ಸಂಕ್ಷಿಪ್ತ ಸುದ್ದಿ
ದುರಸ್ತಿ: ಇಂದು ವಿದ್ಯುತ್ ವ್ಯತ್ಯಯ
ರಾಯಚೂರು: ತಾಲೂಕಿನ ಮಟಮಾರಿ ನೂತನ 110 ಕೆವಿ ವಿದ್ಯುತ್ ಮಾರ್ಗದಲ್ಲಿ ವಿದ್ಯುತ್ ಕಾಮಗಾರಿ ದುರಸ್ತಿ ಹಿನ್ನೆಲೆಯಲ್ಲಿ ನ.17ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆ.8ರಿಂದ ಸಂಜೆಯ 5ರವರೆಗೆ ತಾಲೂಕಿನ ಮಟಮಾರಿ ಹಾಗೂ ಗಿಲ್ಲೆಸೂಗೂರು ಗ್ರಾಮಗಳ ಸುತ್ತಲಿನ ಪ್ರದೇಶದ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಿರುವುದಿಲ್ಲ ಎಂದು ಜೆಸ್ಕಾಂ ತಿಳಿಸಿದೆ.
ನಾಳೆ ಜಿಲ್ಲಾಮಟ್ಟದ ಕ್ರೀಡಾಕೂಟ
ರಾಯಚೂರು: ಜಿಲ್ಲಾಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ ನ.18 ರಂದು ನಗರದಲ್ಲಿ ಆಯೋಜಿಸಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನ.18ರಂದು ಬೆ.10ಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಕ್ರೀಡಾಕೂಟವನ್ನು ಉದ್ಘಾಟಿಸುವರು. ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದ, ಶಾಸಕರು, ಜಿಲ್ಲಾಡಳಿತದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಯುವಜನ ಸೇವಾ ಕ್ರೀಡಾ ಇಲಾಖೆ ತಿಳಿಸಿದೆ.
ವೆಲ್ಡಿಂಗ್ ತರಬೇತಿ:
ನಾಳೆ ಸಂದರ್ಶನ
ರಾಯಚೂರು: ಜಿಲ್ಲಾ ಕೈಗಾರಿಕೆ ಕೇಂದ್ರದಿಂದ ಮೆಷಿನ್ ವೆಲ್ಡಿಂಗ್ ತರಬೇತಿ ಕುರಿತು ಆರು ವಾರಗಳ ತರಬೇತಿ ದೇವದುರ್ಗ ತಾಲೂಕಿನಲ್ಲಿ ನವೆಂಬರ್ ಕೊನೆಗೆ ಆಯೋಜಿಸಿದ್ದು, ಆಸಕ್ತರು ದಾಖಲೆಗಳೊಂದಿಗೆ ನ.18ರಂದು ಸಂದರ್ಶನಕ್ಕೆ ಹಾಜರಾಗಲು ಸೂಚಿಸಲಾಗಿದೆ. 18-40 ವರ್ಷ ವಯೋವಾನದ ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಲು ಅರ್ಹರು. ದಾಖಲೆಗಳೊಂದಿಗೆ 18ರಂದು ದೇವದುರ್ಗದ ಬಿಇಒ ಕಚೇರಿ ಬಳಿಯ ಗುರುಭವನದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಲಾಗಿದೆ.
ವಿದ್ಯುತ್ ಸ್ಪರ್ಶ: ಮಹಿಳೆ ಸಾವು
ರಾಯಚೂರು: ನಗರದ ಎಲ್‌ಬಿಎಸ್ ಬಡಾವಣೆಯಲ್ಲಿ ಶನಿವಾರ ವಿದ್ಯುತ್ ಸ್ಪರ್ಶದಿಂದ ರೇಣುಕಾ (32) ಮೃತಪಟ್ಟಿದ್ದಾರೆ. ಮನೆಯಲ್ಲಿ ಫ್ಯಾನ್ ಸ್ವಿಚ್ ಆನ್ ಮಾಡಲು ಮುಂದಾದಾಗ ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಲಾಕ್ ಕಾಂಗ್ರೆಸ್
ಸಭೆ 19ರಂದು
ದೇವದುರ್ಗ: ದೇವದುರ್ಗ ತಾಲೂಕಿನ ಅರಕೇರಾ, ದೇವದುರ್ಗ ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯಕಾರಿ ಮಂಡಳಿ ಸಭೆಯನ್ನು ನ.19ರಂದು ಕರೆಯಲಾಗಿದೆ ಎಂದು ಪಕ್ಷದ ದೇವದುರ್ಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ, ಅರಕೇರಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸ್ಸಯ್ಯ ಶಾಖೆ ತಿಳಿಸಿದ್ದಾರೆ. ಬೆಳಗ್ಗೆ 11ಕ್ಕೆ ಪಕ್ಷದ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಲೋಕಸಭೆ ಚುನಾವಣೆ, ಪಕ್ಷದ ಸದಸ್ಯತ್ವ ನೋಂದಣಿ, ಬ್ಲಾಕ್ ಮಟ್ಟದಲ್ಲಿ ಸಾರ್ವಜನಿಕರ ಕುಂದುಕೊರತೆ ಪರಿಶೀಲನೆ ಮತ್ತಿತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತದೆ. ಸಭೆಯಲ್ಲಿ ಶಾಸಕ ಎ.ವೆಂಕಟೇಶ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತಕುಮಾರ, ಕೆಪಿಸಿಸಿ ಸದಸ್ಯ ಹಾಗೂ ಮಾಜಿ ಎಂಲ್ಸಿ ಬಸವರಾಜ ಪಾಟೀಲ್ ಇಟಗಿ, ಆರ್‌ಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಾಜಶೇಖರ ನಾಯಕ ಮತ್ತಿತರರು ಪಾಲೊಳ್ಳುವರು.
ಮಕ್ಕಳ ದಿನಾಚರಣೆ
ರಾಯಚೂರು: ನಗರದಲ್ಲಿ ನ.19ರಂದು ಜಿಲ್ಲಾ ಸೇವಾ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ನ್ಯಾಯವಾದಿಗಳ ಸಂಘ ಸೇರಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಸಮಾರಂಭ ಆಯೋಜಿಸಲಾಗಿದೆ. ಇಲ್ಲಿನ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ನ.19ರಂದು ಬೆ.9 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಪಿ.ಕೃಷ್ಣಭಟ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು, ಎಸ್ಪಿ ಎಂ.ಎನ್. ನಾಗರಾಜ್, ಜಿಪಂ ಸಿಇಒ ಡಾ. ಮುದ್ದುಮೋಹನ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ದೊರೆಸ್ವಾಮಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಭಾನುರಾಜ್, ಡಿಡಿಪಿಐ ರಾಮಾಂಜನೇಯ, ಯುನಿಸೆಫ್ ಮಕ್ಕಳ ಸಂರಕ್ಷಣಾ ಯೋಜನಾಧಿಕಾರಿ ರಾಘವೆಂದ್ರ ಭಟ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ.
ಮಕ್ಕಳ ಜ್ಞಾನವೃದ್ಧಿಗೆ
ಒತ್ತು ನೀಡಲು ಸಲಹೆ
ದೇವದುರ್ಗ: ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಮಕ್ಕಳನ್ನೇ ದೇಶದ ಆಸ್ತಿಯಾಗಿಸುವತ್ತ ಪಾಲಕರು ಹೆಚ್ಚು ಒತ್ತು ನೀಡುವಂತೆ ದ್ವಿತೀಯ ವರ್ಷದ ಡಿಎಡ್ ಪ್ರಶಿಕ್ಷಣಾರ್ಥಿ ಗಂಗಮ್ಮ ಸಲಹೆ ನೀಡಿದರು. ಪಟ್ಟಣದ ಬಸವೇಶ್ವರ ಡಿಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಭಾವಿ ಶಿಕ್ಷಕರು ಈ ನಿಟ್ಟಿನಲ್ಲಿ ಶ್ರದ್ಧೆ, ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದರು. ಪ್ರಾಚಾರ್ಯ ಬಸವರಾಜ ಬ್ಯಾಗವಾಟ್, ಡಾನ್ ಬಾಸ್ಕೊ ಸಂಸ್ಥೆಯ ಫಾದರ್ ಜೇಮ್ಸ್ ಪೌಲ್, ಎನ್ನೆಸ್ಸೆಸ್ ಸಂಯೋಜಕ ಪ್ರಭಣ್ಣಗೌಡ, ಉಪನ್ಯಾಸಕರಾದ ಕೇಮಣ್ಣ, ಮಹೇಂದ್ರ, ಮರಿಯಪ್ಪ ಇದ್ದರು. ಪ್ರಶಿಕ್ಷಣಾರ್ಥಿಗಳಾದ ಕಾಶಿಬಾಯಿ, ತಾಯಪ್ಪ, ನಾಗಮ್ಮ ಸೇರಿ ಅನೇಕರಿದ್ದರು. ಪ್ರಶಿಕ್ಷಣಾರ್ಥಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

