ಹಾಸ್ಟೆಲ್ಗಳಿಗೆ ಮೂಲಸೌಕರ್ಯ, ಹಕ್ಕುಗಳಿಗೆ ಆಗ್ರಹ
ಕನ್ನಡಪ್ರಭ ವಾರ್ತೆ ಸಿಂಧನೂರು ಸೆ.12
ಹಾಸ್ಟೆಲ್ಗಳಿಗೆ ಮೂಲಸೌಕರ್ಯ ಕಲ್ಪಿಸುವುದು ಹಾಗೂ ಇನ್ನಿತರ ಹಕ್ಕುಗಳಿಗೆ ಆಗ್ರಹಿಸಿ ಸಿಂಧನೂರು ತಾಲೂಕಾ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನಾ ಜಾಥಾ ನಡೆಸಲಾಯಿತು.
ಪಿಡಬ್ಲ್ಯೂಡಿ ಕ್ಯಾಂಪ್ನ ಬಾಲಕರ ಬಿಸಿಎಂ ಹಾಸ್ಟೆಲ್ನಿಂದ ಆರಂಭವಾದ ಪ್ರತಿಭಟನಾ ಜಾಥಾ ಕಿತ್ತೂರು ಚೆನ್ನಮ್ಮ, ಕನಕದಾಸ ಸರ್ಕಲ್ ಮುಖಾಂತರ ತಹಸೀಲ್ದಾರ್ ಕಾರ್ಯಾಲಯಕ್ಕೆ ತೆರಳಿತು. ಜಾಥಾದ್ದುದ್ದಕ್ಕೂ ಹಾಸ್ಟೆಲ್ಗಳ ಅವ್ಯವಸ್ಥೆಯ ವಿರುದ್ಧ ಧಿಕ್ಕಾರ ಹಾಕಲಾಯಿತು.
ಹಾಸ್ಟೆಲ್ಗಳನ್ನು ನಿರ್ಮಿಸಿ: ರಾಜ್ಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆಗನುಗುಣವಾಗಿ ಸಾಕಷ್ಟು ಹಾಸ್ಟೆಲ್ಗಳನ್ನು ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಅನುಗುಣವಾಗಿ ಅಡುಗೆ ಸಹಾಯಕರು, ಇತರೆ ಸಿಬ್ಬಂದಿಯನ್ನು ನೇಮಕಾತಿ, ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರನ್ನು ಖಾಯಂಗೊಳಿಸಿ, ಎಲ್ಲಾ ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಿ ಸಮರ್ಪಕವಾದ ಕೊಠಡಿ ಅಡುಗೆ ಸಹಾಯಕರು ಮತ್ತು ಇತರೆ ಸಿಬ್ಬಂದಿಯನ್ನು ಹೆಚ್ಚಿಸಬೇಕು.
ಹಾಸ್ಟೆಲ್ಗಳ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆ ತಡವಾಗಿ ನಡೆಸುತ್ತಿದ್ದು, ಶೈಕ್ಷಣಿಕ ಅವಧಿಯಲ್ಲೇ ನಡೆಸಬೇಕು, ವಿದ್ಯಾರ್ಥಿಗಳ ಮಾಸಿಕ ವೇತನ ಹೆಚ್ಚಿಸಿ, ವಿದ್ಯಾರ್ಥಿಗಳ ಮಂಜೂರಾತಿಗೆ ಅನುಗುಣವಾಗಿ ಆಯ್ಕೆ ಮಾಡಿ ಕೊಂಡು ಸೌಲಭ್ಯವನ್ನು ಕಲ್ಪಿಸಲು ಒತ್ತಾಯಿಸಿದರು.
ರಕ್ಷಣಾ ಸಿಬ್ಬಂದಿ ಒದಗಿಸಿ: ಗ್ರಂಥಾಲಯ ಒದಗಿಸಿ ಪುಸ್ತಕಗಳನ್ನು ವಿತರಿಸಿ, ಹಾಸ್ಟಲ್ ನವೀಕರಿಸಬೇಕು.
ಗಣಕಯಂತ್ರ ಸೌಲಭ್ಯ ಒದಗಿಸಿ, ಬಾಲಕಿಯರಿಗೆ ಸ್ವಂತ ವಸತಿ ನಿಲಯ ಕಟ್ಟಡ ನಿರ್ಮಾಣ ಮಾಡಬೇಕು.
ಸುಸಜ್ಜಿತವಾದ ಶೌಚಾಲಯ ಅಡುಗೆ ಕೋಣೆ ತುರ್ತಾಗಿ ನಿರ್ಮಿಸಬೇಕು, ಅಧಿಕಾರಿಗಳು ನಿರಂತರ ಭೇಟಿಗೆ ಸೂಕ್ತ ಕ್ರಮ ಜರುಗಿಸಬೇಕು.
ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ರಕ್ಷಣಾ ಸಿಬ್ಬಂದಿ ನೇಮಕ ಮಾಡುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಹಾಸ್ಟೆಲ್ ಹಳೆಯ ವಿದ್ಯಾರ್ಥಿಗಳಾದ ನಿರುಪಾದೆಪ್ಪ ಗುಡಿಹಾಳ, ಬಸವರಾಜ.ಎಚ್ ಆಗ್ರಹಿಸಿದರು.
ಧರಣಿ: ತಹಸೀಲ್ದಾರ್ ಕಾರ್ಯಾಲಯದ ಮುಂದೆ ತಾಲೂಕಿನ ಎಲ್ಲಾ ಬಿಸಿಎಂ ಹಾಸ್ಟೆಲ್ಗಳ ವಿದ್ಯಾರ್ಥಿಗಳು ಧರಣಿಯಲ್ಲಿ ಭಾಗವಹಿಸಿದ್ದರು.
ಒಕ್ಕೂಟದ ಧರಣಿ ಸತ್ಯಾಗ್ರಹಕ್ಕೆ ಸಮುದಾಯ ಎಸ್. ದೇವೇಂದ್ರಗೌಡ, ಮನುಜಮತ ಬಳಗದ ಉಪಾಧ್ಯಕ್ಷ ವೆಂಕನಗೌಡ ಗದ್ರಟಗಿ, ಉಪನ್ಯಾಸಕರಾದ ನಾರಾಯಣ ಬೆಳಗುರ್ಕಿ, ತಿಮ್ಮಣ್ಣ ನಾಯಕ, ಚಿದಾನಂದಪ್ಪ, ಎಸ್ಎಫ್ಐನ ಚೇತನ ಕಿಲ್ಲೇದ್, ಎಸ್ಐಓ ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿ ವಸೀಮ್ ಅಹ್ಮದ್, ಸೈಯದ್ ತನ್ವೀರ್, ಬಸವಕೇಂದ್ರದ ಶೇಖರ ಯರದಿಹಾಳ ಮತ್ತಿತರರು ಭಾಗವಹಿಸಿದ್ದರು.
ವಿದ್ಯಾರ್ಥಿಗಳು ನಡೆಸುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಭೇಟಿ ನೀಡಿ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. ವಸತಿ ನಿಲಯಗಳ ಜಿಲ್ಲಾ ಅಧಿಕಾರಿ ದೇವಯ್ಯ ಸಹ ವಿದ್ಯಾರ್ಥಿಗಳ ಬೇಡಿಕೆಗಳನ್ನು ಶೀಘ್ರದಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

