ಮೌಲ್ಯಾಂಕನ ವರದಿಗೆ ವಿರೋಧ
ಕನ್ನಡಪ್ರಭ ವಾರ್ತೆ , ರಾಯಚೂರು , ನ.30
ಕರ್ನಾಟಕ ಸರ್ಕಾರದ ಶಾಲಾ ಗುಣಮಟ್ಟದ ಮೌಲ್ಯಾಂಕನ ಅಂಗೀಕರಣ ಪರಿಷತ್ತಿನಿಂದ ಈಚೆಗೆ ನಡೆಸಿದ ಶಾಲೆಗಳ ಗುಣಮಟ್ಟದ ವರದಿಯು ತೀರಾ ಅವೈಜ್ಞಾನಿಕವಾಗಿದೆ. ವರದಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟವಿಲ್ಲ ಎಂದು ದಾಖಲಿಸಿದ್ದು, ಇಂಥ ವರದಿಯಿಂದ ಶಿಕ್ಷಕ ಸಮುದಾಯಕ್ಕೆ ನೋವಾಗಿದೆ. ಈ ವರದಿ ಹಿಂಪಡೆಯುವಂತೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ಒತ್ತಾಯಿಸಿದೆ.
ಈ ಕುರಿತು ನಗರದಲ್ಲಿ ಶನಿವಾರ ಡಿಡಿಪಿಐ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನೆ ಮೌನ ಮೆರವಣಿಗೆ ನಡೆಸಿದ ಸಂಘದ ಪದಾಧಿಕಾರಿಗಳು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ನೋವು: ಶಾಲೆಗಳ ಗುಣಮಟ್ಟದ ಕುರಿತು ನಡೆದ ಸಮೀಕ್ಷೆಯಿಂದ ಶಿಕ್ಷಕರ ಬಗ್ಗೆಯೇ ಜನತೆ ಅನುಮಾನದಿಂದ ನೋಡುವಂತಾಗಿದೆ. ವರದಿಯು ಶಿಕ್ಷಕ ಸಮುದಾಯಕ್ಕೆ ನೋವುಂಟು ಮಾಡಿದೆ. ರಾಜ್ಯದಲ್ಲಿ ಸರ್ಕಾರಿ ಶಾಲೆಗಳ ಶಿಕ್ಷಕರು ಅನ್ಯ ಕೆಲಸ ಕಾರ್ಯಗಳಿಗೆ ನೇಮಕಗೊಳ್ಳುತ್ತಿದ್ದಾರೆ. ಅದರ ಹೊರತಾಗಿಯೂ ಲಭ್ಯ ಸಮಯದಲ್ಲಿಯೇ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆಂದು ತಿಳಿಸಿದರು.
ಗುಣಮಟ್ಟ: ಮಕ್ಕಳ ವ್ಯಾಸಂಗಕ್ಕೆ ಅನ್ಯಾಯವಾಗದಂತೆ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಮೀಕ್ಷೆಯ ಪ್ರಕಾರ ಒಂದೂ ಎ- ಪ್ಲಸ್ ಗ್ರೇಡ್ ಶಾಲೆಯಿಲ್ಲ ಎಂದು ಹೇಳಲಾಗಿದೆ. ಆದರೆ ಅನೇಕ ಶಾಲೆಗಳು ಅಂಥ ಗುಣಮಟ್ಟ ಕಾಯ್ದುಕೊಂಡಿವೆ ಎಂದು ತಿಳಿಸಿದರು.
ಪ್ರತಿಭಾ ಕಾರಂಜಿ ಕಾರ್ಯಕ್ರಮ, ಒಲಿಂಪಿಯಾಡ್ ಸ್ಪರ್ಧೆ ಸೇರಿ ವಿವಿಧ ಸಂದರ್ಭದಲ್ಲಿ ಜಿಲ್ಲೆಯ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಅಪ್ರತಿಮ ಸಾಧನೆ ಮೆರೆದಿರುವುದು ಅವರ ಬೌದ್ಧಿಕ ಮಟ್ಟ ಸಾಬೀತು ಪಡಿಸಿದೆ. ಆದರೆ ಸಮೀಕ್ಷೆಯಲ್ಲಿ ವಾಸ್ತವಾಂಶ ಮರೆಮಾಚಲಾಗಿದೆ ಎಂದು ಟೀಕಿಸಿದರು.
ಸರ್ಕಾರಿ ಶಾಲೆಗಳಿಗೆ ರಾಜ್ಯ ಸರ್ಕಾರ ಸೌಲಭ್ಯಗಳನ್ನು ಒದಗಿಸುತ್ತಿಲ್ಲ. ಇಂದಿಗೂ ಅನೇಕ ಸರ್ಕಾರಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆಯಿದೆ. ಶಿಕ್ಷಕರ ನೇಮಕಾತಿ ಅಗತ್ಯಕ್ಕೆ ತಕ್ಕಂತೆ ಮಾಡುತ್ತಿಲ್ಲ. ಶಾಲೆಗಳಲ್ಲಿ ಆಯಾಗಳನ್ನು ನೇಮಿಸಬೇಕು. ಎಲ್ಲ ಶಾಲೆಗಳಲ್ಲಿ ಸಮಾನ ರೀತಿಯ ಶಿಕ್ಷಣದ ಬೋಧನೆ ನಡೆಸಬೇಕೆಂದು ಆಗ್ರಹಿಸಿದರು.
ಶೈಕ್ಷಣಿಕ ಪ್ರಗತಿ: ಸರ್ಕಾರಿ ಶಾಲೆಗಳ ಪ್ರಗತಿಯಲ್ಲಿ ಸ್ಥಳೀಯರ ಸಹಕಾರವೂ ಅವಶ್ಯಕ. ಸಮುದಾಯದ ಭಾಗಿತ್ವವಿಲ್ಲದೇ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರಷ್ಟೇ ಏಕಾಂಗಿಯಾಗಿ ಮಹತ್ತರವಾದದನ್ನು ಸಾಧಿಸುವುದು ಕಷ್ಟ ಸಾಧ್ಯ. ಶಿಕ್ಷಕರನ್ನು ಸರ್ಕಾರದ ವಿವಿಧ ಕಾರ್ಯಕ್ರಮಗಳಡಿ ಸೇವೆ ಸಲ್ಲಿಸಲು ನಿಯೋಜಿಸಲಾಗುತ್ತಿದೆ. ಇದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಡಚಣೆಯಾಗುತ್ತಿದೆ ಎಂದು ದೂರಿದರು.
ಶಿಕ್ಷಕರನ್ನು ಕೇವಲ ಬೋಧನೆ ಕಾರ್ಯಕ್ಕೆ ತೊಡಗಲು ಅವಕಾಶ ನೀಡಬೇಕು.ಖಾಸಗಿ ಶಾಲೆಗಳ ಒತ್ತಡಕ್ಕೆ ಮಣಿದಿರುವ ಸರ್ಕಾರ ಅವುಗಳಿಗೆ ಅನುಕೂಲವಾಗುವಂತೆ ಸಮೀಕ್ಷೆಯ ವರದಿಯನ್ನು ತಯಾರಿಸುವುದು ಅನುವು ಮಾಡಿದೆ ಎಂದು ಟೀಕಿಸಿದರು.
ರಾಜ್ಯ ಸರ್ಕಾರ ಸಮೀಕ್ಷೆಯನ್ನು ಸಂಪೂರ್ಣ ತಿರಸ್ಕರಿಸಬೇಕು ಇಲ್ಲವೇ ಶಿಕ್ಷಕರು ಮತ್ತು ಸಾರ್ವಜನಿಕರೊಂದಿಗೆ ವರದಿಯ ಬಗ್ಗೆ ಚರ್ಚೆಗೊಳಪಡಿಸಬೇಕು. ಸಮಾನ ಶಾಲಾ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಎಲ್ಲ ಶಾಲೆಗಳಿಗೆ ವಿಷಯವಾರು, ತರಗತಿವಾರು ಶಿಕ್ಷಕರನ್ನು ಕೂಡಲೇ ನೇಮಿಸಬೇಕು. ಸರ್ಕಾರಿ ಶಾಲೆಗಳ ವಿಲೀನಗೊಳಿಸುವುದನ್ನು ಅಥವಾ ಮುಚ್ಚುವುದನ್ನು ಕೈಬಿಡಬೇಕು. ಸರ್ಕಾರಿ ಶಾಲೆಗಳಿಗೆ ಪರಿಚಾರಕಿಯರನ್ನು ನೇಮಿಸುವಂತೆ ಒತ್ತಾಯಿಸಿದರು.
ಸರ್ಕಾರಿ ಶಾಲೆಗಳ ಶಿಕ್ಷಕರನ್ನು ಬೋಧನೇತರ ಕೆಲಸ ಕಾರ್ಯಗಳಿಗೆ ನೇಮಿಸಬಾರದು. ಶಿಕ್ಷಣ ಸ್ಥಾಯಿ ಸಮಿತಿಯು ತಿಂಗಳಿಗೊಮ್ಮೆ ಸಭೆಗಳನ್ನು ನಡೆಸಿ, 6 ತಿಂಗಳಿಗೊಮ್ಮೆ ಶಾಲೆಗಳಿಗೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯನ್ನು ನಡೆಸಿ ನಿರ್ಧಾರ ಕೈಗೊಂಡು ಜಾರಿಗೆ ತರುವಂತೆ ಆಗ್ರಹಿಸಿದರು.
ಸಂಘದ ಜಿಲ್ಲಾಧ್ಯಕ್ಷ ತಿಮ್ಮಣ್ಣ, ಜಿಲ್ಲಾ ಕಾರ್ಯದರ್ಶಿ ಅಬ್ದುಲ್ ಅಜೀಜ್, ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆಯ ಅಧ್ಯಕ್ಷ ಜಯಣ್ಣ, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ತಿಮ್ಮಪ್ಪ, ಮಾನವಿ ತಾಲೂಕು ಅಧ್ಯಕ್ಷ ಸುರೇಶ್ ಕುರ್ಡಿ ಸೇರಿದಂತೆ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

