ರಾಯಚೂರು

ಸಂಕ್ಷಿಪ್ತ ಸುದ್ದಿ

Published On :

ಅಕ್ರಮ ಮದ್ಯ; ಒಬ್ಬ ಬಂಧನ
ರಾಯಚೂರು:
ಮಾನವಿ ತಾಲೂಕಿನ ಜೋಳದರಾಶಿ ಕ್ಯಾಂಪಿನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಅಮರಪ್ಪ ಕುಲಕರ್ಣಿ ಎಂದು ಗುರುತಿಸಲಾಗಿದೆ.
  ಈತ ಗ್ರಾಮದಲ್ಲಿ ತನ್ನ ಬೈಕ್‌ನಲ್ಲಿ ವಿವಿಧ ಕಂಪನಿಗಳ ಮದ್ಯವಿರಿಸಿಕೊಂಡು ಲೈಸೆನ್ಸ್ ಇಲ್ಲದೇ ಮಾರಾಟ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಯನ್ನು ಬಂಧಿಸಿ ಅವನಿಂದ 1560 ಮದ್ಯ ಮತ್ತು ಬೈಕ್ ಜಪ್ತಿ ಮಾಡಿದ್ದಾರೆ. ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ಸ್ಪರ್ಶ; ವ್ಯಕ್ತಿ ಸಾವು
ರಾಯಚೂರು:
ಮಾನವಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಬಳಿ ವಿದ್ಯುತ್ ಮಾರ್ಗದ ಅಳವಡಿಕೆ ಕಾಮಗಾರಿಯಲ್ಲಿ ನಿರತ ವ್ಯಕ್ತಿಯೊಬ್ಬ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದಾನೆ. ಮೃತನನ್ನು ರಾಜು ಎಂದು ಗುರುತಿಸಲಾಗಿದೆ.
ಈತ ಆಸ್ಪತ್ರೆಯ ಬಳಿ ವಿದ್ಯುತ್ ಕಂಬ ಅಳವಡಿಸಿ ತಂತಿ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದಾಗ ವಿದ್ಯುತ್ ಚಾಲನೆಗೊಳಿಸಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಕಂಬದಿಂದ ಕೆಳಗೆ ಬಿದ್ದಿದ್ದು, ಆತನಿಗೆ ತೀವ್ರ ಗಾಯಗಳಾಗಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯುತ್ ವ್ಯತ್ಯಯ
ರಾಯಚೂರು:
ವಿದ್ಯುತ್ ಪ್ರಸರಣ ನಿಗಮವು 100 ಎಂವಿಎ ಸಾಮರ್ಥ್ಯದ ವಿದ್ಯುತ್ ಪರಿವರ್ತಕದಿಂದ ಹೊಸ 220 ಕೆವಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಬೃಹತ್ ಕಾಮಗಾರಿ ಹಿನ್ನೆಲೆಯಲ್ಲಿ ಮಾ. 22ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ರಾಯಚೂರು, ಮಾನವಿ ಮತ್ತು ದೇವದುರ್ಗ ತಾಲೂಕಿನಲ್ಲಿ ನಗರ ಪ್ರದೇಶ ಸಹಿತ ಸುತ್ತಲಿನ ಗ್ರಾಮಗಳಿಗೆ ವಿದ್ಯುತ್ ಪೂರೈಕೆಯಿರುವುದಿಲ್ಲ. ಗ್ರಾಹಕರು ಸಹಕರಿಸುವಂತೆ ಜೆಸ್ಕಾಂ ಮನವಿ ಮಾಡಿದೆ.

ನಾಳೆ ಕ್ರೀಡಾಕೂಟ
ರಾಯಚೂರು
: ಜಿಲ್ಲಾ ಮಟ್ಟದ ಬಾಲಕಾರ್ಮಿಕರ ಪುನಾವಸತಿ ಶಾಲೆಯ ವಿದ್ಯಾರ್ಥಿಗಳ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಮಾ.22ರಂದು ಆಯೋಜಿಸಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅಂದು ಬೆಳಗ್ಗೆ 10ಕ್ಕೆ ಕ್ರೀಡಾಕೂಟವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಬಕಾರಿ ಉಪಆಯುಕ್ತ ವೆಂಕಟರಮಣಯ್ಯ, ಉಪಕಾರ್ಮಿಕ ಆಯುಕ್ತ ಚಿದಾನಂದ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ, ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ವಿ.ಬಿ. ಕಣಬರಗಿ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ.

ಕ್ರಿಕೆಟ್ ಟೂರ್ನಿ
ರಾಯಚೂರು:
ಎನ್.ಎಸ್. ಬೋಸರಾಜು ಫೌಂಡೇಷನ್ ವತಿಯಿಂದ ಜಿಪಂ ವ್ಯಾಪ್ತಿಯಲ್ಲಿ ಹೋಬಳಿ ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಏಪ್ರಿಲ್ ಮೊದಲ ವಾರದಲ್ಲಿ ಆಯೋಜಿಸಲಾಗಿದೆ ಎಂದು ಫೌಂಡೇಷನ್ ಪ್ರಕಟಣೆ ತಿಳಿಸಿದೆ. ಆಸಕ್ತರು ಮಾ. 30ರೊಳಗೆ ಶಕೀಲ್ ಅಹ್ಮದ್- 98807 37372 ಹಾಗೂ ವೆಂಕಟರೆಡ್ಡಿ 99862 35842 ನೋಂದಾಯಿಸಿಕೊಳ್ಳಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.