ರಾಯಚೂರು

ಬಿಸಿಯೂಟ ನೌಕರರ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ   ರಾಯಚೂರು  ನ.11
ಬಿಸಿಯೂಟ ನೌಕರರ ಸೇವಾ ಕಾಯಮಾತಿ, ಕೂಲಿ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಬಿಸಿಯೂಟ ನೌಕರರ ಸಂಘದ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಪಂ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ತಾಪಂ ಇಒಗೆ ಮನವಿ ಸಲ್ಲಿಸಿ, ಕಳೆದ 11 ವರ್ಷಗಳಿಂದ ರಾಜ್ಯದ ವಿವಿಧೆಡೆಯ ಶಾಲೆಗಳಲ್ಲಿ 1,03,874 ಬಿಸಿಯೂಟ ನೌಕರರು ಸಮರ್ಪಕ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸರ್ಕಾರ ಈ ಸಿಬ್ಬಂದಿಗೆ ಕನಿಷ್ಠ ವೇತನವನ್ನೂ ನೀಡುತ್ತಿಲ್ಲ ಎಂದು ಆರೋಪಿಸಿದರು.
3 ಸಾವಿರ ವೇತನ ನಿಗದಿಗೊಳಿಸಿ: 2001ರಿಂದ ಅಕ್ಷರ ದಾಸೋಹ ಯೋಜನೆಯಡಿ ದುಡಿಯುತ್ತಿರುವವರಿಗೆ ಯಾವುದೇ ಸವಲತ್ತು ನೀಡಿಲ್ಲ. ಬಿಸಿಯೂಟ ನೌಕರರಿಗೆ ನೆರೆಯ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿನ ಕೂಲಿ ನೀಡಲಾಗುತ್ತಿದ್ದು, ಕೂಡಲೇ ಸರ್ಕಾರ ಕನಿಷ್ಠ ಪ್ರತಿ ತಿಂಗಳು 3 ಸಾವಿರ ವೇತನ ನಿಗದಿ ಮಾಡಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಸಿಯೂಟದ ಖಾಸಗೀಕರಣವನ್ನು ಸರ್ಕಾರ ಮಾಡಬಾರದು. ರಾಜ್ಯದಲ್ಲಿ ಈಗಾಗಲೇ ಬಿಸಿಯೂಟದ ಖಾಸಗೀಕರಣದಿಂದಾಗಿ 40 ಸಾವಿರ ಜನ ನೌಕರಿ ಕಳೆದುಕೊಂಡಿದ್ದಾರೆ. ಇಸ್ಕಾನ್ನಂಥ ಸಂಸ್ಥೆಗಳು ಸರ್ಕಾರದ ಅನುದಾನ ಪಡೆಯುತ್ತವೆ. ಮತ್ತೊಂದೆಡೆ ಬೇರೆಯವರಿಂದಲೂ ಈ ಕಾರ್ಯಕ್ಕೆ ಕೋಟಿಗಟ್ಟಲೆ ನಿಧಿ ಸಂಗ್ರಹಿಸುತ್ತವೆ ಎಂದು ಆರೋಪಿಸಿದರು.
ಬಿಸಿಯೂಟ ಖಾಸಗೀಕರಣಕ್ಕೆ ವಿರೋಧ: ಯೋಜನೆಯ ಖಾಸಗೀಕರಣಕ್ಕೆ ಸಂಘ ವಿರೋಧಿಸುತ್ತದೆ. ಬಿಸಿಯೂಟದ ಸಂಪೂರ್ಣ ಹೊಣೆಯನ್ನು ಯೋಜನೆಯ ಅಧಿಕಾರಿಗಳಿಗೆ ಮತ್ತು ಅಡುಗೆ ಸಿಬ್ಬಂದಿಗೆ ನೀಡಬೇಕು. ಇದರಿಂದ ಶಿಕ್ಷಕರ ಮೇಲೆ ಬಿಸಿಯೂಟದ ಜವಾಬ್ದಾರಿ ಕಡಿಮೆಯಾಗಲಿದೆ.
  ಬಿಸಿಯೂಟ ಸಿಬ್ಬಂದಿ ಮಕ್ಕಳಿಗೆ ಮತ್ತು ನೌಕರರಿಗೆ ಸಾಮಾಜಿಕ ಭದ್ರತೆಯ ಭಾಗವಾಗಿ ಕೇಂದ್ರ ಜಾರಿಗೆ ತಂದಿರುವ ಜನಶ್ರೀ ಯೋಜನೆಯನ್ನು ಎಲ್ಲ ನೌಕರರಿಗೆ ವಿಸ್ತರಿಸಬೇಕೆಂದು ಒತ್ತಾಯಿಸಿದರು.
ಹಾಜರಾತಿ ಆಧಾರದಲ್ಲಿ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕದಂತೆ ಕ್ರಮ ಕೈಗೊಳ್ಳಬೇಕು. ಶಾಲೆಗಳ ವಿಲೀನ ಸಂದರ್ಭ ಶಿಕ್ಷಕರನ್ನು ವರ್ಗಾವಣೆ ಮಾಡುವಂತೆ ಸಮೀಪದ ಶಾಲೆಗಳಿಗೆ ಅಡುಗೆ ಸಿಬ್ಬಂದಿಯನ್ನೂ ವರ್ಗಾಯಿಸುವಂತೆ ಆಗ್ರಹಿಸಿದರು.
ವಜಾ ತಡೆಗೆ ಆಗ್ರಹ: ಬರ ಮತ್ತು ವಿಶೇಷ ರಜೆ ಸಂದರ್ಭದಲ್ಲಿ ಕಾರ್ಯನಿರ್ವಹಿಸಿದರೆ ಎರಡುಪಟ್ಟು ವೇತನ ನೀಡಬೇಕು. ರೋಸ್ಟರ್ ಪದ್ಧತಿ ಜಾರಿ ನೆಪವೊಡ್ಡಿ ಕೆಲವೆಡೆ 11 ವರ್ಷದಿಂದ ಸೇವೆ ಸಲ್ಲಿಸಿದ ನೌಕರರನ್ನು ವಜಾಗೊಳಿಸಲಾಗುತ್ತಿದ್ದು, ಈ ಕ್ರಮ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಪ್ರತಿ ತಿಂಗಳು ಮೊದಲ ವಾರದಲ್ಲಿಯೇ ವೇತನ ನೀಡಬೇಕು. ಶಿಕ್ಷಕರಿಗೆ ನೀಡುವಂತೆ ಬೇಸಿಗೆಯಲ್ಲಿ ರಜೆಯಿದ್ದರೂ ವೇತನವನ್ನು ನೀಡಬೇಕು.
ಬಿಸಿಯೂಟ ಯೋಜನೆ ಕಾಯಂಗೊಳಿಸಿ ನೌಕರರನ್ನು ಶಾಲಾ ಸಿಬ್ಬಂದಿಗಳೆಂದು ಪರಿಗಣಿಸಿ ನೇಮಕಾತಿ ಆದೇಶ ನೀಡಬೇಕೆಂದು ಆಗ್ರಹಿಸಿದರು.
ಅಪಘಾತ ಪರಿಹಾರಕ್ಕೆ ಒತ್ತಾಯ: ಎಲ್ಲ ಬಿಸಿಯೂಟ ಸಿಬ್ಬಂದಿಗೆ ಬಿಪಿಎಲ್ ಕಾರ್ಡ್ ನೀಡಿ ಆಹಾರ ಹಂಚಿಕೆ ಮಾಡಬೇಕು. ಸ್ಥಳೀಯ ಹಿತಾಸಕ್ತಿಗಳಿಗೆ ಅಡುಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡದಂತೆ ಹಾಗೂ ಸೇವಾ ನಿಯಮಾವಳಿಯಂತೆ ಸೌಲಭ್ಯ ಜಾರಿಗೊಳಿಸಬೇಕು.
 ಪ್ರತಿ ತಿಂಗಳು ಸಂಭಾವನೆಯನ್ನು ಸಮರ್ಪಕವಾಗಿ ನೀಡಬೇಕು. ಅಡುಗೆ ತಯಾರಕರು ಅಡುಗೆ ತಯಾರಿಸುವ ವೇಳೆ ಸಂಭವಿಸುವ ಅಪಘಾತದಿಂದ ಸುಟ್ಟ ಗಾಯಗಳಾದಲ್ಲಿ ಅಂಥವರಿಗೆ ಸರ್ಕಾರ ಪರಿಹಾರ ನೀಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಪ್ರಮುಖರಾದ ಕೆ.ಜಿ. ವೀರೇಶ್, ಡಿ.ಎಸ್. ಶರಣಬಸವ, ವೈ.ಈರಣ್ಣ, ನಾಗಮ್ಮ, ಕಲ್ಯಾಣಿ, ರಾಜೇಶ್ವರಿ, ಜಿ.ವೀರಭದ್ರ, ಶರಣಮ್ಮ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.