ರಾಯಚೂರು

ತಹಸೀಲ್ದಾರರು ಕಚೇರಿಯಲ್ಲಿ ಇಲ್ಲ...

Published On :

ಕನ್ನಡಪ್ರಭ ವಾರ್ತೆ ಟಿ ರಾಯಚೂರು ಟಿ ಅ.26
'ತಹಸೀಲ್ದಾರ್ ಕಚೇರಿಯಲ್ಲಿಲ್ಲ...'
ಈ ಡೈಲಾಗ್ ಈಗ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ!
ಹೌದು. ತಾಲೂಕಿನ ತಹಸೀಲ್ದಾರ್ ಹುದ್ದೆಗೆ ಕೆಲ ದಿನಗಳ ಹಿಂದೆ ವರ್ಗವಾಗಿ ಬಂದು ಅಧಿಕಾರ ಸ್ವೀಕರಿಸದೇ ಅತಂತ್ರ ಸ್ಥಿತಿಯಲ್ಲಿದ್ದ ಅಶೋಕ ಜಹಾಗೀರದಾರ್ ಅವರ ವಿರುದ್ಧ ಜಿಲ್ಲಾಡಳಿತವು ಕರ್ತವ್ಯ ಲೋಪದ ಪರಿಷ್ಕೃತ ದೋಷಾರೋಪ ಪಟ್ಟಿಯನ್ನು ರಾಜ್ಯ ಕಂದಾಯ ಇಲಾಖೆಗೆ ಸಲ್ಲಿಸಿದೆ. ಇದರಿಂದಾಗಿ ಮತ್ತಷ್ಟು ಅವಧಿಗೆ ತಹಸೀಲ್ದಾರ್ ಹುದ್ದೆ ಖಾಲಿ ಬೀಳುವುದು ಬಹುತೇಕ ನಿಶ್ಚಿತವಾಗಿದೆ.
ಕಳೆದ ಅವಧಿಯಲ್ಲಿ ರಾಯಚೂರು ತಾಲೂಕು ತಹಸೀಲ್ದಾರ್ ಆಗಿದ್ದಾಗ ಅಶೋಕ ಜಹಾಗೀರದಾರ್ ಅವರ ಅಸಮರ್ಪಕ ಕಾರ್ಯ ನಿರ್ವಹಣೆಯ ಬಗ್ಗೆಯೇ ಜಿಲ್ಲಾಡಳಿತವು ಐದು ಪ್ರಮುಖ ದೋಷಾರೋಪಗಳಿರುವ ಮಾಹಿತಿಯನ್ನು ಕಂದಾಯ ಇಲಾಖೆಗೆ  ಕಳಿಸಿದ್ದು, ಆರೋಪ ಹೊತ್ತ ಅಧಿಕಾರಿಯನ್ನು ರಾಯಚೂರು ತಹಸೀಲ್ದಾರ್ ಆಗಿ ನೇಮಿಸಿದಲ್ಲಿ ಇಲಾಖೆ ತನಿಖೆಗೆ ಅಡಚಣೆಯಾಗಲಿದೆ ಎಂಬ ಕಾರಣವನ್ನು ಸರ್ಕಾರದ ಮುಂದಿರಿಸಿದೆ.
ಅ.23ರಂದು ಕಂದಾಯ ಇಲಾಖೆಗೆ ದೋಷಾರೋಪ ಪತ್ರ ಕಳಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು, ಅಶೋಕ ಜಹಾಗೀರದಾರ್ ಸ್ಥಳೀಯ ಸಂಸ್ಥೆಯ ಚುನಾವಣೆ ಸಂದರ್ಭ ರಾಜ್ಯ ಚುನಾವಣಾಧಿಕಾರಿಗಳ ಆದೇಶ ಪಾಲಿಸಿಲ್ಲ. ಭಾವಚಿತ್ರವಿರುವ ಗುರುತಿನ ಚೀಟಿ ನೀಡಿಕೆಯಲ್ಲಿನ ವೈಫಲ್ಯದಿಂದ ಒಟ್ಟಾರೆ ಚುನಾವಣೆ ಪ್ರಕ್ರಿಯೆಯಲ್ಲಿ ಅನಾವಶ್ಯಕ ಗೊಂದಲವಾಗಿತ್ತೆಂದು ತಿಳಿಸಿದ್ದಾರೆ.
ತಿಂಗಳಲ್ಲಿ 2 ಪ್ರಮಾಣ ಪತ್ರ: ತಾಲೂಕಿನ ಚಿಕ್ಕಮಂಚಾಲಿಯ ಗುರುರಾಜ ಅವರ ತಂದೆ ಈರಣ್ಣ ಎಂಬುವವರು ಸರ್ಕಾರಿ ನೌಕರರಾಗಿದ್ದು, ಅವರ 16.06.2012ರಂದು ಮೃತಪಟ್ಟಿದ್ದು, ಕುಟುಂಬದಲ್ಲಿ ಬೇರಾರೂ ಸರ್ಕಾರಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ದೃಢೀಕರಣ ಪತ್ರ ತಹಸೀಲ್ದಾರ್ ಮೊದಲು ನೀಡಿ, ಆನಂತರದಲ್ಲಿ  ಅರ್ಜಿದಾರರು ಸಲ್ಲಿಸಿದ ಅರ್ಜಿ ಪರಿಗಣಿಸಿ ಈರಣ್ಣ ಅವರು ಜೀವಂತವಾಗಿದ್ದಾರೆ. ಒಕ್ಕಲುತನ ಮಾಡುತ್ತಿದ್ದಾರೆಂದು ಪ್ರಮಾಣ ಪತ್ರ ನೀಡಿದ್ದಾರೆಂದು ಪತ್ರದಲ್ಲಿ ತಿಳಿಸಿದ್ದಾರೆ. ಹೀಗೆ ಒಂದೇ ತಿಂಗಳಲ್ಲಿ ಎರಡು ಪ್ರಮಾಣಪತ್ರ ನೀಡುವ ಮೂಲಕ ಲೋಪ ಎಸಗಿದ್ದಾರೆಂದು ದೋಷಾರೋಪದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷ ಬರ ಪರಿಸ್ಥಿತಿಯ ನಿಭಾಯಿಸಲು ಮೇಲಿನ ತೊಂದರೆಯಾಗದಂತೆ ಮೇವಿನ ಬ್ಯಾಂಕ್ ತೆರೆಯಲಾಗಿತ್ತು. ಯರಗೇರಾ ಮೇವು ಬ್ಯಾಂಕಿನಲ್ಲಿ 91 ಟನ್, ಚಂದ್ರಬಂಟಾ ಮೇವು ಬ್ಯಾಂಕಿನಲ್ಲಿ 92 ಟನ್ ಮೇವು ಸಂಗ್ರಹಿಸಲಾಗಿತ್ತು. ಮೇವು ಸಂಗ್ರಹಣೆ ಮತ್ತು ವಿತರಣೆಯಲ್ಲಿ ತಹಸೀಲ್ದಾರ್ ಕರ್ತವ್ಯ ಲೋಪ ಎಸಗಿದ್ದರು. ಮೇವು ಖರೀದಿಗೆ ಪ್ರತಿಯಾಗಿ ದಾಖಲೆ ಸಮರ್ಪಕವಾಗಿ ನಿರ್ವಹಿಸಿಲ್ಲ. ಇದರಿಂದ ಅವರು ಕರ್ನಾಟಕ ಆರ್ಥಿಕ ನೀತಿ ಸಂಹಿತೆಯ ನಿಯಮ ಉಲ್ಲಂಘಿಸಿದ ಬಗ್ಗೆ ಸಹಾಯಕ ಆಯುಕ್ತರು ತನಿಖೆ ನಡೆಸಿ 23.06.2012ರಲ್ಲಿ ವರದಿ ಸಲ್ಲಿಸಿದ ಬಗ್ಗೆ ಕಂದಾಯ ಇಲಾಖೆ ಗಮನ ಸೆಳೆಯುವ ಕಾರ್ಯ ಜಿಲ್ಲಾಧಿಕಾರಿ ಮಾಡಿದ್ದಾರೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು 2012ರ ಡಿ.14ರಂದು ನೀಡಿದ ಆದೇಶದಂತೆ ತಹಸೀಲ್ದಾರ್ ಹುದ್ದೆಗೆ ಪುನಾ ಆಗಮಿಸಿದ ಅಶೋಕ ಜಹಾಗೀರದಾರ್ ಅವರಿಗೆ ಹಾಗೂ ಆಗಿನ ಪರೀಕ್ಷಾರ್ಥ ಸಹಾಯಕ ಆಯುಕ್ತರ ಮಧ್ಯೆ ವಿವಿಧ ಶಾಖೆಗಳನ್ನು ಹಂಚಿಕೆ ಮಾಡಿ ಅಧಿಕಾರ ನೀಡಲಾಗಿತ್ತು. ಅವರು ಈ ಸಂದರ್ಭದಲ್ಲಿಯೂ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿದ್ದು, ಡಿಸಿ ಸಭೆಗೆ ಗೈರು ಹಾಜರಾಗುವ ಮೂಲಕ ಬೇಜವಾಬ್ದಾರಿತನ ಪ್ರದರ್ಶಿಸಿದ್ದಾರೆಂದು ದೋಷಾರೋಪದಲ್ಲಿ ವಿವರಿಸಲಾಗಿದೆ.
ವಿಲೇವಾರಿಯಾಗಿಲ್ಲ: ಸರ್ಕಾರದ ಮಹಾತ್ವಾಕಾಂಕ್ಷೆಯ ಸಕಾಲ ಯೋಜನೆಯಡಿ 438 ಅರ್ಜಿಗಳು ನಿಗದಿತ ಕಾಲಮಿತಿಯಲ್ಲಿ ವಿಲೇವಾರಿಗೊಳ್ಳದೇ ಹಾಗೆಯೇ ಉಳಿದಿರುವುದು ಇವರ ಅಧಿಕಾರವಧಿಯಲ್ಲಿ ಪತ್ತೆಯಾಗಿದೆ. ನೆಮ್ಮದಿ ಮತ್ತು ಸಕಾಲ ಯೋಜನೆಗಳ ಸಮರ್ಪಕ ಜಾರಿಯಲ್ಲಿ ವಿಫಲರಾಗಿರುವುದು ಆಡಳಿತ ಸುಧಾರಣೆ ಇಲಾಖೆಯ ರಾಜ್ಯ ಕಾರ್ಯದರ್ಶಿಗಳೊಂದಿಗೆ ಸಂವಾದ ಸಭೆಯಲ್ಲಿ ಬಯಲಾಗಿದೆ.
ಹೀಗೆ ಅನೇಕ ಸಂದರ್ಭದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿ ಲೋಪ ಎಸಗಿರುವ ಅಶೋಕ ಜಹಾಗೀರದಾರ್ ಅವರನ್ನು ಪುನಾ ರಾಯಚೂರು ತಾಲೂಕು ತಹಸೀಲ್ದಾರ್ ಹುದ್ದೆಗೆ ನೇಮಿಸಿದ ಕಂದಾಯ ಇಲಾಖೆಯ ಕ್ರಮದ ಬಗ್ಗೆ ಆಕ್ಷೇಪಿಸಿ ಹಾಗೂ ವರ್ಗಾವಣೆ ಯನ್ನು ತಡೆಯುವಂತೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಕಂದಾಯ ಇಲಾಖೆಗೆ ದೋಷಾರೋಪ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.