ಏಳು- ಬೀಳಿಗೆ ಕ್ಷಣಗಣನೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ , ರಾಯಚೂರು , ಮೇ 7
ಜಿಲ್ಲೆಯ ಎಲ್ಲ 7 ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭಗೊಂಡಿದೆ. ಮತದಾರರಿಗೆ ಭಾರಿ ಕುತೂಹಲ. ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರಿಗೆ ಫಲಿತಾಂಶದ ಕಾತರ. ಅಭ್ಯರ್ಥಿಗಳ ಸೋಲು- ಗೆಲವಿನ ಲೆಕ್ಕಾಚಾರ ಎಲ್ಲೆಡೆ ಆರಂಭವಾಗಿದ್ದು, ಬುಧವಾರ ನಡೆಯುವ ಮತ ಎಣಿಕೆಯತ್ತಲೇ ಎಲ್ಲರ ಗಮನ ಕೇಂದ್ರಿತವಾಗಿದೆ.
ನಗರದ ಎಸ್ಆರ್ಪಿಎಸ್ ವಾಣಿಜ್ಯ ಕಾಲೇಜು ಹಾಗೂ ಎಲ್ವಿಡಿ ಕಾಲೇಜುಗಳಲ್ಲಿ ಮೇ 8ರಂದು ಮತಗಳ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ವೇಳೆಗೆ ಏಳೂ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ಮೂಲಕ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಅಗತ್ಯ ಸಿದ್ಧತೆ: ಈಗಾಗಲೇ ನಗರದ ಎರಡೂ ಕಾಲೇಜುಗಳಲ್ಲಿ ಮತಗಳ ಎಣಿಕೆ ಕಾರ್ಯಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದು, ಭಾರೀ ಬಿಗಿ ಭದ್ರತೆಗೆ ನಿರ್ಧರಿಸಲಾಗಿದೆ. ಜಿಲ್ಲಾಡಳಿತವು ಮತ ಎಣಿಕೆ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ವಿಜಯೋತ್ಸವ ಆಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ.
ಜಿಲ್ಲೆಯಲ್ಲಿ ಮೇ 5ರಂದು ನಡೆದ ಮತದಾನದಲ್ಲಿ ಶೇ.64.83ರಷ್ಟು ಮತದಾನವಾಗಿದೆ. ಒಟ್ಟು 1,32,812 ಮತದಾರರ ಪೈಕಿ 8,59,565 ಮತದಾರರು ಮತ ಚಲಾವಣೆ ಮಾಡಿದ್ದಾರೆ. ಅತೀ ಕಡಿಮೆ ಮತದಾನ ರಾಯಚೂರು ನಗರ ಮತ್ತು ಅತೀ ಹೆಚ್ಚು ಮತದಾನ ಸಿಂಧನೂರಿನಲ್ಲಿ ನಡೆದಿದೆ. ಈಗಾಗಲೇ ಮತಯಂತ್ರಗಳನ್ನು ನಗರದ ಕಾಲೇಜುಗಳಲ್ಲಿ ತಂದಿರಿಸಲಾಗಿದೆ. ಕೇಂದ್ರ ಅರೆಸೇನಾ ಪಡೆಯ ಸಿಬ್ಬಂದಿ ಬಿಗಿಭದ್ರತೆ ಒದಗಿಸಲಾಗಿದೆ.
ಲೆಕ್ಕಾಚಾರ: ಚುನಾವಣೆ ಶಾಂತಿಯುತವಾಗಿ ಮುಗಿಯುತ್ತಿದ್ದಂತೆಯೇ ಸೋಲು ಗೆಲವಿನ ಲೆಕ್ಕಾಚಾರ ಆರಂಭಗೊಂಡಿದೆ. ಪ್ರಬಲ ಜಾತಿಗಳ ಮತದಾರರ ಬೆಂಬಲ, ಹಣ ಹಂಚಿಕೆಯ ಬಲ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ರಾಜಕೀಯ ವಲಯದಲ್ಲಿ ಸೋಲು ಗೆಲವಿನ ಲೆಕ್ಕಾಚಾರ ಆರಂಭಗೊಂಡಿದೆ.
ಜಿಲ್ಲೆಯಲ್ಲಿ ಪ್ರಸಕ್ತ ಚುನಾವಣೆಯಲ್ಲಿ ದೇವದುರ್ಗ ಕ್ಷೇತ್ರದತ್ತಲೇ ಎಲ್ಲರ ಗಮನ ನೆಟ್ಟಿದೆ. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ, ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರಿಗೆ ಮಾಜಿ ಸಂಸದ, ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ ನಾಯಕ ಪ್ರತಿಸ್ಪರ್ಧಿ. ಕಳೆದ 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಹಾಗೂ ಆನಂತರದಲ್ಲಿ ನಡೆದ ಉಪಚುನಾವಣೆಯಲ್ಲೂ ಶಿವನಗೌಡ ನಾಯಕ ಗೆಲವು ಕಂಡಿದ್ದಾರೆ. ಭಾರೀ ಪೈಪೋಟಿಯನ್ನು ಕಂಡ ಕ್ಷೇತ್ರವಿದು.
ವಿರೋಧಿ ಅಲೆ- ಕುತೂಹಲ: ಜಿಲ್ಲೆಯ ಬಹುತೇಕ ಕಡೆ ಆಡಳಿತರೂಢ ಶಾಸಕರ ವಿರೋಧಿ ಅಲೆ ಬಹುತೇಕ ಕಂಡುಬಂದಿತ್ತು. ಆದರೆ ವಿರೋಧಿ ಅಲೆ ಚುನಾವಣೆಯಲ್ಲಿ ಯಾವ ಪ್ರಭಾವ ಬೀರಿದೆ ಎಂಬುದು ಮತಗಳ ಎಣಿಕೆಯ ನಂತರವೇ ಗೊತ್ತಾಗಲಿದೆ. ಈ ಬಾರಿ ಚುನಾವಣೆಯಲ್ಲಿ ಜಿಲ್ಲೆಗೆ ಘಟಾನುಘಟಿಗಳು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ, ಬಿಜೆಪಿಯ ವೆಂಕಯ್ಯ ನಾಯ್ಡು, ಜೆಡಿಯುನ ಶರದ್ ಯಾದವ್, ಬಿಎಸ್ಸಾರ್ ಕಾಂಗ್ರೆಸ್ನ ಪೂಜಾ ಗಾಂಧಿ ಸೇರಿದಂತೆ ಅನೇಕ ಪ್ರಮುಖರು ಚುನಾವಣೆ ಪ್ರಚಾರ ಸಭೆ ನಡೆಸಿದ್ದಾರೆ. ಈ ಎಲ್ಲ ನಾಯಕರು ಮತದಾರರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆಂಬುದನ್ನು ಫಲಿತಾಂಶ ಸ್ಪಷ್ಟಪಡಿಸಲಿದೆ.
ಮತ ಎಣಿಕೆ: ಮೇ 8ರಂದು ಬೆಳಗ್ಗೆ 8ರಿಂದ ಮತಗಳ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನದ ವೇಳೆಗೆ ಎಲ್ಲ 7 ಕ್ಷೇತ್ರಗಳ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

