ರಾಯಚೂರು

ಮತದಾನ ಪ್ರಕ್ರಿಯೆ ಗೊಂದಲ

Published On :

ಕನ್ನಡಪ್ರಭ ವಾರ್ತೆ, ರಾಯಚೂರು, ಮಾ.7
ಮತದಾರರ ಪಟ್ಟಿಯಿಂದ ಹೆಸರುಗಳ ನಾಪತ್ತೆ. ಗುರುತಿನ ಚೀಟಿಯಿದ್ದರೂ ಮತದಾನಕ್ಕೆ ದೊರೆಯದ ಅವಕಾಶ. ಆಕ್ರೋಶಗೊಂಡ ಮತದಾರರಿಂದ ಜಿಲ್ಲಾಧಿಕಾರಿಗೆ ದಿಗ್ಬಂಧನ. ಕೆಲಕಾಲ ಮತದಾನಕ್ಕೆ ಅಡಚಣೆ.
ಇನ್ನು ಪೊಲೀಸರೊಂದಿಗೆ ವಾಗ್ವಾದದಂಥ ಘಟನೆಗಳ ಹೊರತಾಗಿಯೂ ನಗರ ಸೇರಿದಂತೆ ಜಿಲ್ಲಾದ್ಯಂತ ಗುರುವಾರ ನಗರ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯ ಮತದಾನ ಶಾಂತಿಯುತವಾಗಿ ನಡೆದು ಶೇ.65.12ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ನಗರದಲ್ಲಿ ಬೆಳಗ್ಗೆಯಿಂದಲೇ ಅನೇಕ ಕಡೆ ಮತಗಟ್ಟೆಗಳ ಮುಂದೆ ಸಾಲುಗಟ್ಟಿ ಮತದಾರರು ಮತದಾನ ಮಾಡಿದರು. ಜಿಲ್ಲೆಯ ಇತರೆಡೆಯೂ ಮತದಾರರು ಸಾಲಾಗಿ ನಿಂತು ಮತ ಚಲಾಯಿಸಿದರು. ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಮತದಾನ ಶಾಂತಿಯುತವಾಗಿತ್ತು. ಆದರೆ ನಗರದಲ್ಲಿ ಮಾತ್ರ ಮತದಾನ ಪ್ರಕ್ರಿಯೆ ಗೊಂದಲದ ಗೂಡಾಗಿತ್ತು.
ಹೆಸರು ನಾಪತ್ತೆ, ಆಕ್ರೋಶ: ನಗರದ ಬಹುತೇಕ 35 ವಾರ್ಡುಗಳಲ್ಲಿ ಪ್ರತಿ ಮತಗಟ್ಟೆಯಲ್ಲಿ 500ರಿಂದ 700 ಮತದಾರರ ಹೆಸರುಗಳು ಮತದಾರರ ಯಾದಿಯಿಂದ ನಾಪತ್ತೆಯಾಗಿದ್ದು, ಮತದಾರರು ಮತ್ತು ವಿವಿಧ ರಾಜಕೀಯ ಪಕ್ಷಗಳಲ್ಲಿ ಆಕ್ರೋಶಕ್ಕೆ ದಾರಿ ಮಾಡಿತು.
ನಗರದ 13ನೇ ವಾರ್ಡ್ ಜಹೀರಾಬಾದ್‌ನ ಸರ್ಕಾರಿ ಶಾಲೆಯ ಮತಗಟ್ಟೆಯೊಂದರಲ್ಲಿ ಬೆಳಗ್ಗೆ ಮತದಾನಕ್ಕೆ ತೆರಳಿದ ನೂರಾರು ಜನರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದು ಗೊತ್ತಾಗಿದೆ. ಇದರಿಂದ ಬೇಸರಗೊಂಡ ಮತದಾರರು ಹಾಗೂ ಜೆಡಿಎಸ್ ಕಾರ್ಯಕರ್ತರು ಜೆಡಿಎಸ್ ಜಿಲ್ಲಾಧ್ಯಕ್ಷ ಮಹಾಂತೇಶ್ ಪಾಟೀಲ್ ಅತ್ತನೂರು, ಜಿಪಂ ಮಾಜಿ ಅಧ್ಯಕ್ಷೆ ಪದ್ಮಾವತಿ ಈರಣ್ಣ ಹಾಗೂ ಜೆಡಿಎಸ್ ಅಭ್ಯರ್ಥಿ ಎಂ. ಪವನಕುಮಾರ್ ನೇತೃತ್ವದಲ್ಲಿ ಪ್ರತಿಭಟನೆಗಿಳಿದರು. ಮತದಾನ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗೆ ದಿಗ್ಬಂಧನ: ಈ ವೇಳೆ ಕೆಲಕಾಲ ಮತಗಟ್ಟೆ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಕಾರ್ಯಕರ್ತರು ಮತದಾರರ ಪಟ್ಟಿಯಿಂದ ಉದ್ದೇಶಪೂರ್ವಕವಾಗಿ ಹೆಸರು ಕೈಬಿಡಲಾಗಿದೆ. ಹೀಗಾಗಿ ಮರು ಮತದಾನ ನಡೆಸುವಂತೆ ಒತ್ತಾಯಿಸಿದರು.
ಪ್ರತಿಭಟನಾ ನಿರತರು ಮತಗಟ್ಟೆ ಮುಂದೆ ಧರಣಿ ನಡೆಸಿದ್ದರಿಂದ ಕೆಲಕಾಲ ಉದ್ರಿಕ್ತ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರಿಗೆ ದಿಗ್ಬಂಧನ ಹಾಕಿ ಮರು ಮತದಾನಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ನಾಪತ್ತೆಯಾದ ಹೆಸರಿನ ಮತದಾರರಿಗೆ ಮತ ಚಲಾಯಿಸಲು ಅವಕಾಶ ನೀಡುವಂತೆಯೂ ಜಿಲ್ಲಾಧಿಕಾರಿಗೆ ಒತ್ತಾಯಿಸಿದರು. ಆದರೆ ಅದಕ್ಕೆ ಸಮ್ಮತಿಸದ ಜಿಲ್ಲಾಧಿಕಾರಿ ನಾಗರಾಜು, ಎಸ್ಪಿ ಎಸ್.ಬಿ. ಬಿಸನಳ್ಳಿ ಅವರೊಂದಿಗೆ ಅಲ್ಲಿಂದ ತೆರಳಿದರು.
ಮತದಾನ ಸ್ಥಗಿತ: ಇದೇ ವೇಳೆ ನಗರದ 16ನೇ ವಾರ್ಡ್‌ನ ಬಿಆರ್‌ಬಿ ಕಾಲೇಜು ಮತಗಟ್ಟೆಯಲ್ಲಿಯೂ ಮತದಾರರ ಪಟ್ಟಿಯಲ್ಲಿನ ಗೊಂದಲದಿಂದಾಗಿ ಕೆಲಹೊತ್ತು ಮತದಾನ ಸ್ಥಗಿತಗೊಂಡಿತು. ಮತದಾರರ ಹೆಸರು ನಾಪತ್ತೆಯಾಗಿದ್ದು, ಇಲ್ಲಿಯೂ ಸಹ ಗೊಂದಲಕ್ಕೆ ದಾರಿ ಮಾಡಿತು.
ಜಿಲ್ಲಾಡಳಿತ ಮತಗಟ್ಟೆ ಅಧಿಕಾರಿಗಳಿಗೆ ಒದಗಿಸಿದ ಮತಪಟ್ಟಿ ಹಾಗೂ ಪಕ್ಷಗಳು ಹೊಂದಿದ್ದ ಮತದಾರರ ಯಾದಿಗೂ ತಾಳೆಯಾಗದಿರುವುದು ಅನೇಕ ಕಡೆ ವಾಗ್ವಾದ ಮತ್ತು ಮಾತಿನ ಚಕಮಕಿಗೆ ಕಾರಣವಾಯಿತು. ನಗರದ 2, 5, 9, 13, 16, 17, 18, 24, 25, 27 ಹಾಗೂ 35ನೇ ವಾರ್ಡ್‌ಗಳಲ್ಲಿ ಮತದಾರರ ಹೆಸರು ಕೈಬಿಟ್ಟಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು. ನಗರದ ಒಟ್ಟು 35 ವಾರ್ಡುಗಳಲ್ಲಿ ಬಹುತೇಕ ಕಡೆ ಮತದಾರರ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದ್ದು, ರಾಜಕೀಯ ಪಕ್ಷಗಳು ಹಾಗೂ ಮತದಾರರ ಆಕ್ರೋಶಕ್ಕೆ ಎಡೆ ಮಾಡಿತು.
ಗುರುತಿನ ಚೀಟಿಯಿದ್ದರೂ ಮತಕ್ಕೆ ಅವಕಾಶವಿಲ್ಲ: ಮತದಾರರ ಬಳಿ ಗುರುತಿನ ಚೀಟಿಯಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆಯಾಗಿದ್ದರಿಂದ ಬಹುತೇಕ ಎಲ್ಲ ಕಡೆ ಮತದಾನಕ್ಕೆ ಅವಕಾಶ ದೊರೆಯದೇ ಮತದಾರರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದ ದೃಶ್ಯ ಕಂಡು ಬಂದಿತು. ಅಧಿಕಾರಿಗಳು ಅಸಹಾಯಕತೆ ಪ್ರದರ್ಶಿಸುತ್ತಿದ್ದುದು ಸ್ಪಷ್ಟವಾಗಿತ್ತು.
ನಗರದಲ್ಲಿ ಉಂಟಾಗಿದ್ದ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ ರೀತಿಯಲ್ಲಿಯೇ ಸಿಂಧನೂರಿನಲ್ಲಿಯೂ ಮತದಾನದ ವೇಳೆ ಕೆಲ ವಾರ್ಡುಗಳಲ್ಲಿಯೂ ಹೆಸರು ನಾಪತ್ತೆ ಪ್ರಕರಣಗಳು ಕಂಡು ಬಂದು ಗೊಂದಲ ಸೃಷ್ಟಿಸಿದವು. ಆದರೆ ದೇವದುರ್ಗ, ಮಾನವಿ ಹಾಗೂ ಲಿಂಗಸ್ಗೂರುಗಳಲ್ಲಿ ಮತದಾನದ ವೇಳೆ ಇಂಥ ಸಮಸ್ಯೆಯಾಗದೇ ಶಾಂತಿಯುತವಾಗಿ ಮತ ಚಲಾಯಿಸಲಾಯಿತು.
ಮಾರಾಮಾರಿ: ಸಿಂಧನೂರಿನ ವಾರ್ಡ್ 28ರ ಸುಕಾಲಪೇಟೆಯಲ್ಲಿ ಮತದಾನದ ವೇಳೆ ಬಿಎಸ್ಸಾರ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ನಡೆಸಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಅದೇ ರೀತಿ ರಾಯಚೂರಿನ 3ನೇ ವಾರ್ಡಿನಲ್ಲಿ ಅಕ್ರಮ ಮತದಾನಕ್ಕೆ ಯತ್ನಿಸಿದ ಜೆಡಿಎಸ್ ಕಾರ್ಯಕರ್ತರೊಂದಿಗೆ ಪಕ್ಷೇತರ ಅಭ್ಯರ್ಥಿಯ ಬೆಂಬಲಿಗರು ಮಾರಾಮಾರಿ ನಡೆಸಿ ಎರಡು ವಾಹನ ಜಖಂಗೊಳಿಸಿದರು.
ಮತದಾರರು ಗಲಿಬಿಲಿ: ಲಿಂಗಸ್ಗೂರು, ರಾಯಚೂರು ಹಾಗೂ ಸಿಂಧನೂರುಗಳಲ್ಲಿ ಮತದಾರರ ಹೆಸರುಗಳು ಒಂದು ವಾರ್ಡಿನಿಂದ ಮತ್ತೊಂದು ವಾರ್ಡಿಗೆ ಸ್ಥಳಾಂತರಗೊಂಡಿದ್ದರಿಂದ ಮತದಾರರು ಗಲಿಬಿಲಿಗೊಂಡರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಗುರುವಾರ ನಡೆದ ಎರಡು ನಗರಸಭೆ ಮತ್ತು ಮೂರು ಪುರಸಭೆಗಳು ಹಾಗೂ ಒಂದು ಪಟ್ಟಣ ಪಂಚಾಯಿತಿಯ ಚುನಾವಣೆ ಮತದಾನ ಗೊಂದಲಮಯವಾಗಿ ಮುಗಿದಿದೆ.
ನಗರದಲ್ಲಿ ದೋಷಪೂರಿತ ಮತದಾರರ ಪಟ್ಟಿಯಿಂದಾಗಿ ಮತದಾನ ವೇಳೆ ಗೊಂದಲ ಸೃಷ್ಟಿಸಿದರೆ, ತಾಲೂಕು ಕೇಂದ್ರಗಳಲ್ಲಿ ಬಹುತೇಕ ಮತದಾನ ಶಾಂತಿಯುತವಾಗಿತ್ತು. ಜಿಲ್ಲಾದ್ಯಂತ ಒಟ್ಟು ಶೇ.65.12ರಷ್ಟು ಮತದಾನದ ವರದಿಯಾಗಿದೆ. ಮತದಾನದ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಿಗಿ ಕಾವಲು ಹಾಕಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.