ರಾಯಚೂರು

ಗೊಂಡ ಸಮಾಜದ ಪೂರ್ವಭಾವಿ ಸಭೆ

Published On :

ಗುಲ್ಬರ್ಗ: ನಗರದ ಜಿಲ್ಲಾ ಗೊಂಡ ಕುರುಬ ಸಮಾಜದ ಕಚೇರಿಯಲ್ಲಿ ಮಾ.25ರಂದು ಸಂಜೆ 5ಕ್ಕೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಹಿಂದುಳಿದ ವರ್ಗಗಳ ಎಬಿಸಿ ಮತ್ತು ಎಂಬಿಸಿ ಮುನ್ನೋಟ 2013 ಕುರಿತು ಪೂರ್ವಭಾವಿ ಸಭೆ ಕರೆಯಲಾಗಿದೆ. ಹಿಂದುಳಿದ ವರ್ಗಗಳ ಮುಖಂಡರು, ನೌಕರರು, ಚಿಂತಕರು ಹಾಗೂ ಯುವ ಸಮುದಾಯ ಭಾಗವಹಿಸಿ ಸಲಹೆ ಸೂಚನೆ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಮಹಾಂತೇಶ ಕೌಲಗಿ, ಉಪಾಧ್ಯಕ್ಷ ವೆಂಕಟೇಶ ದೊರೆಪಲ್ಲಿ, ವಿನೋದಕುಮಾರ ಜನವರಿ, ಶಿವಾನಂದ ಅಣಜಗಿ, ಬಸವರಾಜ ರಾವೂರ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ
ಗುಲ್ಬರ್ಗ: ನಗರದ ಅಮರೇಶ್ವರ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ನಿವೃತ್ತ ಸರ್ಜನ್ ಡಾ. ಎಸ್.ಬಿ. ಗಿರಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಕ್ಕಳಿಗೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಅತಿಥಿಗಳಾಗಿ ಆಗಮಿಸಿದ ಭೀಮನಗೌಡ ಪಾಟೀಲ್, ಬಸವರಾಜ ಇಂಡಿ, ವಿಠ್ಠಲ್ ಭಜಂತ್ರಿ, ಎಸ್. ಬಸವರಾಜ ಮಕ್ಕಳಿಗೆ ಕಂಪ್ಯೂಟರ್ ತರಬೇತಿಯ ಪ್ರಶಸ್ತಿ ಪತ್ರ ವಿತರಿಸಿದರು. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಶಾಲೆಯ ಅಧ್ಯಕ್ಷ ಪ್ರೊ. ಸೂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಥಾವರ್ ವಂದಿಸಿದರು.
ವಾರ್ಷಿಕ ಸ್ವೇಹ ಸಮ್ಮೇಳನ
ಗುಲ್ಬರ್ಗ: ತಾಲೂಕಿನ ಕವಲಗಾ (ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ 5ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡೆಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶಾಂತಪ್ಪ ಹೇರೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರೇವಣಸಿದ್ದಪ್ಪ ಶಿವಸಿಂಪಿ, ಶಿವಶರಣಪ್ಪ ಮುಗಳಗಾಂವ, ಗ್ರಾಪಂ ಸದಸ್ಯ ಬಸವರಾಜ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ, ಗ್ರಾಮದ ಮುಖಂಡ ಕರಬಸಪ್ಪ ಮ್ಯಾಕೇರಿ, ಮಹಾವೀರ ತಂಗಾ, ಮರಿದೇವರಯ್ಯ ಸ್ವಾಮಿ, ಡಾ. ಪಿ.ಎ. ಕೋಳಕೂರ, ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕವಲಗಾ (ಬಿ) ಮುಖ್ಯ ಗುರು ಮತ್ತು ಶಿಕ್ಷಕ ಸಿಬ್ಬಂದಿ ಉಪಸ್ಥಿತರಿದ್ದರು. ಮುಖ್ಯಗುರು ರಾಜು ಎಂ. ದೊಡ್ಡಮನಿ ಅಧ್ಯಕ್ಷತೆ ವಹಿಸಿದ್ದರು. ಶಶಿಕಲಾ ಎನ್ ಸ್ವಾಗತ ಭಾಷಣ ಮಾಡಿದರು. ಅಕ್ಕಮಹಾದೇವಿ ಪ್ರಾಸ್ತಾವಿಕ ಮಾತನಾಡಿದರು. ಕಾಳಪ್ಪ ಬಡಿಗೇರ ನಿರೂಪಿಸಿ ವಿದ್ಯಾ ಕುಲ್ಕರ್ಣಿ ವಂದಿಸಿದರು.
ವಾರ್ಷಿಕೋತ್ಸವ ಸಮಾರಂಭ
ಗುಲ್ಬರ್ಗ: ನಗರದ ಶರಣಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ವಿಜ್ಞಾನ ನಿಕಾಯದ ವಾರ್ಷಿಕೋತ್ಸವ ಸಮಾರಂಭ ಆಚರಿಸಲಾಯಿತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ಸದಸ್ಯ ಡಾ. ಮಲ್ಲಿಕಾರ್ಜುನ ನಿಷ್ಠೆ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನದ ವಿದ್ಯಾರ್ಥಿಗಳಿಂದ ವಿಜ್ಞಾನ ಓದಿನೊಂದಿಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಅಪ್ಪಾ ಎಂಜಿನಿಯರಿಂಗ್ ಕಾಲೇಜಿನ ಡೀನ್ ಡಾ. ಅನೀಲಕುಮಾರ ಜಿ. ಬಿಡವೆ ಮುಖ್ಯ ಅತಿಥಿಗಳಾಗಿ, ಮೂಲ ವಿಜ್ಞಾನದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗ ಅವಕಾಶಗಳಿವೆ ಎಂದರು. ವಿಜ್ಞಾನ ನಿಕಾಯದ ಸಲಹೆಗಾರ ಪ್ರೊ. ಎಸ್.ಜಿ. ಕರಣೆ ಮಹಾವಿದ್ಯಾಲಯದ ವರದಿ ವಾಚನ ಮಾಡಿದರು. ಸಂಸ್ಕೃತಿಕ ಸ್ಫರ್ಧೆ ಮತ್ತು ಕ್ರೀಡೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಮೋಘ ಸಿರನೂರಕರ್ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಭಾ ಪುರಸ್ಕಾರ
ಗುಲ್ಬರ್ಗ: ನಗರದ ಗೋದುತಾಯಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಪಾಯಲ್ ತೊಸ್ನಿವಾಲಾ ಏಪ್ರಿಲ್ 2012ನೇ ಸಾಲಿನ ಪಿಯುಸಿ ದ್ವಿತೀಯ ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಗಳಿಸಿದ್ದಕ್ಕೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಬೆಂಗಳೂರು ವತಿಯಿಂದ 3000 ನಗದು ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಸಲಾಗಿದೆ. ಕಾಲೇಜಿನ ಪ್ರಾಚಾರ್ಯ ಆರ್.ಜಿ. ಹೊಸಮನಿ ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.