ರಾಯಚೂರು

ಬಣ ರಾಜಕೀಯದಲ್ಲಿ ಬೆಂದ 'ಹಸ್ತ'

Published On :

ಲಿಂಗಸ್ಗೂರು:  ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ, ಎರಡು ಬಣಗಳ ಮಧ್ಯದ ಒಣ ಪ್ರತಿಷ್ಠೆ ಹಾಗೂ ಪಕ್ಷದ ಕೆಲ ತಾಪಂ ಸದಸ್ಯರ ಅಸಮಾಧಾನ ಭುಗಿಲೆದ್ದಿದೆ. ಇವೆಲ್ಲದರ ಮಧ್ಯೆ ತಾಪಂ ಅಧ್ಯಕ್ಷರ ವಿರುದ್ಧ ನಡೆದ ಅವಿಶ್ವಾಸ ನಿರ್ಣಯವೂ ಅಂಗೀಕಾರಗೊಂಡಿದೆ.
ಉಳಿದ ಅವಧಿಗೆ ಅಧ್ಯಕ್ಷರ ನೇಮಕಕ್ಕೆ ನ.28ರ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್‌ಗೆ ಅಗತ್ಯ ಸದಸ್ಯರ ಬಹುಮತವಿದ್ದರೂ ಅಧಿಕಾರ ಪಡೆಯಲು ಪೈಪೋಟಿ ನಡೆಸುವ ಪರಿಸ್ಥಿತಿ ಬಂದೊದಗಿದೆ.
ತಾಪಂ ಬಲಾಬಲ: ತಾಪಂ ಒಟ್ಟು 26 ಸದಸ್ಯರಲ್ಲಿ 13 ಕಾಂಗ್ರೆಸ್, 6 ಜೆಡಿಎಸ್, 6 ಬಿಜೆಪಿ ಸದಸ್ಯರು ಮತ್ತು ಒಬ್ಬ ಪಕ್ಷೇತರ ಸದಸ್ಯ ಆಯ್ಕೆಗೊಂಡಿದ್ದರು. ತಾಪಂ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾದ ಪ್ರಯುಕ್ತ 2012 ಅ.8ರಂದು ಕಾಂಗ್ರೆಸ್‌ನ ಲಲಿತಮ್ಮ ಶಿವನಗೌಡ ಪಾಟೀಲ್ ಆಯ್ಕೆಯಾಗಿದ್ದರು. ಕಾಂಗ್ರೆಸ್ ನಾಯಕರ ಗುಂಪುಗಾರಿಕೆ, ಕೆಲ ಸದಸ್ಯರ ಅಸಮಧಾನದಿಂದ ಕೇವಲ 18 ತಿಂಗಳ ಕಾಲಾವಧಿಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ನಿರ್ಧರಿಸಿದರು.
ಅಂಗೀಕಾರ: ಇದರಿಂದ ಕಾಂಗ್ರೆಸ್‌ನಿಂದ ಆಯ್ಕೆಗೊಂಡ 13 ಸದಸ್ಯರಿಗೆ ಪಕ್ಷದ ಜಿಲ್ಲಾಧ್ಯಕ್ಷ ಎ.ವಸಂತಕುಮಾರ ವಿಪ್ ಜಾರಿ ಮಾಡಿದ್ದರೂ 8 ಸದಸ್ಯರು ವಿಪ್ ಉಲ್ಲಂಘಿಸಿ ಅ.21ರಂದು ನಡೆದ ಅವಿಶ್ವಾಸ ಮಂಡನೆ ಸಭೆಯಲ್ಲಿ ಪಕ್ಷ ಭೇದ ಮರೆತು ಕಾಂಗ್ರೆಸ್‌ನ 8, ಜೆಡಿಎಸ್‌ನ 6, ಬಿಜೆಪಿಯ ಒಬ್ಬ ಮತ್ತು ಪಕ್ಷೇತರ ಒಬ್ಬ ಸದಸ್ಯ ಸೇರಿ 16 ಸದಸ್ಯರು ಅವಿಶ್ವಾಸ ನಿರ್ಣಯ ಪರ ಕೈ ಎತ್ತುವ ಮೂಲಕ ಅವಿಶ್ವಾಸ ನಿರ್ಣಯ ಅಂಗೀಕಾರಗೊಳಿಸಲಾಯಿತು. ಅಂದು ಬಿಜೆಪಿ 4 ಸದಸ್ಯರು ಗೈರಾಗಿದ್ದರು.
ಇದರಿಂದ ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಮಧ್ಯೆ ಪೈಪೋಟಿ ಏರ್ಪಟ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಿದವು. ತಾಪಂ ಅಧ್ಯಕ್ಷ ಗಾದಿಗೆ ಕಾಂಗ್ರೆಸ್‌ನ 8 ಹಾಗೂ ಜೆಡಿಎಸ್‌ನ 6 ಸದಸ್ಯರು ಸೇರಿ ಒಟ್ಟು 14 ಸದಸ್ಯರು ಹೊಂದಾಣಿಕೆ ಮಾಡಿಕೊಂಡು ಮೈತ್ರಿ ಅಧಿಕಾರ ನಡೆಸಲು ಎಲ್ಲಿಲ್ಲದ ಪ್ರಯತ್ನ ನಡೆಸಿದರು.
ಬಿಜೆಪಿ, ಜೆಡಿಎಸ್ ವಿಪ್ ಜಾರಿ: ಏತನ್ಮಧ್ಯೆ ಭಾನುವಾರ ಮಸ್ಕಿಯಲ್ಲಿ ಶಾಸಕ ಪ್ರತಾಪಗೌಡ ಪಾಟೀಲರ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಬಿಜೆಪಿಯ 5 ಸದಸ್ಯರು ಕಾಂಗ್ರೆಸ್ ಸೇರ್ಪಡೆಗೊಂಡಿರುವುದಾಗಿ ತಿಳಿದು ಬಂದಿದ್ದು, ಬಿಜೆಪಿ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ವಿಪ್ ಜಾರಿ ಮಾಡಿದ್ದಾರೆ. ಇನ್ನು ಜೆಡಿಎಸ್ ಕೂಡ ಇದಕ್ಕೆ ಹೊರತಾಗಿಲ್ಲ. ಜೆಡಿಎಸ್ ನಿರ್ದೇಶನ ನೀಡಿದ ಅಭ್ಯರ್ಥಿಗೆ ಮತ ಹಾಕುವಂತೆ ರಾಜ್ಯಾಧ್ಯಕ್ಷರು ವಿಪ್ ಜಾರಿ ಮಾಡಿದ್ದು, ತಾಲೂಕಾಧ್ಯಕ್ಷ ಶಿವಾನಂದ ಐದನಾಳ್ ತಾಪಂ ಸದಸ್ಯರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.
ತಾಪಂ.ನ ಒಟ್ಟು 26 ಸದಸ್ಯರಲ್ಲಿ ಕಾಂಗ್ರೆಸ್ 13 ಸದಸ್ಯರ ಬಲ ಹೊಂದಿದ್ದರೂ ಕಾಂಗ್ರೆಸ್ ಕೆಲ ನಾಯಕರಲ್ಲಿನ ಗುಂಪುಗಾರಿಕೆ, ಒಳಜಗಳ, ಅಸಮಾಧಾನದ ಅಲೆಯಿಂದ ಅಧಿಕಾರ ಚುಕ್ಕಾಣಿ ಹಿಡಿಯಲು ಅನ್ಯ ಪಕ್ಷಗಳ ಜೊತೆ ತೀವ್ರ ಪೈಪೋಟಿ ನಡೆಸುವ ಪರಿಸ್ಥಿತಿ ಬಂದೊದಗಿದೆ. ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರರ ಒಂದು ಬಣ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಶರಣಪ್ಪ ಮೇಟಿಯ ಇನ್ನೊಂದು ಬಣ ಹಾಗೂ ಜೆಡಿಎಸ್ ಶಾಸಕ ಮಾನಪ್ಪ ವಜ್ಜಲ್ ಗುಂಪಿನ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ.
ತಾಪಂ ಅಧ್ಯಕ್ಷ ಗಾದೆಯ ಪೈಪೋಟಿಯಲ್ಲಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನದಲ್ಲಿ ತೊಡಗಿದ್ದು, ಅಗತ್ಯ ಬಹುಮತ ಹೊಂದಲು ಕೆಲ ಸದಸ್ಯರಿಗೆ ಆಸೆ, ಆಮಿಷಗಳ ಮೂಲಕ ತಮ್ಮ ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆಂದು ತಿಳಿದು ಬಂದಿದೆ.
ಯಾವ ಪಕ್ಷದಲ್ಲಿ ಎಷ್ಟು ಜನ ಸದಸ್ಯರು ಸ್ಥಿರವಾಗಿ ಉಳಿಯಲಿದ್ದಾರೆ ಎಂಬ ಕೂತೂಹಲ ಕೆರಳಿಸಿದ್ದು, ಈ ಎಲ್ಲ ಗೊಂದಲ, ಗುಂಪುಗಾರಿಕೆ, ಪ್ರತಿಷ್ಠೆಗಳ ಮಧ್ಯೆ ನ.28ರಂದು ನಡೆಯುವ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಸ್ಥಾನ ಯಾರ ಮುಡಿಗೇರಲಿದೆ ಎಂಬುದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.