ಅನಧಿಕೃತ ಸಿಮೆಂಟ್ ಮಾರಾಟ
ಕನ್ನಡಪ್ರಭ ವಾರ್ತೆ, ಮುದಗಲ್, ಮೇ 14
ಮಾರಾಟ ತೆರಿಗೆ ಇಲ್ಲದೆ ಅಕ್ರಮ ಆಮದು ಮಾಡಿಕೊಳ್ಳಲಾದ ಸಿಮೆಂಟ್ ಮಾರಾಟ ದಂಧೆ ಪಟ್ಟಣದಲ್ಲಿ ಅವ್ಯಾಹತವಾಗಿ ಸಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಧಿಕೃತ ಮಾರಾಟಗಾರರಲ್ಲದ ಕೆಲವರು ಸಣ್ಣ ಟ್ರೇಡರ್ಸ್ ವ್ಯಾಪಾರ ಮಳಿಗೆ ತೆರೆದು ಅನಧಿಕೃತವಾಗಿ ಉತ್ಕೃಷ್ಟ ಹೆಸರು ಪಡೆದ ಕಂಪನಿಯ ಸಿಮೆಂಟ್ ಮಾರಾಟ ಮಾಡುತಿದ್ದಾರೆ. ಆದರೆ ಇಲ್ಲಿ ಮಾರಾಟ ಮಾಡುವ ಸಿಮೆಂಟ್ ಹಾಗೂ ಅಧಿಕೃತವಾಗಿ ಮಾರಾಟ ಮಾಡುತ್ತಿರುವ ಸಿಮೆಂಟ್‌ಗೂ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಆದರೆ ಮೇಲ್ನೋಟಕ್ಕೆ ಎರಡು ಚೀಲಗಳೂ ಒಂದೇ ತರನಾಗಿದ್ದು ತೆರೆದು ನೋಡಿದಾಗ ನಿಜ ಬಣ್ಣ ತಿಳಿಯುತ್ತಿದೆ ಎಂದು ಗ್ರಾಹಕರು ದೂರುತ್ತಾರೆ.
ಈ ಅವ್ಯವಹಾರದಿಂದ ಸರ್ಕಾರಕ್ಕೆ ನಿತ್ಯ ಸಾವಿರಾರು ರುಪಾಯಿ ವಂಚನೆ ಒಂದೆಡೆಯಾದರೆ, ಕಟ್ಟಡ ನಿರ್ಮಾಣ ಮಾಡುವವರಿಗೆ ಭಾರಿ ನಷ್ಟ ಉಂಟಾಗುತ್ತಿರುವುದು ಇನ್ನೊಂದೆಡೆ. ಕಳೆದ ಎರಡ್ಮೂರು ವರ್ಷಗಳಿಂದ ಈ ದಂಧೆ ನಡೆದಿದೆ ಎನ್ನಲಾಗಿದ್ದು, ಇದರಲ್ಲಿ ಕೆಲ ಅಧಿಕಾರಿಗಳು ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.
ಪ್ರತಿ ಚೀಲಕ್ಕೆ 85 ಲಾಭ: ಪಟ್ಟಣದಲ್ಲಿ ಅಲ್ಟ್ರಾಟೆಕ್ ಸಿಮೆಂಟ್‌ನ ಅಧಿಕೃತ ಮಾರಾಟಗಾರರು ಇಬ್ಬರಿದ್ದು ಇವರಲ್ಲಿರುವ ಸಿಮೆಂಟ್ ಚೀಲದ ಮೇಲೆ ಎಂಆರ್‌ಪಿ 307 ಎಂದು ಇದ್ದು, 290ಕ್ಕೆ ಮಾರಾಟ ಮಾಡುತಿದ್ದಾರೆ. ಆದರೆ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿರುವ ಕೆಲ ಅಂಗಡಿಗಳಲ್ಲಿನ ಸಿಮೆಂಟ್ ಚೀಲದ ಮೇಲೆ 205 ಎಂಆರ್‌ಪಿ ಇದ್ದು, ಇದನ್ನು 290ಕ್ಕೆ ಮಾರಾಟ ಮಾಡುತಿದ್ದಾರೆ. ಇದರಿಂದ ವ್ಯಾಪರಿಗೆ ಚೀಲಕ್ಕೆ ಸುಮಾರು 85 ಲಾಭ ಉಳಿಯಲಿದೆ ಎಂದು ವ್ಯಾಪಾರಸ್ಥರು ವಿವರಿಸುತ್ತಾರೆ.
ಸಿಕ್ಕಿಬಿದ್ದ ಆಸಾಮಿ: ಪಟ್ಟಣದಲ್ಲಿ ಮಂಜುನಾಥ ಎಂಬವರ ಹೆಸರಲ್ಲಿ ಟ್ರೇಡರ್ಸ್ ತೆರೆದಿರುವ ಈರಣ್ಣ ಕಳ್ಳಿಮನಿ ಅವರು ಆಂಧ್ರಪ್ರದೇಶಕ್ಕೆ ಸೇರಿದ ಲಾರಿಯಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಚೀಲ ಇಳಿಸಿಕೊಳ್ಳುವಾಗ ಅಧಿಕೃತ ಮಾರಾಟಗಾರ ಮದಿನಾ ಟ್ರೇಡರ್ಸ್‌ನ ಟಿಪ್ಪು ಸುಲ್ತಾನ್ ಅವರ ಕೈಗೆ ಶುಕ್ರವಾರ ಸಿಕ್ಕಿಬಿದ್ದಿದ್ದಾನೆ. ಇದನ್ನು ತಡೆದು ಅಧಿಕೃತ ದಾಖಲೆ ಪರಿಶೀಲಿಸಿದಾಗ ಯಾವುದೇ ತೆರಿಗೆ ಪಾವತಿಸದೆ, ನಿಖರವಾದ ಮಾಹಿತಿ ಇಲ್ಲದೆ ಅತ್ಯಂತ ಕಡಿಮೆ ದರದಲ್ಲಿ ಸಿಮೆಂಟ್ ಖರೀದಿಸಿರುವುದು ಬೆಳಕಿಗೆ ಬಂದಿದೆ.
ತಪ್ಪೊಪ್ಪಿಗೆ: ಆದರೆ ಇದರಿಂದ ಕಕ್ಕಾಬಿಕ್ಕಿಯಾದ ಅಕ್ರಮ ಮಾರಾಟಗಾರ ಈರಣ್ಣ ಕೆಲ ಮುಖಂಡರ ಹಾಗೂ ಪೊಲೀಸ್ ಪೇದೆಯೊಬ್ಬರ ಮಧ್ಯಸ್ಥಿಕೆಯಲ್ಲಿ ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ ಉತ್ತಮ ಗುಣಮಟ್ಟದೆಂದು ಸಿಮೆಂಟ್ ಖರೀದಿಸಿ ಕಟ್ಟಡ ನಿರ್ಮಿಸುವ ಜನರು ಸಿಮೆಂಟ್ ಸತ್ವವಿಲ್ಲದ್ದು ಎಂದು ತಿಳಿಯುತ್ತಿದ್ದಂತೆ ಗಾಭರಿಗೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆಯೇ ಎಂದುಬನ್ನು ಕಾದು ನೋಡಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

