ಗುಳೆ ಗೋಳು ಮಾತ್ರ ನಿರಂತರ
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 4
ಎರಡು ವರ್ಷಗಳ ಭೀಕರ ಬರ. ಪರಿಣಾಮ ಕುಡಿಯುವ ನೀರಿಗೆ ತತ್ವಾರ. ತುಂಗಭದ್ರಾ, ಕೃಷ್ಣಾ ನದಿ ತೀರದಲ್ಲಿದ್ದರೂ ನದಿ ಬತ್ತಿದ್ದರಿಂದ ಕುಡಿಯುವ ನೀರಿಗೆ ಅಲೆದಾಟ ತಪ್ಪಿಲ್ಲ. ಹದಗೆಟ್ಟ ಪ್ರಮುಖ ಹಾಗೂ ಸಂಪರ್ಕ ರಸ್ತೆಗಳು, ಮೂಲ ಸೌಲಭ್ಯಗಳ ಕೊರತೆ. 2009ರ ಪ್ರವಾಹದ ಸಂತ್ರಸ್ತರನೇಕರಿಗೆ ಈಗಲೂ ದೊರೆಯದ ಆಸರೆಯ ಮಧ್ಯೆಯೇ ಜಿಲ್ಲೆಯ ಮತದಾರರು ಚುನಾವಣೆಯ ಮತದಾನಕ್ಕೆ ಸಜ್ಜಾಗಿದ್ದಾರೆ.
ಪ್ರತಿ ಬಾರಿ ಚುನಾವಣೆ ಸಮಯ ಬಂದಾಗಲೆಲ್ಲ ಜಿಲ್ಲೆಯಲ್ಲಿ ಪ್ರಚಾರಕ್ಕೆ ಹದಗೆಟ್ಟ ರಸ್ತೆಗಳು, ಮೂಲ ಸೌಲಭ್ಯಗಳ ಕೊರತೆಯೇ ಪ್ರಮುಖ ವಿಚಾರ ವಸ್ತು. ಈ ಬಾರಿಯೂ ಅದೇ ರಾಗ ಅದೇ ಹಾಡು. ಮತದಾರರಿಗೆ ಹದಗೆಟ್ಟ ರಸ್ತೆಯ ದುರಸ್ತಿ, ಮೂಲ ಸೌಲಭ್ಯ ಒದಗಿಸುವ ಭರವೆಸಗಳೇ ದೊರೆತಿವೆ.
ಹುಸಿ ಭರವಸೆ: ಕೈಗಾರಿಕೆಗಳ ಅಭಿವೃದ್ಧಿಯ ಮೂಲಕ ಉದ್ಯೋಗ ಸೃಷ್ಟಿಯ ಮಾತು ಗೌಣವಾಯಿತು. ವೈಯಕ್ತಿಕ ಆರೋಪ- ಪ್ರತ್ಯಾರೋಪಗಳೇ ಚುನಾವಣೆ ಕಣದಲ್ಲಿ ಹೆಚ್ಚಾಗಿ ಕೇಳಿಬಂದಿದ್ದು, ಬಿಟ್ಟರೆ ಜನಸಾಮಾನ್ಯರ ಸಂಕಷ್ಟದ ಬದುಕಿಗೆ ಸ್ಪಂದಿಸುವ ವಿಚಾರಗಳಿಗೆ ಹೆಚ್ಚು ಬೆಲೆ ದೊರೆಯಲಿಲ್ಲ.
ಜಿಲ್ಲೆಯಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀರಾ ಸಾಮಾನ್ಯ ಸಂಗತಿ. ಅದರಲ್ಲೂ ಕಳೆದ ಎರಡು ವರ್ಷಗಳಿಂದ ಜಿಲ್ಲೆಯನ್ನು ಕಟ್ಟಿ ಕಾಡುತ್ತಿರುವ ಭೀಕರ ಬರದಿಂದ ಜನತೆಗೆ ನೀರು ನೀರು ಎನ್ನುವಂಥ ಸ್ಥಿತಿ ತಂದೊಡ್ಡಿದೆ. ಸದ್ಯದ ಮಾಹಿತಿಯಂತೆ ಜಿಲ್ಲೆಯ ಸುಮಾರು 367 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವವಿದೆ.
ಕೊಳವೆಬಾವಿಗಳು ಬತ್ತಿವೆ. ಜಿಲ್ಲೆಯಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದರೂ ಸತತ ವಿದ್ಯುತ್ ಒದಗಿಸುವ ಭರವಸೆ ಹುಸಿಯಾಗಿದೆ. ಹಾಗಾಗಿ ನಿರಂತರ ಕೈಕೊಡುವ ವಿದ್ಯುತ್ನಿಂದಾಗಿ ನೀರಿನ ಅಭಾವ ಮತ್ತಷ್ಟು ಹೆಚ್ಚಿದೆ. ಲಿಂಗಸ್ಗೂರು ತಾಲೂಕು ಮತ್ತು ಮಾನವಿ ಪಟ್ಟಣ ಸೇರಿ ಅನೇಕ ಕಡೆ ಟ್ಯಾಂಕರ್ಗಳ ಮೂಲಕ ನೀರೊದಗಿಸಲಾಗುತ್ತಿದೆ. ಪಟ್ಟಣ ಪ್ರದೇಶದಲ್ಲಿಯೂ ನೀರಿನ ಅಭಾವ ಮಿತಿ ಮೀರಿದೆ.
ಪ್ರವಾಹ ಪರಿಹಾರ ಸ್ಥಗಿತ: 2009ರಲ್ಲಿ ಜಿಲ್ಲೆಯು ಭೀಕರ ಪ್ರವಾಹ ಕಂಡಿತು. ಆಗ ಸುಮಾರು ಸಾವಿರಾರು ಮನೆಗಳು ನೆಲಕ್ಕುರುಳಿದ್ದವು. ಅವುಗಳ ನಿರ್ಮಾಣಕ್ಕೆ ದಾನಿಗಳ ನೆರವು ದೊರೆತಿದೆ. ಒಟ್ಟು 10 ಸಾವಿರ ಮನೆಗಳ ಪೈಕಿ 8 ಸಾವಿರ ಆಸರೆ ಮನೆಗಳ ಹಸ್ತಾಂತರವಾಗಿದೆ. ಹಸ್ತಾಂತರಗೊಂಡ ಆಸರೆ ಕಾಲೋನಿಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಾದರೆ, ಇನ್ನೂ ಸುಮಾರು 3 ಸಾವಿರ ಮನೆಗಳ ಹಸ್ತಾಂತರ ಈಗಲೂ ಆಗಿಲ್ಲ ಎಂಬುದು ದುಸ್ಥಿತಿಗೆ ಹಿಡಿದ ಕನ್ನಡಿ.
ಉದ್ಯೋಗಕ್ಕಾಗಿ ಗುಳೆ: ಜಿಲ್ಲೆಯಲ್ಲಿ ಉದ್ಯೋಗವನ್ನರಸಿ ಮಹಾನಗರಗಳಿಗೆ ತೆರಳುವುದು ತೀರಾ ಸಾಮಾನ್ಯ ಪ್ರಕ್ರಿಯೆ ಎಂಬಂತಾಗಿದೆ. ಕೃಷಿ ಕೂಲಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳಿದ್ದರೂ ಅಸಮರ್ಪಕ ನಿರ್ವಹಣೆಯ ಫಲವಾಗಿ ಹಾಗೂ ಭೀಕರ ಬರದಿಂದ ಪಾರಾಗಲು ಮಹಾನಗರಗಳೇ ಗತಿ ಎಂಬಂಥ ಅನಿವಾರ್ಯತೆ.
ಮೂಲ ಸೌಲಭ್ಯಗಳ ಕೊರತೆ, ಗುಳೆಗಿಲ್ಲ ಕಡಿವಾಣ. ಕುಡಿಯುವ ನೀರಿನ ಅಭಾವ, ನೆರೆ ಸಂತ್ರಸ್ತ ಎಲ್ಲರಿಗೂ ಇನ್ನೂ ದೊರೆಯದ ಆಸರೆಯ ಮಧ್ಯೆಯೇ ಜಿಲ್ಲೆಯ ಮತದಾರರು ಮತ್ತೊಂದು ಮಹಾಚುನಾವಣೆಯ ಮತದಾನಕ್ಕೆ ಭಾರಿ ನಿರೀಕ್ಷೆಗಳೊಂದಿಗೆ ಸಜ್ಜಾಗಿದ್ದಾರೆ. ಮುಂದಾದರೂ ಸಮಸ್ಯೆಗಳು ಪರಿಹಾರ ಕಾಣಬಹುದು ಎಂಬ ಭರವಸೆ ಮತದಾರರದ್ದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

