ರಾಯಚೂರು

ಸಿಂಧನೂರು; ಶಾಂತಿಯುತ ಮತದಾನ

Published On :

ಕನ್ನಡಪ್ರಭ ವಾರ್ತೆ, ಸಿಂಧನೂರು, ಮೇ 5
ನಗರ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಅಲ್ಲಲ್ಲಿ ಕೆಲ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ, ಸಣ್ಣಪುಟ್ಟ ಗಲಾಟೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆದು, ಶೇ. 72.05ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ.
ವಾರ್ಡ್ 22, 23ರಲ್ಲಿ ಹಾಗೂ ಎಲೆಕೂಡ್ಲಗಿ ಗ್ರಾಮದಲ್ಲಿ ಮತಯಂತ್ರಗಳು ಕೈ ಕೊಟ್ಟಿದ್ದರಿಂದ ಮತದಾನ ಅರ್ಧ ಗಂಟೆ ತಡವಾಗಿ ಆರಂಭಗೊಂಡಿತು. ವಾರ್ಡ್ 24ರ ಕೋಟೆ ಪ್ರದೇಶದಲ್ಲಿ ಮತದಾನ ಸಿಬ್ಬಂದಿಗೆ ಮತಯಂತ್ರಗಳ ಸರಿಯಾದ ಮಾಹಿತಿ ಇಲ್ಲದ ಕಾರಣ ಮತದಾನ ಅರ್ಧ ಗಂಟೆ ತಡವಾಗಿ ಶುರವಾಯಿತು.
ವಾರ್ಡ್ 22ರಲ್ಲಿ ಗಿರಿಜಾ ಮಹಿಳಾ ಕಾಲೇಜಿನಲ್ಲಿ ಕಳೆದ ಅನೇಕ ದಶಕಗಳಿಂದ ಮತಗಟ್ಟೆ ತೆರೆಯಲಾಗುತ್ತಿತ್ತು. ಆದರೆ ಈ ಬಾರಿ ಅದನ್ನು ಆನಂದ ಹೆಗ್ಡೆ ಶಾಲೆಗೆ ವರ್ಗಾಯಿಸಿದ್ದರಿಂದ ಅಲ್ಲಿನ ಮತದಾರರು ಬೇರೆ ಕಡೆ ಹೋಗಿ ಮತದಾನ ಮಾಡಲು ನಿರಾಕರಿಸಿದರು. ಆಗ ಎಲ್ಲ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮತದಾರರ ಮನವೊಲಿಸುವಲ್ಲಿ ಯಶಸ್ವಿಯಾದರು.
ಹಲ್ಲೆ ಯತ್ನ: ಸುಕಾಲಪೇಟೆ ವಾರ್ಡ್ 27ರಲ್ಲಿ ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಕರಿಯಪ್ಪ ಹಾಗೂ ಕಾಂಗ್ರೆಸ್ ಯುವ ಮುಖಂಡ ಶಶಿಧರ ಭಂಗಿ ಅವರ ಮಧ್ಯೆ ಮಾತಿನ ಚಕಮಕಿ ನಡೆಯಿತು. ತಿಮ್ಮಾಪುರ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಜೆಡಿಎಸ್ ಕಾರ್ಯಕರ್ತನಿಗೆ ಹಲ್ಲೆ ಮಾಡಲು ಹೋದಾಗ ಜೆಡಿಎಸ್‌ನ ಅನೇಕ ಕಾರ್ಯಕರ್ತರು ಒಗ್ಗೂಡಿ ಪ್ರತಿ ಹಲ್ಲೆಗೆ ಮುಂದಾದರು.
ಆಗ ಪೊಲೀಸರು ಸಕಾಲಕ್ಕೆ ಆಗಮಿಸಿ ಎರಡು ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ಶಾಂತಗೊಳಿಸಿದರು. ಸಿದ್ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಕ್ಷಲ್ಲಕ ವಿಷಯಗಳಿಗೆ ಮಾತಿನ ಚಕಮಕಿ ನಡೆಯಿತೆಂದು ತಿಳಿದು ಬಂದಿದೆ.
ಮತದಾನ ಬಹಿಷ್ಕರಿಸಿದ್ದರು: ಮಲ್ಲಾಪುರದಲ್ಲಿ ಅಸಮರ್ಪಕ ವಿದ್ಯುತ್ ಪೂರೈಕೆ ಆಗುತ್ತಿದೆ. ಇದರಿಂದ ಗ್ರಾಮದ ರೈತರಿಗೆ ಹೊಲ ಗದ್ದೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣವೊಡ್ಡಿ ಮತದಾರರು ಕೆಲಕಾಲ ಮತದಾನಕ್ಕೆ ಬಹಿಷ್ಕಾರ ಹಾಕಿದರು. ನಂತರ ಜೆಸ್ಕಾಂನ ಅಧಿಕಾರಿಗಳು ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ಮತದಾನ ಒಂದು ತಾಸು ತಡವಾಗಿ ಆರಂಭಗೊಂಡಿತು.
ಸಿಂಧನೂರು ತಾಲೂಕು ವ್ಯಾಪ್ತಿಯ ಮಸ್ಕಿ ವಿಧಾನಸಭಾ ಕ್ಷೇತ್ರದ ಹೊಕ್ರಾಣಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದನ್ನು ವಿರೋಧಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದರು. ಇದರಿಂದಾಗಿ ಮತದಾನ ತಾಸಿಗೂ ಹೆಚ್ಚು ಕಾಲ ಸ್ಥಗಿತಗೊಂಡಿತು. ವಿವಿಧ ಪಕ್ಷಗಳ ಅಭ್ಯರ್ಥಿಗಳು ರಸ್ತೆ ಕಾಮಗಾರಿಯನ್ನು ಆರಂಭಿಸುವುದಾಗಿ ಭರವಸೆ ನೀಡಿದ ನಂತರ ಮತದಾನ ಪ್ರಾರಂಭಗೊಂಡಿತು.
ಪ್ರಮುಖರ ಮತದಾನ: ಕಾಂಗ್ರೆಸ್ ಅಭ್ಯರ್ಥಿ ಹಂಪನಗೌಡ ಬಾದರ್ಲಿ ಹಾಗೂ ಕೆಜೆಪಿ ಅಭ್ಯರ್ಥಿ ರಾಜಶೇಖರ ಪಾಟೀಲ್ ವಾರ್ಡ್ 24ರಲ್ಲಿ ಮತದಾನ ಮಾಡಿದರು. ಶಾಸಕ ವೆಂಕಟರಾವ್ ನಾಡಗೌಡ ಸ್ವಗ್ರಾಮ ಜವಳಗೇರಾದ ಬೂತ್ 20ರಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ಕೊಲ್ಲಾ ಶೇಷಗಿರಿರಾವ್ ಗಂಗಾವತಿ ತಾಲೂಕಿನ ದೇವಿಕ್ಯಾಂಪಿನಲ್ಲಿ ಮತ ಹಾಕಿದರು. ಬಿಎಸ್ಸಾರ್ ಕಾಂಗ್ರೆಸ್ ಅಭ್ಯರ್ಥಿ ಕೆ.ಕರಿಯಪ್ಪ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ವಾರ್ಡ್ 27ರ ಅಂಬೇಡ್ಕರ್ ನಗರದಲ್ಲಿ ಮತ ಚಲಾಯಿಸಿದರು. ಜೆಡಿಯು ಅಭ್ಯರ್ಥಿ ಶಾಂತಗೌಡ ಜಾಹಗೀರದಾರ ವಾರ್ಡ್ 28ರಲ್ಲಿ ಮತದಾನ ಮಾಡಿದರು.
ಬಿಸಿಲಿಗೆ ಬೆದರಿದ ಮತದಾರ: ಬೆ.8 ಗಂಟೆ ಹೊತ್ತಿಗೇ ಬಿಸಿಲಿನ ಪ್ರಖರತೆ ಏರತೊಡಗಿ ಮತದಾರರು ಮತಗಟ್ಟೆಗಳ ಬಳಿ ನೆರಳಿನ ಮೊರೆ ಹೋಗತೊಡಗಿದ್ದರು. ಕೆಲವೆಡೆ ತಲೆ ಮೇಲೆ ಟೋಪಿ, ಕರವಸ್ತ್ರ, ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹೊದ್ದು ಸಾಲಿನಲ್ಲಿ ನಿಂತಿದ್ದರು. ವೃದ್ಧರು, ವಿಕಲಚೇತನರನ್ನು ಸಂಬಂಧಿಕರು ಮತಕೇಂದ್ರಗಳಿಗೆ ಕರೆತಂದು ಮತ ಚಲಾವಣೆಗೆ ನೆರವಾದರು. ಮ.11ರ ವರೆಗೆ ಮತದಾನ ಚುರುಕಾಗಿತ್ತು. ನಂತರ ಮತ್ತೆ 3ರಿಂದ ಸಂಜೆ 6ರವರೆಗೆ ಮತದಾನ ಕೇಂದ್ರಗಳ ಮುಂದೆ ಸರದಿ ಸಾಲಿನಲ್ಲಿ ಮತದಾರರು ಮತ ಚಲಾಯಿಸಿದರು.
ಎಲ್ಲೆಲ್ಲೂ ಖಾಕಿ ಪಡೆ: ನಗರ ಸೇರಿದಂತೆ ತಾಲೂಕಿನಾದ್ಯಂತ ಇರುವ ಒಟ್ಟು 233 ಮತಗಟ್ಟೆ ಕೇಂದ್ರಗಳಲ್ಲಿ ಚುನಾವಣಾ ಆಯೋಗದ ಪೂರ್ವ ಸಿದ್ಧತೆಯಂತೆ ಮಿಲಟರಿ ಹಾಗೂ ಪೊಲೀಸರ ಸರ್ಪಗಾವಲು ಹೆಚ್ಚಿತ್ತು. ಅದರಲ್ಲೂ ವಿಶೇಷವಾಗಿ 36 ಅತಿಸೂಕ್ಷ್ಮ, 62 ಸೂಕ್ಷ್ಮ ಮತಗಟ್ಟೆಗಳ ಮುಂದೆ ಖಾಕಿ ಖದರು ಬೆಚ್ಚಿಬೀಳಿಸುವಂತಿತ್ತು. ಎಲ್ಲ ಮತಗಟ್ಟೆ ಕೆಂದ್ರಗಳ 200 ಮೀ. ಅಂತರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು.

ಲಿಂಗಸ್ಗೂರಲ್ಲಿ ಶೇ. 64.93 ಮತದಾನ
ಲಿಂಗಸ್ಗೂರು: ಲಿಂಗಸ್ಗೂರು ಕ್ಷೇತ್ರದಾದ್ಯಂತ ಮತದಾನ ಶಾಂತಿಯುತವಾಗಿ ನಡೆದು ಶೇ. 64.93ರಷ್ಟು ಮತದಾನವಾಗಿದೆ.
ಲಿಂಗಸ್ಗೂರು ಕ್ಷೇತ್ರ ವ್ಯಾಪ್ತಿಯ ಲಿಂಗಸ್ಗೂರು, ಮುದಗಲ್, ಹಟ್ಟಿ, ಗುರುಗುಂಟಾ, ಆನೆಹೊಸೂರು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 7ರಿಂದ ಮತದಾನ ಮಾಡಲು ಸಮಯ ನಿಗದಿಪಡಿಸಲಾಗಿತ್ತು. ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬೆಳಗ್ಗೆ 8ರಿಂದ ಮಧ್ಯಾಹ್ನದವರೆಗೆ ಮತದಾನ ಚುರುಕಾಗಿ ಕಂಡು ಬಂದಿತು. ಬೇಸಿಗೆ ಬಿಸಿಲು ಹೆಚ್ಚುತ್ತಿದ್ದಂತೆ ಮತದಾನದಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿತು.
ಮನವೊಲಿಕೆ: ಮಸ್ಕಿ ಕ್ಷೇತ್ರದ ಸರ್ಜಾಪುರ, ಅಮರಾವತಿ ಗ್ರಾಮಗಳಲ್ಲಿ ಮತದಾನ ಬಹಿಷ್ಕರಿಸಲಾಗಿತ್ತು. ಕುಪ್ಪಿಗುಡ್ಡ ಗ್ರಾಮದಲ್ಲಿ ಕೇವಲ 8 ಮತಗಳು ಚಲಾವಣೆಗೊಂಡ ಕುರಿತು ತಿಳಿದು ಬಂದಿರುತ್ತದೆ. ಚುನಾವಣಾಧಿಕಾರಿ, ಸಹಾಯಕ ಆಯುಕ್ತ ಟಿ.ಯೋಗೇಶ ಮತ್ತು ಡಿವೈಎಸ್ಪಿ ಅನಿತಾ ಹದ್ದಣ್ಣವರ ನೇತೃತ್ವದಲ್ಲಿ ಮೂರು ಗ್ರಾಮಗಳಿಗೆ ಭಾನುವಾರ ಬೆಳಗ್ಗೆ ತೆರಳಿ ಮತದಾನ ಮಾಡುವಂತೆ ಗ್ರಾಮಸ್ಥರ ಮನವೊಲಿಸುವ ಪ್ರಯತ್ನ ನಡೆಸಿದರು.
ತಾಲೂಕಿನ ಮುದಗಲ್ ಹೋಬಳಿ ತುರಡಗಿ ಗ್ರಾಮದಲ್ಲಿ ವೆಂಕಣ್ಣ ಎಂಬ ಅಂಧ ವ್ಯಕ್ತಿಯ ಜೊತೆ ಅವನ ತಮ್ಮ ಸೋಮಣ್ಣ ಎಂಬುವರು ಮತದಾನಕ್ಕೆ ತೆರಳಿದಾಗ ಈ ಹಿಂದೆ ಆಡಳಿತ ನಡೆಸಿದ ಜನಪ್ರತಿನಿಧಿಗಳು ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲವೆಂದು ಆಕ್ರೋಶಗೊಂಡು ಮತಯಂತ್ರ ಒಡೆದು ಹಾಕಿದ ಪ್ರಯುಕ್ತ ಬೇರೆ ಮತಯಂತ್ರ ಅಳವಡಿಸಿ ಮತದಾನಕ್ಕೆ ಅವಕಾಶ ಕಲ್ಪಿಸಿದ ಬಗ್ಗೆ ವರದಿಯಾಗಿದೆ. ಇನ್ನುಳಿದಂತೆ ಕ್ಷೇತ್ರದಲ್ಲಿ ಶಾಂತಿಯುತವಾಗಿ ಮತದಾನ ಯಶಸ್ವಿಗೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.