸಕ್ತ ಸಾಲಿನಲ್ಲಿ ವಿಶೇಷ ಅಭಿವೃದ್ಧಿ ಮತ್ತು ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲೂಕುಗಳ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ದೇವದಾಸಿ ಪುನರ್ವಸತಿ ಯೋಜನೆಯಡಿ ತಾಲೂಕು ಮಟ್ಟದ ಸಿಡಿಪಿಒ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಜನಾ ಅನುಷ್ಠಾನಾಧಿಕಾರಿಗಳಿಂದ ಅರ್ಜಿ ಉಚಿತವಾಗಿ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಜು.25ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಯೋಜನಾಧಿಕಾರಿಗಳು, ದೇವದಾಸಿ ಪುನರ್ವಸತಿ ಯೊಜನೆ, ರಾಯಚೂರು ಇವರ ಮೊಬೈಲ್- 98806 54079 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ಸಂಚಾಲಕರ ವಿರುದ್ಧ ಕ್ರಮಕ್ಕೆ ಆಗ್ರಹ
ಸಿಂಧನೂರು: ಪಡಿತರ ದವಸ- ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿ ಪಡಿತರ ಚೀಟಿದಾರರಿಗೆ ವಂಚನೆ ಮಾಡುತ್ತಿರುವ ಖದರೀಯ ಕಾಲೋನಿಯ ಸರ್ಕಾರಿ ನ್ಯಾಯಬೆಲೆ ಅಂಗಡಿ ಸಂಚಾಲಕ ಮಹ್ಮದ್ ಸಲೀಮ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖಂಡ ಉಮರ್ಪಾಷ ಎತ್ಮಾರಿ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನ್ಯಾಯಬೆಲೆ ಅಂಗಡಿ ಸಂಚಾಲಕ ಮಹ್ಮದ್ ಸಲೀಮ್ ಅವರು ತನ್ನ ಅಂಗಡಿ ವ್ಯಾಪ್ತಿಯಲ್ಲಿ ಒಟ್ಟು 1,090 ಪಡಿತರ ಚೀಟಿಗಳಿದ್ದು ಇದರಲ್ಲಿ ಸುಮಾರು 150ರಿಂದ 200ರವರೆಗೆ ನಕಲಿ ಪಡಿತರ ಚೀಟಿಗಳನ್ನು ಸೃಷ್ಟಿಸಿ ಆ ಚೀಟಿಗಳಿಗೆ ಬರುವ ಪ್ರತಿ ತಿಂಗಳ ದಾಸ್ತಾನನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.ಸರ್ಕಾರದ ಆದೇಶದಂತೆ ವಾರದಲ್ಲಿ 6 ದಿನ ನ್ಯಾಯಬೆಲೆ ಅಂಗಡಿ ತೆಗೆದಿರಬೇಕು. ಆದರೆ ಸಲೀಮ್ ಅವರು ತಿಂಗಳಲ್ಲಿ ಕೇವಲ 3 ಬಾರಿ ಮಾತ್ರ ತೆರೆಯುತ್ತಾರೆ. ಆದ್ದರಿಂದ ನ್ಯಾಯಬೆಲೆ ಅಂಗಡಿಯನ್ನು ಬೇರೆಯವರಿಗೆ ಹಸ್ತಾಂತರಿಸುವಂತೆ ಆಗ್ರಹಿಸಿ 20 ದಿನಗಳ ಹಿಂದೆ ಸ್ಥಳೀಯ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಈ ಅಧಿಕಾರಿ ಸಲೀಮನೊಂದಿಗೆ ಶಾಮೀಲಾಗಿ ಯಾವುದೇ ಕ್ರಮ ಜರುಗಿಸುತ್ತಿಲ್ಲ. ತಹಸೀಲ್ದಾರರು ಈ ಬಗ್ಗೆ ಪರಿಶೀಲಿಸಿ ಆಹಾರ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಯನ್ನು ಬೇರೆಯವರಿಗೆ ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಇಲಾಖೆಯ ಸಚಿವರಿಗೆ, ಮುಖ್ಯಮಂತ್ರಿಗೆ ದೂರು ಸಲ್ಲಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ವಸತಿ ನಿಲಯ ಪ್ರವೇಶಕ್ಕೆ ಅರ್ಜಿ
ರಾಯಚೂರು: ತಾಲೂಕಿನ ಸ್ಥಳೀಯ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಇಲಾಖೆಗಳ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಗಳಿಗೆ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಕರೆಯಲಾಗಿದೆ.
ಮೆಟ್ರಿಕ್ ನಂತರದ ವಸತಿ ನಿಲಯಗಳಾದ ಆಶಾಪುರ ರಸ್ತೆ, ರಾಯಚೂರು, ಮೆಟ್ರಿಕ್ ನಂತರದ ಅಲ್ಪಸಂಖ್ಯಾತರ ಬಾಲಕರ ವಸತಿ ನಿಲಯ ಯರಗೇರಾ ಲೇಔಟ್, ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಅರಬ್ ಮೊಹಲ್ಲಾ, ಅಲ್ಪ ಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಅರಬ್ ಮೊಹಲ್ಲಾ, ಮತ್ತು ಸಾರ್ವಜನಿಕ ಮಾದರಿ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಪಶ್ಚಿಮ ಪೋಲೀಸ್ ಸ್ಟೇಷನ್ ಎದುರುಗಡೆ ರಾಯಚೂರು ಈ ವಸತಿ ನಿಲಯಗಳಿಗೆ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಪಿಯು ಮತ್ತು ಡಿಗ್ರಿ ಕಾಲೇಜುಗಳ ವಿದ್ಯಾರ್ಥಿಗಳು ಜು.15ರೊಳಗೆ ಅರ್ಜಿ ಸಲ್ಲಿಸಬಹುದು. ಅಪೂರ್ಣ ಹಾಗೂ ತಡವಾಗಿ ಬಂದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ವಿಸ್ತರಣಾಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಯಚೂರು ಇವರು ತಿಳಿಸಿದ್ದಾರೆ.
ಕಲುಷಿತ ನೀರು ಪೂರೈಕೆ: ಆರೋಪ
ಮಸ್ಕಿ: ಮಸ್ಕಿ ಗ್ರಾಪಂ ವ್ಯಾಪ್ತಿಯ ಸಮೀಪದ ಮಸ್ಕಿ ತಾಂಡಾದಲ್ಲಿ ಕಲುಷಿತ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ತಾಂಡಾದ ಬಂಜಾರಾ ಸಮಾಜದ ಮುಖಂಡರು ಹಾಗೂ ಜಯ ಕರ್ನಾಟಕ ಸಂಘಟನೆ ಆರೋಪಿಸಿದೆ. ಕುಡಿಯುವ ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಹಿನ್ನೆಲೆ ಗ್ರಾಮಸ್ಥರಿಗೆ ಪೂರೈಕೆಯಾಗುತ್ತಿರುವ ನೀರು ದುರ್ವಾಸನೆ ಬೀರುತ್ತಿದ್ದು, ಸಂಬಂಧಿಸಿದವರು ಇತ್ತ ಗಮನಹರಿಸಿಲ್ಲ. ಇದರಿಂದ ಜನತೆಯಲ್ಲಿ ರೋಗ ಹರಡುವಿಕೆಯ ಭೀತಿ ಮನೆ ಮಾಡಿದೆ ಎಂದು ಆರೋಪಿಸಿದ್ದಾರೆ.
ಸರ್ಕಾರ ನೀರಿಗಾಗಿ ಸಾಕಷ್ಟು ಮೊತ್ತದ ಹಣವನ್ನು ಖರ್ಚು ಮಾಡಿದರೂ ಶುದ್ಧ ಕುಡಿಯುವ ನೀರು ಒದಗಿಸುವಲ್ಲಿ ಸ್ಥಳೀಯ ಆಡಳಿತ ವಿಫಲವಾಗಿದೆ. ಗ್ರಾಪಂ ಆಡಳಿತ ತಾರತಮ್ಯ ತೋರುತ್ತಿದೆ ಎಂದು ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಯಮನೂರು ಒಡೆಯರ್, ಕಾರ್ಯಾಧ್ಯಕ್ಷ ಕಿರಣ ಮುರಾರಿ, ದಲಿತ ಮುಖಂಡರಾದ ಡಿ. ಶರಣಪ್ಪ, ಗ್ಯಾನಪ್ಪ, ಮಲ್ಲಯ್ಯ ಬಾಂಬೆ, ಬಂಜಾರ ಸಮಾಜದ ಮುಖಂಡರಾದ ಕ್ರಿಷ್ಟಪ್ಪ, ದೇವಣ್ಣ ಜಾಧವ್, ಲೋಕೇಶ, ಶಾಂತಮ್ಮ, ವೆಂಕಟೇಶ ಕೇಶಪ್ಪ ಆರೋಪಿಸಿದ್ದಾರೆ.
ಡೆಂಘೀ; ಜಾಗೃತಿ ಮೂಡಿಸಲು ಸೂಚನೆ
ರಾಯಚೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಡೆಂಘೀ ಜ್ವರ ತಡೆಯುವ ನಿಟ್ಟಿನಲ್ಲಿ ಜನರಲ್ಲಿ ರೋಗ ತಡೆಗೆ ಜಾಗೃತಿ ಮೂಡಿಸುವಂತೆ ತಹಸೀಲ್ದಾರ್ ಎನ್.ಐ. ಶಹಾನೂರು ಹೇಳಿದರು.
ಅವರು ಇತ್ತೀಚೆಗೆ ನಗರದ ಪ್ರವಾಸಿ ಮಂದಿರದಲ್ಲಿ ಡೆಂಘೀ ಜ್ವರ ಕುರಿತ ಮುಂಜಾಗೃತಾ ಕ್ರಮಗಳ ಕುರಿತು ಆಯೋಜಿಸಿದ್ದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕರು ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿಯ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಈ ರೋಗದ ಬಗ್ಗೆ ಅರಿವು ಮೂಡಿಸುತ್ತ ಸೊಳ್ಳೆ ಉತ್ಪತ್ತಿಯ ತಾಣಗಳ ಬಗ್ಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಪ್ರತಿಯೊಬ್ಬರೂ ಸಹಕರಿಸುವಂತೆ ಅವರು ಮನವಿ ಮಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಕೊಲೆ ಆರೋಪಿಗಳಿಗೆ ಜೀವಾವಧಿ
ಗುಲ್ಬರ್ಗ: ಸೇಡಂ ತಾಲೂಕಿನ ಮುಧೋಳ ಗ್ರಾಮದ ಅಂಜಲಪ್ಪ ತಂದೆ ಹಣಮಪ್ಪ ಮತ್ತು ಅಶೋಕ ತಂದೆ ಅಂಜಲಪ್ಪ ಇವರು ಶರಣಪ್ಪನ ಕೊಲೆ ಮಾಡಿರುವ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 1ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ಬಿ. ಗುಂಜಗಾವಿ ಅವರು ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಬ್ಬರಿಗೂ ತಲಾ 5 ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ.
ಮಾರಾಮಾರಿ: 6 ಮಂದಿಗೆ ಗಾಯ
ಸಿಂಧನೂರು: ತಾಲೂಕಿನ ಸಾಲಗುಂದಾ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಾಮಾರಿ ನಡೆದಿದ್ದು ನಜೀರ್ ಸಾಬ, ಖಾಜಾಸಾಬ, ನಬೀಸಾಬ ಸೇರಿದಂತೆ ಆರು ಜನರಿಗೆ ಗಾಯಗಳಾದ ಘಟನೆ ನಡೆದಿದೆ. ಹುಸೇನಸಾಬ ಎಂಬವರಿಂದ ಗರೀಬ ಸಾಬ ಎನ್ನುವವರು 40 ಸಾವಿರಕ್ಕೆ ನಿವೇಶನ ಖರೀದಿಸಿದ್ದು ಅದನ್ನು ನೋಂದಣಿ ಮಾಡಿಸಿಕೊಂಡಿರಲಿಲ್ಲ. ತದನಂತರ ಹುಸೇನಸಾಬ ನಿವೇಶನ ಕೊಡದೆ, ನಿಮ್ಮ ಹಣ ತೆಗೆದುಕೊಳ್ಳಿ ಎಂದು ಜಿಲಾನಿ ಎಂಬವರ ಕೈಯಲ್ಲಿ ಹಣ ವಾಪಸ್ ಕೊಟ್ಟಿದ್ದಾನೆ. ಮುಂಚೆ ಕೊಟ್ಟ ಹಣದಲ್ಲಿ ಇನ್ನೂ 5 ಸಾವಿರ ಕೊಟ್ಟಿಲ್ಲವೆಂದು ಗರೀಬ ಸಾಬ ಕೇಳಿದ್ದಲ್ಲದೆ, ಯಾರದೋ ಹತ್ತಿರ ತನ್ನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಹುಸೇನಸಾಬ ಮೌಲಾಸಾಬ, ಶೇಕ್ಷಾವಲಿ, ಮುಸ್ತಾಫ ಮತ್ತಿತರರು ಸೇರಿ ಆತನನ್ನು ಥಳಿಸಿದ್ದಾರೆ. ಹಾಗೆಯೇ ಗರೀಬಸಾಬ ಗುಂಪಿನವರು ಹುಸೇನಸಾಬ ಗುಂಪಿನ ಮೇಲೆಯೂ ಹಲ್ಲೆ ಮಾಡಿದ್ದಾರೆಂದು ತಿಳಿದು ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಂಜಾನ್, ಆಲಂಪಾಷ, ಬೀಬಿ ಖಾದರಸಾಬ, ಶೇಕ್ಷಾವಲಿ, ರಂಜಾನ್ ಅವರನ್ನು ಗ್ರಾಮೀಣ ಠಾಣೆ ಪಿಎಸ್ಐ ಎಸ್.ಎನ್. ಪಾಟೀಲ್ ಅವರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಲ್ಲೆಗೊಳಗಾದ ಗಾಯಾಳುಗಳು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೈಕ್ ಮೇಲಿಂದ ಬಿದ್ದು ವ್ಯಕ್ತಿ ಸಾವು
ರಾಯಚೂರು: ದೇವದುರ್ಗ ಪಟ್ಟಣದ ಹೊರವಲಯದಲ್ಲಿ ಬೈಕ್ನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ವೀರೇಶ್ ಎಂದು ಗುರುತಿಸಲಾಗಿದೆ. ಈತ ಬೈಕ್ನಲ್ಲಿ ಸಿರವಾರಕ್ಕೆ ತೆರಳಿ ದೇವದುರ್ಗಕ್ಕೆ ಮರಳುತ್ತಿದ್ದ ವೇಳೆ ರಸ್ತೆಯಲ್ಲಿ ಎತ್ತು ಅಡ್ಡ ಬಂದಿದ್ದರಿಂದ ಅದರಿಂದ ಪಾರಾಗಲು ಬ್ರೇಕ್ ಹಾಕಿದ್ದು ಆಯತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡಿದ್ದಾನೆ. ದೇವದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವದುರ್ಗ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಡಿಕ್ಕಿ: ಸವಾರ ಸಾವು
ರಾಯಚೂರು: ಮಾನವಿ ತಾಲೂಕಿನ ನೀರಮಾನವಿ ಬಳಿ ಶುಕ್ರವಾರ ಸಂಜೆ ಬೈಕ್ಗೆ ಸರ್ಕಾರಿ ಬಸ್ ಡಿಕ್ಕಿಯಾಗಿ ಸವಾರ ಮೃತಪಟ್ಟಿದ್ದಾನೆ. ಮೃತನನ್ನು ಯಲ್ಲಪ್ಪ(37) ಎಂದು ಗುರುತಿಸಲಾಗಿದೆ. ಈತ ಮಾನವಿಯತ್ತ ಧಾವಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬಂದ ಮಂತ್ರಾಲಯಕ್ಕೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿಯಾಗಿದ್ದರಿಂದ ಯಲ್ಲಪ್ಪ ಸ್ಥಳದಲ್ಲಿಯೇ ಮೃತನಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

