ಹಾಳಾದ ರಸ್ತೆಲಿ ಸವಾರರ ಸರ್ಕಸ್
-ವಿಶೇಷ ವರದಿ
ಕನ್ನಡಪ್ರಭ ವಾರ್ತೆ ರಾಯಚೂರು ಸೆ.12
ಮುಗಿಯದ ರೈಲ್ವೆ ಮೇಲ್ಸೇತುವೆ ಕಾಮಗಾರಿ. ಬೈಪಾಸ್ ರಸ್ತೆಯಲ್ಲಿ ತಗ್ಗುಗಳದ್ದೇ ಸಾಮ್ರಾಜ್ಯ. ಏಳುತ್ತಾ ಬೀಳುತ್ತಾ ಸಾಗುವ ಬಸ್ ಮತ್ತಿತರೆ ವಾಹನಗಳು.
ಬೈಪಾಸ್ ರಸ್ತೆ ಕಂಡರೆ ಸಾಕು ಬೆಚ್ಚಿಬೀಳುವ ಜನತೆ. ಐದು ಕಿಮೀ ಸಾಗಲು ಕನಿಷ್ಟ 45 ನಿಮಿಷದ ಪ್ರಯಾಣ ಅನಿವಾರ್ಯ.
ನಗರದಿಂದ ಲಿಂಗಸ್ಗೂರು, ಹುಬ್ಬಳ್ಳಿಯತ್ತ ಸಾಗಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿದ ತಾತ್ಕಾಲಿಕ ರಸ್ತೆಯ ದುರ್ಗತಿಯ ಚಿತ್ರಣವಿದು.
ನಗರದ ಬಸವೇಶ್ವರ ವೃತ್ತದಲ್ಲಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ 9 ತಿಂಗಳಿನಿಂದ ಕುಂಟುತ್ತಾ ಸಾಗುತ್ತಿದ್ದು, ಅದ ರಿಂದಾಗಿಯೇ ಸಮಸ್ಯೆ ಉಲ್ಬಣಗೊಂಡಿದೆ. ಈ ಕಾಮಗಾರಿ ನಿಧಾನ ಗತಿಯಲ್ಲಿರುವುದರಿಂದ ಜಿಲ್ಲಾಡಳಿತ ನಿರ್ಮಿಸಿದ್ದ ಮನ್ಸ ಲಾಪುರ ರಸ್ತೆಯಲ್ಲಿ ಭಾರೀ ಪ್ರಮಾಣದ ತಗ್ಗುಗಳಾಗಿರುವುದು ಸಂಚಾರ ವ್ಯವಸ್ಥೆ ಹಾಳು ಮಾಡಿದೆ.
ಸಂಪರ್ಕ ರಸ್ತೆ: ನಗರದಿಂದ ಲಿಂಗಸ್ಗೂರು ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಗೆ ಸುಮಾರು ಐದು ಕಿಮೀ ದೂರವಿದೆ. ಹೈದರಾಬಾದ್ ಮೂಲಕ ಆಗಮಿಸುವ ಭಾರೀ ಸರಕು ಹೊತ್ತ ವಾಹನಗಳೂ ಸೇರಿ ದಿನವೂ ಸಾವಿರಾರು ಸಂಖ್ಯೆಯ ವಾಹನಗಳು ಈ ಮಾರ್ಗದಲ್ಲಿಯೇ ಸಂಚರಿಸುತ್ತವೆ.
ಕಳೆದ ವಾರದಿಂದ ನಗರದಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಮಳೆಯ ಅಬ್ಬರ ಆರಂಭವಾಗುತ್ತಿರುವುದು ಬೈಪಾಸ್ ರಸ್ತೆಯಲ್ಲಿ ಮೂರರಿಂದ ನಾಲ್ಕು ಅಡಿ ಆಳದ ತಗ್ಗು ಉಂಟು ಮಾಡಿದೆ. ಐದು ಕಿಮೀ ಉದ್ದದ ರಸ್ತೆಯಲ್ಲಿ ಇಂಥ ಆಳದ ತಗ್ಗುಗಳೇ ತುಂಬಿವೆ.
ಹೀಗಾಗಿ ಐದು ಕಿಮೀ ದೂರದ ರಸ್ತೆ ಕ್ರಮಿಸಲು ಸಾರಿಗೆ ಸಂಸ್ಥೆಯ ಬಸ್ ಗಳು ಹರಸಾಹಸ ಪಡುವಂತಾಗಿದೆ. ಪ್ರಯಾಣಿಕರು ಜೀವ ಕೈಲಿ ಹಿಡಿದು ಬಸ್ ನಲ್ಲಿ ಕುಳಿತು ಸಾಗುವಂತಾಗಿದೆ.ಐದು ಕಿಮೀ ದೂರ ಕ್ರಮಿಸಲು ಕನಿಷ್ಟ 45 ನಿಮಿಷ ಸಮಯ ಹಿಡಿಯುತ್ತದೆ. ದೂರ ದೂರುಗಳಿಂದ ನಗರಕ್ಕೆ ವಾಹನ ಚಲಾಯಿಸಿಕೊಂಡು ಆಗಮಿಸುವ ಚಾಲಕರು ಹಿಡಿಶಾಪ ಹಾಕುತ್ತಲೇ ವಾಹನ ಚಲಾಯಿಸುತ್ತಿದ್ದಾರೆ. ಈ ಮಾರ್ಗದಲ್ಲಿ ಸಾಗಲು ಹಿಂಜರಿಯುವಂಥ ಸ್ಥಿತಿ ನಿರ್ಮಾಣವಾಗಿದೆ.
ಅಪೂರ್ಣ ರಸ್ತೆ: ನಗರಕ್ಕೆ ಹೈದರಾಬಾದ್ ಮೂಲಕ ಆಗಮಿಸುವ ಭಾರೀ ಸರಕು ಹೊತ್ತ ವಾಹನಗಳಿಗೆ ನಗರದ ಹೊರವಲಯದಲ್ಲಿ ಆಡಳಿತ ಬೈಪಾಸ್ ರಸ್ತೆ ನಿರ್ಮಿಸಿದೆ. ಆದರೆ ರಸ್ತೆಯೂ ಅಪೂರ್ಣಗೊಂಡಿದ್ದರಿಂದ ಎಲ್ಲ ವಾಹನಗಳೂ ಪರ್ಯಾಯವಾಗಿ ಆಡಳಿತ ನಿರ್ಮಿಸಿದ ಮನ್ಸಲಾಪುರ ರಸ್ತೆಯಲ್ಲಿಯೇ ಸಾಗುತ್ತಿರುವುದು ರಸ್ತೆ ಮತ್ತಷ್ಟು ಹಾಳಾಗಲು ದಾರಿಯಾಗಿದೆ. ಪರಿಣಾಮ ದಿನವೂ ಹಾಳಾದ ರಸ್ತೆಯಲ್ಲಿಯೇ ಎಲ್ಲ ವಾಹನಗಳು ಎದ್ದು ಬಿದ್ದು ಸಾಗುವುದು ಅನಿವಾರ್ಯ ಎಂಬಂತಾಗಿದೆ. ನಗರದ ಮನ್ಸಲಾಪೂರ ರಸ್ತೆಯಲ್ಲಿ ದಿನವೂ ಒಂದೆರಡು ಗಂಟೆ ಬೆಳಗಿನ ವೇಳೆಯಲ್ಲಿ ಸಂಚಾರ ದಟ್ಟಣೆ ಮತ್ತು ಸಂಚಾರ ತೊಂದರೆ ತೀರಾ ಸಾಮಾನ್ಯ ಎಂಬಂತಾಗಿದೆ.
ಜಿಲ್ಲಾಡಳಿತ ಕೂಡಲೇ ನಗರದ ಬಸವೇಶ್ವರ ವೃತ್ತದಲ್ಲಿನ ರೇಲ್ವೆ ಮೇಲ್ಸೆತುವೆ ಕಾಮಗಾರಿ ಚುರುಕುಗೊಳಿಸಲು ರೇಲ್ವೆ ಇಲಾಖೆಗೆ ಸೂಚಿಸಬೇಕಿದೆ. ಅಲ್ಲಿಯವೆರೆಗೆ ಮನ್ಸಲಾಪೂರ ರಸ್ತೆ ದುರಸ್ತಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯವಾಗಿದೆ.
ಗಣೇಶ ಮೂರ್ತಿ ಮೆರವಣಿಗೆ
ಸಿಂಧನೂರು: ನಗರದ ವಾರ್ಡ್ಮೊಂದರಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿ ವಿಸರ್ಜನೆಯ ಹಿನ್ನೆಲೆಯಲ್ಲಿ ಸಾಗಿದ ಮೆರವಣಿಗೆ ನಗರದ ಗಾಂಧಿಸರ್ಕಲ್ಗೆ ಆಗಮಿಸುತ್ತಿದ್ದಂತೆ ಅದರಲ್ಲಿ ಭಾಗವಹಿಸಿದ್ದ ಯುವಕರ ಗುಂಪೊಂದು ಸರ್ಕಲ್ ಮಧ್ಯದಲ್ಲೆ ಪಟಾಕ್ಷಿ ಸಿಡಿಸಿ ಬಂದೋಬಸ್ತ್ ನಿಯೋಜಿಸಿದ್ದ ಡಿ.ಆರ್.ವಾಹನ ಹಾಗೂ ಸಿಬ್ಬಂದಿ ಮುಂದೆಯೇ ಅಂಗಿಬಿಚ್ಚಿ ಕುಣಿದು ಕುಪ್ಪಳಿಸಿದ ಘಟನೆ 4ಗಂಟೆ ಸುಮಾರು ನಡೆಯಿತು.
ನಗರದ ಹೃದಯ ಭಾಗವಾದ ಗಾಂಧಿಸರ್ಕಲ್ನಲ್ಲಿ ಯಾವಾಗಲೂ ವಾಹನ ದಟ್ಟಣೆ ಇರುತ್ತದೆ. ಇದನ್ನು ಲೆಕ್ಕಿಸದೇ ರಸ್ತೆ ಮಧ್ಯೆ ಪಟಾಕ್ಷಿಗಳನ್ನು ಹರವಿ ಪೊಲೀಸರ ಮುಂದೆಯ ವ್ಯಂಗ್ಯ ನರ್ತನ ಮಾಡುವ ಮೂಲಕ ಕೇಕೆ ಹೊಡೆದರು.
ಇದನ್ನೂ ನೋಡಿಯೂ ನೋಡದಂತಿದ್ದ ಪೊಲೀಸರು ಪಟಾಕ್ಷಿಗಳ ಶಬ್ದಕ್ಕೆ ಕಿವಿಮುಚ್ಚಿಕೊಂಡದ್ದು ಕಂಡುಬಂತು. ಪಟಾಕ್ಷಿ ಸಿಡಿತದಿಂದ ದಟ್ಟ ಹೊಗೆಯೆದ್ದು ಕೆಲ ಕಾಲ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು.
ಶಹರ ಠಾಣೆ ಪಿಎಸ್ಐ ಬಾಳನಗೌಡ ಟ್ರಾಫಿಕ್ ನಿಯಂತ್ರಿಸಲು ಹೆಣಗಾಡಬೇಕಾಯಿತು.
ಗಾಂಧಿಸರ್ಕಲ್ಗೆ ಹೊಂದಿಕೊಂಡಿರುವ ತಹಸೀಲ್ದಾರ್ ಕಚೇರಿಯ ಮುಂಭಾಗದಲ್ಲಿ ತಾಲೂಕು ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದಲ್ಲಿ ಶಾಸಕರು ವಿದ್ಯಾರ್ಥಿಗಳ ಅಹವಾಲು ಕೇಳುತ್ತಿದ್ದ ಸಮಯದಲ್ಲಿ ಘಟನೆ ನಡೆದು ಹೋಯಿತು.
ಗಣೇಶ ಮೂರ್ತಿ ಮೆರವಣಿಗೆ ನೆಪದಲ್ಲಿ ಯುವಕರ ದುಂಡಾವರ್ತನೆಗೆ ಸಾರ್ವಜನಿಕರು ಬೆಚ್ಚಿಬಿದ್ದರು. ಆದರೆ ಪೊಲೀಸರು ಮಾತ್ರ ಮೂಕಪ್ರೇಕ್ಷಕರಂತೆ ನಿಂತಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

