ರಾಯಚೂರು

50,935 ಹೆಚ್ಚುವರಿ ಮತದಾರರು

Published On :

ಕ.ಪ್ರ. ವಾರ್ತೆ     ರಾಯಚೂರು     ಏ.2
ಪ್ರಸಕ್ತ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಕೈಗೊಂಡಿದ್ದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಒಟ್ಟು 50,935 ಮತದಾರರ ಹೆಸರು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿದ್ದು, ಮತದಾರರ ಸಂಖ್ಯೆಯ ಹೆಚ್ಚಳದ ಹಿನ್ನೆಲೆಯಲ್ಲಿ ಮತಗಟ್ಟೆಗಳನ್ನೂ ಹೆಚ್ಚಿಸಲಾಗಿದೆ.
ರಾಯಚೂರು ಲೋಕಸಭೆ (ಎಸ್ಟಿ ಮೀಸಲು) ಕ್ಷೇತ್ರದ ಚುನಾವಣೆಯು ಏ.17ರಂದು ನಡೆಯಲಿದ್ದು, ಈಗಾಗಲೇ ಜಿಲ್ಲಾಡಳಿತ ಮತದಾನ ಕಾರ್ಯಕ್ಕಾಗಿ ಸಕಲ ಸಿದ್ಧತೆ ನಡೆಸಿದ್ದು, ಚುನಾವಣೆ ಸಿಬ್ಬಂದಿಗೆ ಮೊದಲ ಹಂತದ ತರಬೇತಿ ಪೂರ್ಣಗೊಳಿಸಿದೆ. ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯೂ ಮುಗಿದಿದೆ.
ಕಳೆದ ಮಾರ್ಚ್ನಲ್ಲಿ ಚುನಾವಣಾ ಆಯೋಗದ ನಿರ್ದೇಶನದ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರಿಸಲು ಅವಕಾಶ ಕಲ್ಪಿಸಲಾಗಿತ್ತು. ಅದರಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ತಡವಾಗಿ ಪೂರ್ಣಗೊಂಡಿದ್ದು, ಒಟ್ಟು 50,935 ಜನ ಹೊಸದಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಿಕೊಂಡಿದ್ದಾರೆ.
ಕ್ಷೇತ್ರದ ಒಟ್ಟು ಮತ- 16,61,362: ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ ಈ ಹಿಂದೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 16,10,427 ಮತದಾರರ ಪೈಕಿ 8,10,026 ಪುರುಷ ಹಾಗೂ 8,00,121 ಮಹಿಳಾ ಮತದಾರರಿದ್ದರು. ಸದ್ಯ ಒಟ್ಟು ಮತದಾರರ ಸಂಖ್ಯೆಯು 16,61,362ಕ್ಕೆ ಏರಿಕೆ ಕಂಡಿದೆ. ಅದೇ ರೀತಿ ಪುರುಷ ಹಾಗೂ ಮಹಿಳಾ ಮತದಾರರ ಸಂಖ್ಯೆಯಲ್ಲಿಯೂ ಏರಿಕೆಯಾಗಿದ್ದು, ಸದ್ಯ 8,35,791 ಪುರುಷ ಮತ್ತು 8,25,261 ಮಹಿಳಾ ಮತದಾರರು ಪಟ್ಟಿಯಲ್ಲಿದ್ದಾರೆ.
ಅದೇ ರೀತಿ ಕಳೆದ ಫೆಬ್ರವರಿಯಲ್ಲಿ ಕ್ಷೇತ್ರದಲ್ಲಿ 280 ಜನ ಲೈಂಗಿಕ ಅಲ್ಪಸಂಖ್ಯಾತರಿದ್ದರು. ಈ ಬಾರಿಯ ಪರಿಷ್ಕರಣೆ ವೇಳೆ 30 ಜನ ಅರ್ಜಿ ಸಲ್ಲಿಸಿ ಹೆಸರು ಸೇರ್ಪಡೆಗೊಳಿಸಿದ್ದು ಒಟ್ಟು ಲೈಂಗಿಕ ಅಲ್ಪಸಂಖ್ಯಾತರ ಪ್ರಮಾಣ 310ಕ್ಕೇರಿದೆ.
ಸೇರ್ಪಡೆಗೊಂಡವರ ವಿವರ: ಪ್ರಸಕ್ತ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವೇಳೆ 25,765 ಪುರುಷ ಮತದಾರರು ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ 25,140 ಮಹಿಳಾ ಮತದಾರರು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದ್ದು, 30 ಜನ ಲೈಂಗಿಕ ಅಲ್ಪಸಂಖ್ಯಾತರೂ ಪಟ್ಟಿಗೆ ಸೇರಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.
ಕ್ಷೇತ್ರವಾರು ಮತ ವಿವರ...: ರಾಯಚೂರು ಲೋಕಸಭೆ ಕ್ಷೇತ್ರದ ರಾಯಚೂರು ನಗರ ಕ್ಷೇತ್ರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ನಂತರ 1,03,930 ಪುರುಷ ಹಾಗೂ 1,00,751 ಮಹಿಳಾ ಮತದಾರರಿದ್ದಾರೆ. ರಾಯಚೂರು ಗ್ರಾಮೀಣ-1,03,006 ಪುರುಷ, 1,04,922 ಮಹಿಳಾ ಮತದಾರರಿದ್ದಾರೆ. ಮಾನವಿ ಕ್ಷೇತ್ರ-1,06,768 ಪುರುಷ, 1,07,692 ಮಹಿಳಾ ಮತದಾರರಿದ್ದಾರೆ. ಲಿಂಗಸ್ಗೂರು ಕ್ಷೇತ್ರ- 1,05,148 ಪುರುಷ, 1,01,755 ಮಹಿಳಾ ಮತದಾರರಿದ್ದರೆ, ದೇವದುರ್ಗ ಕ್ಷೇತ್ರ-98,318 ಪುರುಷ, 97,934 ಮಹಿಳಾ ಮತದಾರರಿದ್ದಾರೆ.
ಅದೇ ರೀತಿ ಯಾದಗಿರಿ ಜಿಲ್ಲೆಯ ಯಾದಗಿರಿ ಕ್ಷೇತ್ರದಲ್ಲಿ 1,01,001 ಪುರುಷ, 1,00,720 ಮಹಿಳಾ ಮತದಾರರಿದ್ದಾರೆ. ಶಹಾಪುರ ಕ್ಷೇತ್ರದಲ್ಲಿ 99,658 ಪುರುಷ, 97,617 ಮಹಿಳಾ ಮತದಾರರು, ಸುರಪುರದಲ್ಲಿ 1,17,962 ಪುರುಷ ಮತ್ತು 1,13,870 ಮಹಿಳಾ ಮತದಾರರಿದ್ದಾರೆಂದು ಜಿಲ್ಲಾಡಳಿತ ತಿಳಿಸಿದೆ.


ಮತಗಟ್ಟೆ 1,878ಕ್ಕೆ ಹೆಚ್ಚಳ
ಮತದಾರರ ಪಟ್ಟಿ ಪರಿಷ್ಕರಣೆಯಿಂದಾಗಿ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡಿರುವುದರಿಂದ ಸದ್ಯ ಚುನಾವಣೆ ವಿಭಾಗವು ಸಹಜವಾಗಿಯೇ ಮತಗಟ್ಟೆಗಳ ಸಂಖ್ಯೆ ಹೆಚ್ಚಿಸಲು ನಿರ್ಧರಿಸಿದೆ. ಅದರಂತೆ ಮತದಾರರ ಪಟ್ಟಿ ಪರಿಷ್ಕರಣೆಗೂ ಮುನ್ನ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 1,566 ಮತಗಟ್ಟೆಗಳನ್ನು ಸ್ಥಾಪಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ಸದ್ಯ ಮತದಾರರ ಸಂಖ್ಯೆ ಹೊಸದಾಗಿ 50,935ರಷ್ಟು ಹೆಚ್ಚಳ ಕಂಡಿದೆ. ಹಾಗಾಗಿ ಮತಗಟ್ಟೆಗಳ ಸಂಖ್ಯೆಯನ್ನು 1,566 ರಿಂದ 1,878ಗೆ ಏರಿಕೆ ಮಾಡಲು ನಿರ್ಧರಿಸಿದ್ದು, ಮತದಾರರ ಸಂಖ್ಯೆಯಲ್ಲಿನ ಹೆಚ್ಚಳ ಮತಗಟ್ಟೆ ಸಿಬ್ಬಂದಿಯ ಪ್ರಮಾಣದಲ್ಲಿಯೂ ಹೆಚ್ಚಳಕ್ಕೆ ದಾರಿ ಮಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.