ರಾಯಚೂರು

ದರ್ಗಾಕ್ಕೆ ಕಲಾವಿದರ ಭೇಟಿ

Published On :

ಕನ್ನಡಪ್ರಭ ವಾರ್ತೆ   ಗುಲ್ಬರ್ಗ   ಮೇ 23
ನಗರದ ಐತಿಹಾಸಿಕ ಖ್ಜಾಜಾ ಬಂದೇ ನವಾಜ್ ದರ್ಗಾಕ್ಕೆ ಬುಧವಾರ ಹಿರಿಯ ಹಾಗೂ ಕಿರಿಯ ಕಲಾವಿದರು ಭೇಟಿ ನೀಡಿ ದರ್ಗಾದಲ್ಲಿನ ಗುಮ್ಮಟಕ್ಕೆ ದಖನಿ ಕಲೆ ಹಾಳಾಗುವ ಹೊಸ ಬಣ್ಣ ಲೇಪಣೆಯನ್ನು ವಿರೋಧಿಸಿದರು.
ಕಳವಳ: ಡಾ. ರೆಹಮಾನ್ ಪಟೇಲ್, ಡಾ. ಶಾಹೀದ್ ಪಾಷಾ, ಡಾ. ವಿಶ್ವೇಶ್ವರಿ ತಿವಾರಿ, ನಾರಾಯಣ ಎಂ. ಜೋಶಿ, ವಿಶ್ವೇಶ್ವರಯ್ಯ ಟಿ.ಎನ್., ಲಕ್ಷ್ಮೀಕಾಂತ ಮನೋಕರ್, ಉದಯಕುಮಾರ ಬಗಲಿ, ಅಭಿಲಾಷ ಬಿ., ನಜೀರ್ ಅಹ್ಮದ್, ಅಕುಷಾ ಕಾಡೇಪುರ್ ಮುಂತಾದ ಕಲಾವಿದರು ದರ್ಗಾಕ್ಕೆ ಭೇಟಿ ನೀಡಿ, ದರ್ಗಾದೊಳಗಿನ ಗುಮ್ಮಟಗಳಿಗೆ ಗಾಜಿನ ಅಲಂಕಾರ ಹಾಗೂ ಹೊಸ ಬಣ್ಣ ಲೇಪನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ದರ್ಗಾವು ದಕ್ಷಿಣ ಭಾರತದ ಮೆಕ್ಕಾ ಎಂದೇ ಪ್ರಸಿದ್ಧವಾಗಿದೆ. ದರ್ಗಾದಲ್ಲಿ ದಖನಿ ಶೈಲಿಯ ಡಿಸೈನ್, ಕ್ವಾಲಿಗ್ರಾಫಿ ಅತ್ಯಂತ ಸುಂದರ ಹಾಗೂ ಮನಮೋಹಕವಾಗಿದ್ದು, ಇದನ್ನು ಉಳಿಸಿಕೊಂಡು ಹೋಗುವುದು ಅತ್ಯಂತ ಅಗತ್ಯವಾಗಿದೆ. ಗಾಜಿನ ಅಲಂಕಾರ ಹಾಗೂ ಹೊಸ ಬಣ್ಣ ಲೇಪನದಿಂದ ಈ ಐತಿಹಾಸಿಕ ಅಮೂಲ್ಯ ಕಲೆ ನಶಿಸಿ ಹೋಗಲಿದೆ ಎಂಬ ಕಳವಳವನ್ನು ದರ್ಗಾದ ಮುಖ್ಯಸ್ಥ ಸಜ್ಜಾದ್ ನಸೀನ್ ಹಾಗೂ ಅವರ ಪುತ್ರನಿಗೆ ಕಲಾವಿದರಿಗೆ ವಿವರಿಸಿ ಕಳವಳ ವ್ಯಕ್ತಪಡಿಸಿದರು.
ಅನುಮತಿ ಅಗತ್ಯ: 600 ವರ್ಷಗಳ ಇತಿಹಾಸವಿರುವ ದಖನಿ ಕಲೆಯು ಮುಂದಿನ ಪೀಳಿಗೆಯವರಿಗೂ ಸಿಗಬೇಕು. ದರ್ಗಾವು ಪ್ರಾಚ್ಯ ವಸ್ತು ಸಂಗ್ರಹ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವುದರಿಂದ ಯಾವುದೇ ಕಾರ್ಯವನ್ನು ಮಾಡಬೇಕಾದರೂ ಇಲಾಖೆ ಅನುಮತಿ ಪಡೆಯಬೇಕು ಎಂದು ಕಲಾವಿದರು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಜ್ಜಾದ್ ನಸೀನ್, ನಾವು ದಖನಿ ಕಲೆಗೆ ಯಾವುದೇ ರೀತಿಯ ಹಾನಿಯುಂಟು ಮಾಡುತ್ತಿಲ್ಲ. ಇರುವ ಕಲೆಯನ್ನು ರಕ್ಷಿಸಿ, ಅದಕ್ಕೆ ಗಾಜಿನ ಅಲಂಕಾರ ಹಾಗೂ ಹೊಸ ಬಣ್ಣ ಲೇಪಿಸುತ್ತಿರುವುದಾಗಿ ಸಮರ್ಥಿಸಿದರು. ಇದು ಕಲಾವಿದರಿಗೆ ತೀವ್ರ ಅಸಮಾಧಾನವನ್ನುಂಟು ಮಾಡಿತು. ಸಂಬಂಧಪಟ್ಟ ಇಲಾಖೆಯವರು ಮಧ್ಯಸ್ಥಿಕೆ ವಹಿಸಿ, ಅಮೂಲ್ಯ ಕಲೆ ಹಾಳಾಗುವುದನ್ನು ತಪ್ಪಿಸಲು ಕಲಾವಿದರು ಕೋರಿದರು.
ಅಪ್ಪನ ಗುಡಿಯಲ್ಲೂ ಅಪಚಾರ: ಪ್ರಸಿದ್ಧ ಶರಣಬಸವೇಶ್ವರ ದೇವಸ್ಥಾನವೂ ಸಹ ಅತ್ಯಂತ ಪ್ರಾಚೀನವಾಗಿದ್ದು, ಅಲ್ಲಿನ ಮೂಲ ಕಲೆಯು ಸಹ ಸಂಪೂರ್ಣ ಕಾಣೆಯಾಗಿದೆ. ಇದಕ್ಕೆ ದೇವಸ್ಥಾನದೊಳಗೆ ಗಾಜಿನ ಅಲಂಕಾರ ಹಾಗೂ ಬಣ್ಣ ಲೇಪನವೇ ಕಾರಣವಾಗಿದ್ದು, ಇದು ಪುರಾತನ ಕಲೆಗೆ ಎಸಗಿದ ಅಪಚಾರವಾಗಿದೆ ಎಂದು ಇದೇ ಸಂದರ್ಭದಲ್ಲಿ ದರ್ಗಾದ ಕಲಾವಿದರೊಂದಿಗೆ ಇದ್ದ ಬೆಳಗಾವಿ ಸುವರ್ಣ ಸೌಧದಲ್ಲಿನ ರಾಷ್ಟ್ರೀಯ ಲಾಂಛನ ಅಶೋಕ ಸ್ಥಂಭ ನಿರ್ಮಾತ, ಲೋಹ ಶಿಲ್ಪ ಕಲಾವಿದ ವಿಶ್ವೇಶ್ವರಯ್ಯ ಟಿ.ಎನ್. ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪುರಾತತ್ವ ಇಲಾಖೆಯು ಈ ರೀತಿಯ ಪುರಾತನ ಕಲೆಯನ್ನು ಹಾಳು ಮಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.