ರಾಯಚೂರು

ಜಾಫರ್ ಅಲಿ ಜಾಗೀರದಾರ್ ಗೆಲವು

Published On :

ಸಿಂಧನೂರು: ನಗರಸಭೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ 4ನೇ ವಾರ್ಡ್ ಸದಸ್ಯ ಸೈಯದ್ ಜಾಫರ್ ಅಲಿ ಜಾಗೀರದಾರ, ಉಪಾಧ್ಯಕ್ಷರಾಗಿ 26ನೇ ವಾರ್ಡಿನ ಲಕ್ಷ್ಮಿ ಶನಿವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾದರು.
 ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಿತ್ತು.
ಬೆಳಗ್ಗೆ 9ರಿಂದ ನಾಮಪತ್ರ ಪ್ರಕ್ರಿಯೆ ಆರಂಭವಾಯಿತು. 7ನೇ ವಾರ್ಡ್‌ನ ಸದಸ್ಯ ಬಿಎಸ್ಸಾರ್ ಕಾಂಗ್ರೆಸ್‌ನ ಚಂದ್ರಶೇಖರ ಸಿದ್ದಪ್ಪ ಮೈಲಾರ ನಾಮಪತ್ರ ಸಲ್ಲಿಸಿದರು. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಇವರಿಗೆ ಶರಣಬಸವ ಎನ್.ಪಾಟೀಲ್ ಸೂಚಕರಾದರೆ, ಸೈಯದ್ ಹಾಜಿ ಮಸ್ತಾನ್ ಅನುಮೋದಿಸಿದರು.
ಉಪಾಧ್ಯಕ್ಷರ ಅವಿರೋಧ ಆಯ್ಕೆ: ಕಾಂಗ್ರೆಸ್‌ನಲ್ಲಿ ಸಾಮಾನ್ಯ ವರ್ಗದ ಸದಸ್ಯರಿದ್ದರೂ ಪಕ್ಷದ ಹೈಕಮಾಂಡ್‌ನ ಸೂಚನೆ ಮೇರೆಗೆ ಜಾಫರ್ ಅಲಿ ಜಾಗೀರದಾರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಇವರಿಗೆ ಪ್ರಭುರಾಜ ಸೂಚಕರಾಗಿದ್ದರು.
 ವೆಂಕಟೇಶ ಅನುಮೋದಿಸಿದರು. ಉಪಾಧ್ಯಕ್ಷೆ ಸ್ಥಾನಕ್ಕೆ ಲಕ್ಷ್ಮಿ ಅವರಷ್ಟೇ ನಾಮಪತ್ರ ಸಲ್ಲಿಸಿದರು. ಇವರಿಗೆ ಶರಣಯ್ಯ ಸೂಚಕರಾಗಿದ್ದರೆ, ಮಹ್ಮದ್ ಶಫೀಯುದ್ದೀನ್ ಅನುಮೋದಿಸಿದರು.
6 ಮತ ಅಂತರದ ಗೆಲವು: ಒಟ್ಟು 31 ವಾರ್ಡ್‌ಗಳಲ್ಲಿ 18 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದ ಕಾಂಗ್ರೆಸ್ ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಜಾಫರ್ ಅಲಿ ಜಾಗೀರದಾರ ಅವರಿಗೆ 19 ಮತಗಳು ದೊರೆತರೆ, ಪ್ರತಿಸ್ಪರ್ಧಿ ಚಂದ್ರಶೇಖರ ಸಿದ್ದಪ್ಪ ಮೈಲಾರ ಅವರಿಗೆ 13 ಮತಗಳು ದೊರೆತವು.
ಉಪಾಧ್ಯಕ್ಷೆ ಲಕ್ಷ್ಮೀ ರಮೇಶ ಅವರು ಅವಿರೋಧವಾಗಿ ಆಯ್ಕೆಯಾದರು. ಲಿಂಗಸ್ಗೂರು ಸಹಾಯಕ ಆಯುಕ್ತ ಹಾಗೂ ಚುನಾವಣಾ ಅಧಿಕಾರಿ ಟಿ.ಯೋಗೀಶ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷೆ ಆಯ್ಕೆಯನ್ನು ಘೋಷಿಸಿದರು.
ಬಂದೋಬಸ್ತ್: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಹಿನ್ನೆಲೆಯಲ್ಲಿ ನಗರಸಭೆ ಆವರಣದ ಸುತ್ತಲೂ ಸಿಪಿಐ ಶೇಖರಪ್ಪ, ಶಹರ ಠಾಣೆ ಪಿಎಸ್‌ಐ ಬಾಳನಗೌಡ ಅವರು ಬಂದೋಬಸ್ತ್‌ನ ನೇತೃತ್ವ ವಹಿಸಿದ್ದರು.
 ಚುನಾವಣೆಯ ಹಿನ್ನೆಲೆಯಲ್ಲಿ ನಗರಸಭೆಯ ಸುತ್ತಲೂ ಜನ ಗುಂಪುಗುಂಪಾಗಿ ನೆರೆದಿದ್ದು ಕಂಡುಬಂತು. ಫಲಿತಾಂಶದ ನಂತರ ಸಂಭ್ರಮದ ವಾತಾವರಣ ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.