ರಾಯಚೂರು

'ಆರಕ್ಷಕ'ರ ನಿರಾಸಕ್ತಿ

Published On :

ಕನ್ನಡಪ್ರಭ ವಾರ್ತೆ  ಸಿಂಧನೂರು  ಮೇ 17
ದನಗಳ್ಳತನ ಆರೋಪಿ ಆರೋಗ್ಯಸ್ವಾಮಿ ಉಪಟಳಕ್ಕೆ ಬೇಸತ್ತು ಪೊಲೀಸ್ ಠಾಣೆಗೆ ದೂರು ಕೊಟ್ಟರೂ ಕ್ರಮ ಕೈಗೊಳ್ಳದ ಪೊಲೀಸರು, ತಮಗೆ ರಕ್ಷಣೆ ನೀಡಿ ಶಾಂತಿ- ಸುವ್ಯವಸ್ಥೆ ಕಾಪಾಡುವ ಬದಲು ಮಂಗಳವಾರ ಮಧ್ಯಾಹ್ನ ಜರುಗಿದ ಆಕಸ್ಮಿಕ ಘಟನೆಯಿಂದ ಪುನಃ ಆರ್.ಎಚ್. ಕ್ಯಾಂಪ್‌ನ ಬಂಗಾಲಿ ನಿವಾಸಿಗಳ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ.
ಗುಡಿಸಲು, ಟ್ರ್ಯಾಕ್ಟರ್ ಸುಟ್ಟ ಪ್ರಕರಣ ಮತ್ತು ಈರಣ್ಣ ಕ್ಯಾಂಪ್‌ನ ಹನುಮಂತ ಎಂಬವರ ಮನೆಯ ಆಸ್ತಿಪಾಸ್ತಿ ಹಾನಿ ಮಾಡಿದ ಹಿನ್ನೆಲೆಯಲ್ಲಿ 37 ಜನರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಹಿನ್ನೆಲೆಯಲ್ಲಿ 21 ಜನರನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಗ್ರಾಮದ ನಿವಾಸಿಗಳನ್ನು ಪೊಲೀಸರು ಹಿಡಿದು ತಂದು ಆರೋಪಿಗಳನ್ನು ಹುಡುಕಿ ಕೊಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ದುರುದ್ದೇಶವಿರಲಿಲ್ಲ- ನಿವಾಸಿಗಳ ವಿಷಾದ: ಪೊಲೀಸರ ಮೇಲೆ ಯಾರೂ ದುರುದ್ದೇಶದಿಂದ ಹಲ್ಲೆ ನಡೆಸಿಲ್ಲ. ಆರೋಗ್ಯಸ್ವಾಮಿ ಮೇಲೆ ದಾಳಿ ಮಾಡಲು ಹೋದ ಪ್ರಸಂಗದಲ್ಲಿ ಪೊಲೀಸರಿಗೆ ಏಟು ಬಿದ್ದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಬಂಗಾಲಿ ಕ್ಯಾಂಪ್ ನಿವಾಸಿಗಳು, ಅದೊಂದು ಆಕಸ್ಮಿಕ ಘಟನೆಯಾಗಿದೆ. ಪೊಲೀಸ್ ಜೀಪ್ ಜಖಂ ಆಗಿರುವುದಕ್ಕೆ ಆಕ್ರೋಶಗೊಂಡಿರುವ ಪೊಲೀಸರು ಅಮಾಯಕ ಜನರನ್ನು ಠಾಣೆಗೆ ಕರೆತರುತ್ತಿದ್ದಾರೆ ಎಂದು ಸುಬೋನ್ ಮಂಡಲ್, ಸುಧನ್, ಅನಿಲ್ ಮೇಸ್ತ್ರಿ ಹೇಳಿದರು.
ಆರೋಗ್ಯಸ್ವಾಮಿ ಮೇಲೆ ಕ್ರಮ ಕೈಗೊಂಡಿಲ್ಲ: ಇದುವರೆಗೂ ಆರೋಗ್ಯಸ್ವಾಮಿಯ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಆತ ಕಳೆದ ಒಂದು ವರ್ಷದಿಂದ ತಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದನು. ಬೇಸಿಗೆ ಸಮಯದಲ್ಲಿ ಹೊಲದಲ್ಲಿ ಪಿಳ್ಳಿ ಪಿಸಿರು(ಹೆಸರು ಬಳ್ಳಿ ಇದ್ದಂತೆ ಇರುತ್ತದೆ) ಬೆಳೆ ಹಾಕಿ ಅದರ ಸಮೀಪ ಹೋದರೆ ಸಾಕು, ದನಗಳನ್ನು ಕಟ್ಟಿ ಹಾಕಿ ಹಣ ವಸೂಲಿ ಮಾಡುವುದು, ದನಗಳನ್ನೇ ಮಾರಿಕೊಳ್ಳುವುದು, ಇಲ್ಲವೇ ಅವುಗಳನ್ನು ಸಾಯಿಸುತ್ತಿದ್ದ. ದನ ಬಿಡಿಸಿಕೊಳ್ಳಲು ಬಂದರೆ 5ರಿಂದ 10 ಸಾವಿರವರೆಗೆ ವಸೂಲಿ ಮಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಎಂದು ಗ್ರಾಮಸ್ಥರು ನೋವಿನಿಂದ ಹೇಳಿದರು.
ಪೊಲೀಸರು ಆರೋಗ್ಯಸ್ವಾಮಿಯ ಮೇಲೆ ಮೊದಲೇ ಕ್ರಮ ಕೈಗೊಂಡಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ನಿವಾಸಿಗಳ ಸಹನೆ ಕಟ್ಟೆಯೊಡೆಯಿತು. ಪೊಲೀಸರು ಈಗ 37 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ಅಮಾಯಕ ಜನರನ್ನು ಜೈಲಿಗೆ ಕಳುಹಿಸಲು ಮುಂದಾಗಿದ್ದಾರೆ. ನಿರಪರಾಧಿಗಳ ಮೇಲೆ ಪೊಲೀಸರು ಇದೇ ರೀತಿ ತಮ್ಮ ದೌರ್ಜನ್ಯ ಮುಂದುವರೆಸಿದರೆ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿ ನ್ಯಾಯ ಕೇಳುವುದಾಗಿ ಆರ್.ಎಚ್. ಕ್ಯಾಂಪ್ ನಿವಾಸಿಗಳು ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.