ಮದ್ಯ ಸಾಗಣೆ ವಾಹನ ಜಪ್ತಿ
ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.5
ನಗರ ಮತ್ತು ಸ್ಥಳೀಯ ಸಂಸ್ಥೆಯ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಜಿಲ್ಲೆಯಲ್ಲಿ ಮತದಾರರಿಗೆ ಹಂಚಲು ಅಕ್ರಮ ಮದ್ಯದ ದಾಸ್ತಾನು, ಸಾಗಣೆ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಅಬಕಾರಿ ಇಲಾಖೆಯ ಸಿಬ್ಬಂದಿ ಟಂಟಂನಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯವನ್ನು ಪತ್ತೆ ಹಚ್ಚಿ ಜಪ್ತಿ ಮಾಡಿದ್ದಾರೆ.
ನಗರದ ರಾಂಪುರ ಪ್ರದೇಶದಲ್ಲಿ ಟಂಟಂ ಸಾಗುತ್ತಿದ್ದಾಗ ಅಬಕಾರಿ ದಳದವರು ತಪಾಸಣೆಗೆಂದು ತಡೆದಿದ್ದಾರೆ. ಈ ವೇಳೆ ಟಂಟಂ ವಾಹನದ ಚಾಲಕ ವಾಹನ ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ವೇಳೆ ವಾಹನ ತಪಾಸಣೆ ನಡೆಸಿದ ಅಬಕಾರಿ ದಳಕ್ಕೆ ಟಂಟಂನಲ್ಲಿ 1.50 ಲಕ್ಷ ಮೌಲ್ಯದ ವಿವಿಧ ಕಂಪನಿಗಳ ಮದ್ಯವಿರುವುದು ಪತ್ತೆಯಾಗಿದೆ. ಈ ಕುರಿತು ಅಬಕಾರಿ ದಳದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೀತಿ ಸಂಹಿತೆ ಉಲ್ಲಂಘನೆ: ಈ ಮಧ್ಯೆ ನಗರದಲ್ಲಿ ನೀತಿ ಸಂಹಿತೆಯ ಪ್ರಕರಣಗಳು ಮುಂದುವರಿದಿದ್ದು, ಮತದಾರರ ಓಲೈಕೆಗೆ ರಾಜಕೀಯ ಪಕ್ಷಗಳು ಮೇಲಾಟದಲ್ಲಿ ತೊಡಗಿವೆ. ನಗರದ ವಿವಿಧೆಡೆ ಒಟ್ಟು ಎರಡು ನೀತಿ ಸಂಹಿತೆಯ ಉಲ್ಲಂಘನೆಯ ಪ್ರಕರಣಗಳು ದಾಖಲಾಗಿವೆ.
ಸೋಮವಾರ ರಾತ್ರಿ 11ರ ಸುಮಾರಿಗೆ ನಗರದ ಹರಿಜನವಾಡದಲ್ಲಿ ಮತದಾರರಿಗೆ ಆಮಿಷವೊಡ್ಡಲು ಸೇರಿದ್ದ ಜನರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಬೀಸಿದ್ದಾರೆಂದು ಮೂಲಗಳು ತಿಳಿಸಿವೆ.
ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲು: ಗಂಗಾಪರಮೇಶ್ವರಿ ಲೇಔಟ್ನಲ್ಲಿ 50 ಸಾವಿರ ಬೆಲೆಯ ಅಕ್ರಮ ಮದ್ಯ ಪತ್ತೆಯಾದರೆ, 22ನೇ ವಾರ್ಡಿನ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿಯು ಮಕ್ಕಳನ್ನು ಪ್ರಚಾರಕ್ಕೆ ಬಳಸಿದ ಬಗ್ಗೆ ಜಿಪಂ ಸಿಇಒ ಜ್ಞಾನಪ್ರಕಾಶ್ ನೀಡಿದ ದೂರಿನ ಹಿನ್ನೆಲೆ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
ಅದೇ ರೀತಿ ನಗರದಲ್ಲಿ ಮಹಾಲಿಂಗ ಎಂಬ ಅಭ್ಯರ್ಥಿಯು ಮತದಾರರಿಗೆ ಭೋಜನಕೂಟ ಏರ್ಪಡಿಸಿದ ಬಗ್ಗೆ ದೂರು ಬಂದಿದ್ದರಿಂದ ನೀತಿ ಸಂಹಿತೆ ಪ್ರಕರಣ ದಾಖಲಿಸಲಾಗಿದೆ. ಒಂದೆಡೆ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ಜಿಲ್ಲಾದ್ಯಂತ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ವಿವಿಧ ಆಸೆ ಆಮಿಷಗಳನ್ನೊಡ್ಡುತ್ತಿದ್ದು, ಮನೆ ಮನೆ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

