ಸಂಕ್ಷಿಪ್ತ ಸುದ್ದಿ
ಇಂದು ಪ್ರಗತಿ ಕಾರ್ಯಾಗಾರ
ರಾಯಚೂರು: ಮಕ್ಕಳು ಮತ್ತು ಆರೋಗ್ಯ ಕ್ಷೇತ್ರದಲ್ಲಿ 2015ರ ನಂತರ ಸಹಸ್ರಮಾನದ ಅಭಿವೃದ್ಧಿಯ ಗುರಿಗಳು ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಜು.1ರಂದು ನಗರದಲ್ಲಿ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 11ಕ್ಕೆ ನಗರದ ರಾಯಚೂರು ಕೃಷಿ ವಿವಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಪಂ ಸಿಇಒ ಜ್ಞಾನಪ್ರಕಾಶ್, ಜಿಲ್ಲಾ ಆರೋಗ್ಯಾಧಿ ಕಾರಿ ಡಾ. ವೆಂಕಟೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ ಪಾಲ್ಗೊಳ್ಳವರು.ಸಂಪನ್ಮೂಲ ವ್ಯಕ್ತಿಗಳಾಗಿ ಚೈಲ್ಡ್ ರೈಟ್ಸ್ ಟ್ರಸ್ಟ್ನ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮಾ, ಬೆಡ್ಸ್ ಸಂಸ್ಥೆಯ ನಿರ್ದೇಶಕ ಫಾದರ್ ಜೋಯ್ ನೆಡುಂಪಾರಂಬಿಲ್, ಯುನಿಸೆಫ್ನ ಡಾ.ಬ್ರಿಜೇಶ್, ಡಾ.ಎಂ.ಆರ್. ಕಮ್ಮಾರ್, ಸ್ನೇಹಜೀವಿ ಸಂಸ್ಥೆಯ ಕಾರ್ಯದರ್ಶಿ ಅಂಬಣ್ಣ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದೆ.
ಇಂದು ಸಂಜೆ ಪತ್ರಿಕೆ ಬಿಡುಗಡೆ
ರಾಯಚೂರು: ನಗರದ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜು.1ರಂದು ಪತ್ರಿಕಾ ದಿನಾಚರಣೆ ಮತ್ತು ಸಂಜೆ ದಿನ ಪತ್ರಿಕೆ ಬೆಂಕಿ ಬೆಳಕು ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ.ಅಂದು ಬೆಳಗ್ಗೆ 10.30ಕ್ಕೆ ನಡೆಯುವ ಸಮಾರಂಭವನ್ನು ನಿಡುಮಾಮಿಡಿ ಮಠದ ಶ್ರೀಚನ್ನಮಲ್ಲ ವೀರಭದ್ರ ಸ್ವಾಮೀಜಿ ಉದ್ಘಾಟಿಸಿ ಪತ್ರಿಕೆ ಬಿಡುಗಡೆಗೊಳಿಸುವರು. ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಸುರೇಂದ್ರಾಚಾರ್ಯ ಕೊರ್ತಕುಂದಾ ವಹಿಸಲಿದ್ದಾರೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ವಾರ್ತಾ ಇಲಾಖೆ ನಿರ್ದೇಶಕ ವಿಶುಕುಮಾರ್, ರಮೇಶಚಂದ್ರ ದತ್ತ, ಹಿರಿಯ ಪತ್ರಕರ್ತರಾದ ಕೆ. ರಾಮಕೃಷ್ಣ, ಮೃತ್ಯುಂಜಯ ಕಪಗಲ್, ಜಿಲ್ಲಾ ವಾರ್ತಾಧಿಕಾರಿ ಕನುಮಪ್ಪ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.ಪತ್ರಿಕಾ ವಿತರಕರಾದ ಹನುಮಂತಪ್ಪ, ಮುದ್ರಕ ಮಹೆಬೂಬ್ ಹುಸೇನ್ ಅವರನ್ನು ಸನ್ಮಾನಿಸಲಾಗುತ್ತದೆ ಎಂದು ಬೆಂಕಿ ಬೆಳಕು ಪತ್ರಿಕಾ ಬಳಗ ತಿಳಿಸಿದೆ.
ಉದ್ಘಾಟನೆ
ರಾಯಚೂರು: ತಾಲೂಕಿನ ಬುಡದಿನ್ನಿ ಗ್ರಾಮದಲ್ಲಿ ಈಚೇಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಎಸ್ಟಿ ಕಂಪನಿಯಿಂದ ನಿರ್ಮಿಸಿದ ಶಾಲಾ ಕೊಠಡಿಯ ಉದ್ಘಾಟನೆ ನೆರವೇರಿತು.ವಿಎಸ್ಟಿ ಕಂಪನಿಯ ಉಪಾಧ್ಯಕ್ಷ ಲಕ್ಷ್ಮಿನರಸಿಂಹಯ್ಯ ಶಾಲಾ ಕೊಠಡಿ ಉದ್ಘಾಟಿಸಿದರು.
ಬೆಂಕಿ ಆಕಸ್ಮಿಕ: ಮಹಿಳೆ ಸಾವು
ರಾಯಚೂರು: ನಗರದ ನಿಜಲಿಂಗಪ್ಪ ಕಾಲನಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ಮಹಿಳೆ ಸಾವಿಗೀಡಗಿದ್ದಾಳೆ.ಮೃತಳನ್ನು ಪುಷ್ಪಾವತಿ(32) ಎಂದು ಗುರುತಿಸಲಾಗಿದೆ. ಈಕೆ ಮನೆಯಲ್ಲಿ ಅಡುಗೆ ಮಾಡಲು ಸ್ಟೌವ್ ಹಚ್ಚುತ್ತಿದ್ದ ವೇಳೆ ಆಕಸ್ಮಿಕ ಬೆಂಕಿ ತಗುಲಿ ತೀವ್ರ ಸುಟ್ಟ ಗಾಯಗಳಿಂದ ಬಳಲಿದಾಗ ಬಳ್ಳಾರಿಯ ವಿಮ್ಸ್ಗೆ ಸೇರಿಸಿದ್ದು, ಚಿಕಿತ್ಸೆ ಫಲಿಸದೇ ಮೃತ ಪಟ್ಟಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.ಈ ಬಗ್ಗೆ ನಗರದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಿಂಧನೂರು; ಯುವಕನ ಆತ್ಮಹತ್ಯೆ
ರಾಯಚೂರು: ಸಿಂಧನೂರು ತಾಲೂಕಿನ ಗೀತಾ ಕ್ಯಾಂಪಿನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಮೃತನನ್ನು ಗ್ರಾಮದ ಸಾಯಿಕುಮಾರ್(18) ಎಂದು ಗುರುತಿಸಲಾಗಿದೆ. ಈತ ತನ್ನ ತಂದೆ ಆಟೋ ಖರೀದಿಗೆ ನಿರಾಕರಿಸಿದ್ದರಿಂದ ಬೇಸರಗೊಂಡು ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು, ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅಕ್ರಮ ಹೆಂಡ ಮಾರಾಟ ತಡೆಗೆ ಆಗ್ರಹ
ರಾಯಚೂರು: ನಗರದ ವಿವಿಧೆಡೆ ಕಲಬೆರಕೆ ಹೆಂಡವನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದ್ದು, ಅದರ ತಡೆಗೆ ಕ್ರಮ ಕೈಗೊಳ್ಳದ ಅಬಕಾರಿ ನಿರೀಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿವಿಧ ಕಾಲನಿಗಳ ನಿವಾಸಿಗಳು ಒತ್ತಾಯಿಸಿದ್ದಾರೆ. ಈ ಕುರಿತು ಅಬಕಾರಿ ಇಲಾಖೆಯ ಉಪ ಆಯುಕ್ತರಿಗೆ ಮನವಿ ಸಲ್ಲಿಸಿ, ನಗರದ ಜಲಾಲ್ ನಗರ, ಮುನ್ನೂರುವಾಡಿ, ಸಿಯಾತಲಾಬ್, ಎಲ್ ಬಿಎಸ್ ನಗರ, ತಿಮ್ಮಾಪೂರ ಪೇಟೆ ಸೇರಿ ವಿವಿಧೆಡೆ ಕಲಬೆರಕೆ ಹೆಂಡ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಅನೇಕ ಸಲ ಅಬಕಾರಿ ಅಧಿಕಾರಿಗಳಿಗೆ ದೂರಿತ್ತರೂ ಪ್ರಯೋಜನವಾಗಿಲ್ಲ. ಅವ್ಯಾಹತವಾಗಿ ಸಾಗುತ್ತಿರುವ ಅಕ್ರಮ ದಂಧೆಗೆ ಕಡಿವಾಣ ಹಾಕುವ ಮೂಲಕ ಸಮಸ್ಯೆಗೆ ಪರಿಹಾರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪ್ರವರ್ಗ 2ಎಗೆ ಸೇರಿಸಲು ಒತ್ತಾಯ
ರಾಯಚೂರು: ಲಿಂಗಾಯತ ವೀರಶೈವ ಹಡಪದ, ಹಡಪದ ಮತ್ತು ಸಮಾನಾಂತರ ಹೆಸರುಗಳಿಂದ ಕರೆಯಲ್ಪಡುವ ಜಾತಿಯನ್ನು ಪ್ರವರ್ಗ 2ಎ ಕ್ಕೆ ಸೇರಿಸುವಂತೆ ಜಿಲ್ಲಾ ಹಡಪದ ಸಮಾಜ ಸೇವಾ ಸಂಘ ಆಗ್ರಹಿಸಿದೆ.ಈ ಕುರಿತು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಈಚೇಗೆ ಮನವಿ ಸಲ್ಲಿಸಿ, ಹಜಾಮ ಎಂಬ ಪದದ ಬಳಕೆ ನಿಷೇಧಿಸಬೇಕು. ಬಳಸಿದವರಿಗೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆ ತರಬೇಕು. ಹಡಪದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಪೂರಕವಾಗುವಂತೆ ಆದೇಶ ಜಾರಿ ಮಾಡಬೇಕೆಂದು ಒತ್ತಾಯಿಸಿದರು.ಡಿ.ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಡಿ ಆಯ್ಕೆ ಸಮಿತಿಯಲ್ಲಿ ಹಡಪದ ಸಮಾಜದವರನ್ನು ಸದಸ್ಯರಾಗಿ ನೇಮಿಸಲು ಆದೇಶಿಸಬೇಕು. ಹಡಪದ ಸಮಾಜದ ಅಭಿವೃದ್ಧಿಗೆ ಪ್ರತ್ಯೇಕ ಅನುದಾನ ಒದಗಿಸಬೇಕು. ರಾಜಕೀಯವಾಗಿ ಸಮಾಜದವರನ್ನು ಮೇಲೆತ್ತಲು ಸೂಕ್ತಸ್ಥಾನಮಾನ ನೀಡಬೇಕೆಂದು ಆಗ್ರಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

