ರಾಯಚೂರು

ಮಳೆ: 28.48 ಕೋಟಿ ಆಸ್ತಿ ಹಾನಿ

Published On :

ರಾಯಚೂರು: ಜಿಲ್ಲೆಯಲ್ಲಿ ಈಚೆಗೆ ಸುರಿದ ಧಾರಾಕಾರ ಮಳೆಗೆ ಒಟ್ಟು 28.48 ಕೋಟಿ ಆಸ್ತಿಗೆ ಹಾನಿಯಾಗಿದೆ. ಪರಿಹಾರ ಕಾರ್ಯ ಕೈಗೊಳ್ಳಲು ಜಿಲ್ಲಾಡಳಿತದ ಬಳಿ ಐದು ಕೋಟಿ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಹೇಳಿದರು.
ನಗರದಲ್ಲಿ ಸೋಮವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಇದುವರೆಗೆ ಸುರಿದ ಭಾರೀ ಮಳೆಗೆ ರಸ್ತೆ, ಚರಂಡಿ, ಸೇತುವೆ ಸೇರಿ ಒಟ್ಟು 28.48 ಕೋಟಿ ಮೊತ್ತದ ಆಸ್ತಿಗೆ ಹಾನಿಯಾಗಿದೆ. ಜಿಪಂ ಗೆ ಸೇರಿದ ರಸ್ತೆಗೆ 8.48 ಕೋಟಿ ಮತ್ತು ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗೆ 8.91 ಕೋಟಿ ಹಾನಿಯಾಗಿದೆ ಎಂದು ಹೇಳಿದರು.
50 ಲಕ್ಷದಂತೆ ಅನುದಾನ ಬಿಡುಗಡೆ: ಸ್ಥಳೀಯ ನಗರಸಭೆಯು 11 ಕೋಟಿ ಮೊತ್ತದ ಆಸ್ತಿಗೆ ನಗರದಲ್ಲಿ ಮಳೆಯಿಂದ ಹಾನಿಯಾಗಿದೆ ಎಂಬ ವರದಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಸರ್ಕಾರದಿಂದ ರಾಯಚೂರು ಹೊರತುಪಡಿಸಿ ಇನ್ನುಳಿದ ಎಲ್ಲ ತಾಲೂಕುಗಳಿಗೆ ತಲಾ 50 ಲಕ್ಷದಂತೆ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದರು.ವಿಪತ್ತು ನಿರ್ವಹಣೆ ಅನುದಾನದಡಿ ಜಿಲ್ಲಾಡಳಿತದ ಬಳಿ 3 ಕೋಟಿ ಲಭ್ಯವಿದ್ದು, ಅದನ್ನು ಭಾರೀ ಮಳೆಯಿಂದಾದ ಹಾನಿ ಪರಿಹಾರ ಕಾರ್ಯಕ್ಕೆ ಬಳಸಲು ಸರ್ಕಾರ ಅನುಮತಿಸಿದೆ. ಹೀಗಾಗಿ ಒಟ್ಟು ಐದು ಕೋಟಿ ಪರಿಹಾರ ಕಾರ್ಯಕ್ಕೆ ದೊರೆ ತಂತಾಗಿದೆ ಎಂದು ಹೇಳಿದರು.
ಅಂದಾಜಿಸುವುದು ಅಸಾಧ್ಯ: ರಾಜ್ಯ ಸರ್ಕಾರವು ರಾಯಚೂರು ತಾಲೂಕಿನಲ್ಲಿ ಮಳೆಯಿಂದಾಗಿರುವ ಹಾನಿಗೆ ಮುಂದಿನ ದಿನಗಳಲ್ಲಿ ಪರಿಹಾರ ಕಾರ್ಯಕ್ಕೆ ಅನುದಾನ ಒದಗಿಸುವ ಭರವಸೆ ನೀಡಿದೆ. ಬೆಳೆ ನಷ್ಟದ ಪ್ರಮಾಣ ಸದ್ಯಕ್ಕೆ ಅಂದಾಜಿಸುವುದು ಅಸಾಧ್ಯ. ಬೆಳೆಯ ಹಾನಿಯು ಕಟಾವಿನ ಹೊತ್ತಿಗೆ ಗೊತ್ತಾಗಲಿರುವ ಹಿನ್ನೆಲೆ ಸದ್ಯಕ್ಕೆ ಬೆಳೆ ಹಾನಿ ಸಮೀಕ್ಷೆ ನಡೆಸುತ್ತಿಲ್ಲ ಎಂದರು.
ನೋಟೀಸ್: ಜಿಲ್ಲಾಡಳಿತದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ತೊರೆದ ಜಿಪಂ ವ್ಯಾಪ್ತಿಯ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲು ಜಿಪಂಗೆ ಸೂಚಿಸಲಾಗಿದೆ ಎಂದು ತಿಳಿಸಿದ ಅವರು, ಈಚೆಗೆ ಸುರಿದ ಭಾರೀ ಮಳೆಯ ವೇಳೆ ಅಧಿಕಾರಿಗಳು ಸೂಕ್ತ ಸಮಯಕ್ಕೆ ಸ್ಥಳಕ್ಕೆ ಧಾವಿಸದಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.ಸಹಾಯಕ ಆಯುಕ್ತೆ ಮಂಜುಶ್ರೀ, ಎಡಿಸಿ ತಿಮ್ಮಪ್ಪ ಇದ್ದರು.

ರಸ್ತೆ, ಸೇತುವೆ ದುರಸ್ತಿಗೆ ಆಗ್ರಹಿಸಿ ಮನವಿ
ರಾಯಚೂರು: ತಾಲೂಕಿನ ಹೆಂಬೆರಾಳ, ಮೀರಾಪುರ ಮತ್ತಿತರೆಡೆ ಮಳೆಯಿಂದ ರಸ್ತೆಗಳು ಹಾಳಾಗಿದ್ದು ಅದರಿಂದ ಸಂಪರ್ಕ ಕಳೆದುಕೊಂಡ ಗ್ರಾಮಸ್ಥರು ಪರದಾಡುವಂತಾಗಿದೆ. ಕಾರಣ ಕೂಡಲೇ ರಸ್ತೆ ದುರಸ್ತಿಗೊಳಿಸಬೇಕೆಂದು ಗ್ರಾಮಸ್ಥರು ತಾಪಂ ಸದಸ್ಯೆ ಕರುಣಾಶ್ರೀ ಶ್ರೀಧರರೆಡ್ಡಿ ನೇತೃತ್ವದಲ್ಲಿ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸೆ.9ರಂದು ಸುರಿದ ಮಳೆಗೆ ಹೆಂಬೆರಾಳ, ಮೀರಾಪುರ ಹಾಗೂ ಗುರ್ಜಾಪುರ ರಸ್ತೆಗಳು ಹಾಳಾಗಿವೆ. ಮೀರಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯೂ ಕೊಚ್ಚಿಕೊಂಡು ಹೋಗಿದ್ದು, ಅದರಿಂದ ಈ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಹೀಗಾಗಿ ಜನತೆ ಪರದಾಡುವಂತಾಗಿದೆ ಎಂದು ಆರೋಪಿಸಿದರು. ಕಾರಣ ಕೂಡಲೇ ರಸ್ತೆ ದುರಸ್ತಿಗೊಳಿಸಿ ಸೇತುವೆ ನಿರ್ಮಿಸುವ ಮೂಲಕ ಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.   ಶ್ರೀಧರರೆಡ್ಡಿ, ಪ್ರಭಯ್ಯಸ್ವಾಮಿ, ಸೂಗೂರಯ್ಯಸ್ವಾಮಿ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.