'ಹೊಸ ಪಿಂಚಣಿ ಯೋಜನೆ ಬೇಡ'
ಕನ್ನಡಪ್ರಭ ವಾರ್ತೆ, ರಾಯಚೂರು, ಆ.2
ಕೇಂದ್ರ ಸರ್ಕಾರವು ನೂತನ ಪಿಂಚಣಿ ಯೋಜನೆಯ ಮಸೂದೆ ದೇಶದಲ್ಲಿ ಜಾರಿಗೆ ತರಲು ಮುಂದಾಗಿರುವ ಕ್ರಮವನ್ನು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ತೀವ್ರ ವಿರೋಧಿಸಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.
ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಮನವಿ ಸಲ್ಲಿಸಿ, ನಿವೃತ್ತಿ ವೇತನ ಎಂಬುದು ಕಾನೂನಾತ್ಮಕ ಹಕ್ಕಾಗಿದೆ. ನಿವೃತ್ತಿ ಯೋಜನೆಗೆ ಇತಿಹಾಸವಿದೆ. ಇತಿಹಾಸ ಕಾಲದಿಂದಲೂ ನಿವೃತ್ತಿ ನಂತರ ವ್ಯಕ್ತಿ ಗೌರವಯುತವಾಗಿ ಬದುಕುವ ನಿಟ್ಟಿನಲ್ಲಿ ಸೂಕ್ತ ಆರ್ಥಿಕ ಸೌಲಭ್ಯ ಒದಗಿಸುವ ಪದ್ಧತಿಯಿತ್ತು.
ಸರಿಯಾದ ಚಿಂತನೆಯಲ್ಲ: ನೌಕರರು ದೀರ್ಘಾವಧಿಗೆ ಸಲ್ಲಿಸಿದ ಸೇವೆಗೆ ಹಾಗೂ ಸೇವಾವಧಿಯಲ್ಲಿ ನೌಕರನೂ ಪಡೆದ ಜೀವನಾವಶ್ಯಕ ವೇತನಕ್ಕಿಂತ ಕಡಿಮೆ ವೇತನ, ಪಿಂಚಣಿಯ ರೂಪದಲ್ಲಿ ಸಾಮಾಜಿಕ ಆರ್ಥಿಕ ಭದ್ರತೆಗೆ ಒದಗಿಸುವಂತೆ ಸೂಚಿಸಿದೆ. ಇಂಥ ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ರೂಪಿಸಿದ ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರವು 2004ರ ನಂತರ ಮತ್ತು ರಾಜ್ಯ ಸರ್ಕಾರವು 2006ರ ನಂತರ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವವರಿಗೆ ಖಚಿತ ಪಿಂಚಣಿ ಪದ್ಧತಿ ರದ್ದತಿಗೆ ಚಿಂತನೆ ನಡೆಸಿರುವುದು ಸರಿಯಲ್ಲ ಎಂದು ಆರೋಪಿಸಿದರು.
ಷೇರುಪೇಟೆಯಲ್ಲಿ ತೊಡಗಿಸುವುದಕ್ಕೆ ವಿರೋಧ: ನೌಕರರು ತಮ್ಮ ಸಂಬಳದಿಂದಲೇ ಪ್ರತಿ ತಿಂಗಳು ಶೇ.10ರಷ್ಟು ಹಣವನ್ನು ಹಾಗೂ ಸರ್ಕಾರ ಅದಕ್ಕೆ ಸಮಾನವಾದ ಹಣವನ್ನು ವಂತಿಗೆಯಾಗಿ ನೀಡಿ ಈ ಹಣವನ್ನು ಹಣಕಾಸು ನಿರ್ವಹಣಾ ಖಾಸಗಿ ಸಂಸ್ಥೆಗಳ ಮೂಲಕ ಷೇರುಪೇಟೆಯಲ್ಲಿ ತೊಡಗಿಸುವ ಪದ್ಧತಿಗೆ ವಿರೋಧವಿದೆ ಎಂದು ಎಚ್ಚರಿಸಿದ್ದಾರೆ.
ನೌಕರರ ಹಾಗೂ ಸರ್ಕಾರ ಒದಗಿಸಿದ ಹಣಕ್ಕೆ ಯಾವುದೇ ಸೂಕ್ತ ಭದ್ರತೆಯಿಲ್ಲದ, ನಿರ್ದಿಷ್ಟ ಕಾನೂನು ರಚಿಸದೇ ಹೊಸ ಪಿಂಚಣಿ ಯೋಜನೆ ಜಾರಿಗೆ ಮುಂದಾಗಿರುವ ಕೇಂದ್ರದ ಕ್ರಮ ನೌಕರ ವಿರೋಧಿಯಾಗಿದೆ. ಈ ಬಗ್ಗೆ ಲೋಕಸಭೆಯಲ್ಲಿ ಕೇಂದ್ರ ಮಸೂದೆಗೆ ಮಂಜೂರಾತಿ ಪಡೆಯಲು ಮುಂದಾಗಿದೆ ಎಂದು ಟೀಕಿಸಿದರು.
ನೌಕರರಿಗೆ ಹಾನಿಯೇ ಹೆಚ್ಚು: ಸರ್ಕಾರಿ ನೌಕರರ ಉಳಿತಾಯದ ಕೋಟ್ಯಂತರ ಹಣವನ್ನು ಪಿಂಚಣಿ ಯೋಜನೆ ನೆಪದಲ್ಲಿ ಷೇರುಪೇಟೆಯಲ್ಲಿ ಹೂಡುವುದು ಜೂಜಾಟಕ್ಕೆ ತೊಡಗಿಸಿದಂತೆಯೇ ಸರಿ. ಇಂಥ ಅಪಾಯಕಾರಿ ಹೂಡಿಕೆಯಿಂದ ನೌಕರರಿಗೆ ಆರ್ಥಿಕ ಹಾನಿಯಾಗುವ ಸಾಧ್ಯತೆಯೇ ಹೆಚ್ಚು ಎಂದು ಆರೋಪಿಸಿದರು.
ಇದೇ ಮಾದರಿಯಲ್ಲಿ ವಿವಿಧ ದೇಶಗಳಲ್ಲಿ ನೌಕರರ ಹಾಗೂ ಕಾರ್ಮಿಕರ ಹಣವನ್ನು ಪಿಂಚಣಿ ಪದ್ಧತಿ ಅಡಿ ಷೇರುಪೇಟೆಯಲ್ಲಿ ತೊಡಗಿಸಿದಾಗ ಜಗತ್ತಿನ ಆರ್ಥಿಕ ವ್ಯವಸ್ಥೆ ಕುಸಿತ ಕಂಡು ಹಣ ಪಡೆದಿದ್ದ ಖಾಸಗಿ ಸಂಸ್ಥೆಗಳು ದಿವಾಳಿಯಾಗಿದ್ದರಿಂದ ಅಲ್ಲಿನ ನೌಕರರು ಸಂಕಷ್ಟಕ್ಕೆ ಸಿಲುಕಿದ ಉದಾಹರಣೆಯಿದೆ. ಇಂಥ ಅಪಾಯಕಾರಿ ಪದ್ಧತಿಯಡಿ ಪಿಂಚಣಿ ನೀಡಿಕೆಗೆ ನೌಕರರ ತೀವ್ರ ವಿರೋಧವಿದೆ ಎಂದು ದೂರಿದರು.
ಮಸೂದೆ ಜಾರಿ ಕೈಬಿಡಿ: ಕೇಂದ್ರ ಸರ್ಕಾರ ಷೇರುಪೇಟೆಯಲ್ಲಿ ಹಣ ಹೂಡಿಕೆ ಮೂಲಕ ಪಿಂಚಣಿ ನೀಡುವ ಪದ್ಧತಿಗೆ ಸಂಬಂಧಿಸಿ ಮಸೂದೆ ಜಾರಿ ವಿಚಾರವನ್ನು ಕೈಬಿಡಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹದೇವಪ್ಪ, ಒಕ್ಕೂಟದ ಪ್ರಮುಖರಾದ ಎಸ್.ಮಾರುತಿ, ಕೆ.ನಾರಾಯಣ, ಸಣ್ಣ ತಾಯಪ್ಪ, ಸೈಯದ್ ಜಹಾಗೀರದಾರ್ ಪಾಷಾ, ದೊಡ್ಡನಗೌಡ, ಭೀಮಣ್ಣ ಉದ್ಬಾಳ್ ಸೇರಿ ಅನೇಕರಿದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

