ಕೈ- ಕಮಲ ಅಬ್ಬರ, ದಳ ಪ್ರಚಾರ ದೂರ
ಕ.ಪ್ರ. ವಾರ್ತೆ , ಲಿಂಗಸ್ಗೂರು , ಏ.5
ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ದಿನಾಂಕ ಸಮೀಪಿಸುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರಕ್ಕೆ ಮುಂದಾಗಿವೆ. ಬಿರುಬಿಸಿಲು, ಚುನಾವಣೆ ಪ್ರಚಾರದ ಭರಾಟೆಯಿಂದ ರಾಜಕೀಯ ಕಣ ರಂಗೇರತೊಡಗಿದೆ.
ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಭರ್ಜರಿ ಪ್ರಚಾರಕ್ಕೆ ಮುಂದಾಗಿವೆ. ಆದರೆ ಕ್ಷೇತ್ರವನ್ನು ಜೆಡಿಎಸ್ ಶಾಸಕರೇ ಪ್ರತಿನಿಧಿಸುತ್ತಿದ್ದರೂ ಆ ಪಕ್ಷದ ಪ್ರಚಾರ ಕಳೆಗುಂದಿರುವುದು ಸ್ಪಷ್ಟವಾಗಿ ಗೋಚರಿಸತೊಡಗಿದೆ.
ಲೋಕಸಭಾ ಚುನಾವಣೆ ಹಿನ್ನೆಲೆ ಲಿಂಗಸ್ಗೂರು ಕ್ಷೇತ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಭಿನ್ನಮತ, ಪ್ರಚಾರದ ಭರಾಟೆ, ಆರೋಪ, ಪ್ರತ್ಯಾರೋಪ, ಕಾರ್ಯಕರ್ತರ ಸಭೆ, ಸಮಾರಂಭ ಸೇರಿ ಆಯಾ ಪಕ್ಷದ ಅಭ್ಯರ್ಥಿ ಗೆಲವಿಗೆ ಎಲ್ಲಿಲ್ಲದ ಪ್ರಯತ್ನಗಳು ಆರಂಭಗೊಂಡಿವೆ. ಜೆಡಿಎಸ್ ಪ್ರಚಾರ ಮಾತ್ರ ಚುರುಕು ಪಡೆದಿಲ್ಲ. ಕಾರ್ಯಕರ್ತರಲ್ಲಿ ಇಂದು ಆತಂಕಕ್ಕೆ ದಾರಿ ಮಾಡಿದೆ.
ಈ ಕ್ಷೇತ್ರ ವ್ಯಾಪ್ತಿಯಲ್ಲಿ ರಾಯಚೂರು ನಗರ ಮತ್ತು ಲಿಂಗಸ್ಗೂರು ಕ್ಷೇತ್ರದಲ್ಲಿ ಮಾತ್ರ ಜೆಡಿಎಸ್ ಶಾಸಕರಿದ್ದಾರೆ. ಲಿಂಗಸ್ಗೂರು ಕ್ಷೇತ್ರದ ಶಾಸಕ ಮಾನಪ್ಪ ವಜ್ಜಲ್ ಕಳೆದ ವಿಧಾನಸಭೆ ಚುನಾವಣೆಯಲ್ಲಷ್ಟೇ ಜೆಡಿಎಸ್ ಸೇರಿ ಶಾಸಕರಾದವರು. ಹಾಗಾಗಿ ಕಾರ್ಯಕರ್ತರ ಸಂಘಟನೆಯಲ್ಲಿ ಸಹಜವಾಗಿಯೇ ಗೊಂದಲಗಳಿರುವ ಸಾಧ್ಯತೆಯಿದೆ.
ಸದ್ದಿಲ್ಲ: ಪ್ರಸಕ್ತ ಚುನಾವಣೆಗೆ ಆರಂಭದಲ್ಲಿ ಜೆಡಿಎಸ್ ರಾಜಾ ಅಮರೇಶ್ವರ ನಾಯಕರನ್ನು ಅಭ್ಯರ್ಥಿಯಾಗಿ ಘೋಷಿಸಿತ್ತು. ಆದರೆ ಅವರು ಕಡೆಯ ಕ್ಷಣದಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಿಂದ ಅನಿವಾರ್ಯವಾಗಿ ದೂರದ ಬೆಳಗಾವಿಯ ನಿವೃತ್ತ ಅಧಿಕಾರಿ ಡಿ.ಬಿ. ನಾಯಕ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ.
ಜೆಡಿಎಸ್ ಪ್ರಾಬಲ್ಯ ಹೊಂದಿರುವ ಲಿಂಗಸ್ಗೂರು ವಿಧಾನಸಭೆ ಕ್ಷೇತ್ರದಲ್ಲಿ ಇದುವರೆಗೆ ಪಕ್ಷದ ಅಭ್ಯರ್ಥಿ ಡಿ.ಬಿ. ನಾಯಕ ಹಾಗೂ ಅವರ ಬೆಂಬಲಿಗರು ಚುನಾವಣೆ ಪ್ರಚಾರಕ್ಕೆ ಮುಂದಾಗಿಲ್ಲ. ಇದರಿಂದ ಪಕ್ಷದಲ್ಲಿ ಚಟುವಟಿಕೆಯೇ ಇಲ್ಲದಷ್ಟು ಅನುಮಾನ ಉಂಟು ಮಾಡುತ್ತಿದೆ.
ಪೈಪೋಟಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ, ಬಿಎಸ್ಸಾರ್ ಕಾಂಗ್ರೆಸ್, ಕೆಜೆಪಿ ಪಕ್ಷಗಳ ಘಟಾನುಘಟಿ ಅಭ್ಯರ್ಥಿಗಳಿಗೆ ಪೈಪೋಟಿ ನೀಡಿ ಕ್ಷೇತ್ರವನ್ನು ಗೆದ್ದಿದ್ದ ಜೆಡಿಎಸ್ನ ಶಾಸಕ ಮಾನಪ್ಪ ವಜ್ಜಲ್ ಲೋಕಸಭೆ ಚುನಾವಣೆ ವೇಳೆಗೆ ಮೌನಕ್ಕೆ ಶರಣರಾಗಿರುವುದು ಅಚ್ಚರಿಗೆ ದಾರಿ ಮಾಡಿದೆ.
ಪಕ್ಷದ ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಜೆಡಿಎಸ್ನ ತಾಲೂಕು ಮುಖಂಡರು ವಿಫಲರಾಗಿರುವುದು ಕಂಡುಬರುತ್ತಿದೆ. ಈ ಭಾಗದ ಪ್ರಬಲ ವ್ಯಕ್ತಿಗಳಲ್ಲಿ ಒಬ್ಬರಾದ ಮಾಜಿ ಸಚಿವ ರಾಜಾ ಅಮರೇಶ್ವರ ನಾಯಕರು ಜೆಡಿಎಸ್ ಪಕ್ಷದಿಂದ ಸ್ಪರ್ಧಿಸು ತ್ತಾರೆಂದು ನಂಬಿ ಕಾರ್ಯಕರ್ತರು, ಬೆಂಬಲಿಗರು ಸಂತಸದಲ್ಲಿದ್ದರು.
ಡಿ.ಬಿ.ನಾಯಕ ಏಕಾಂಗಿ: ಅದೇ ರೀತಿ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಮರಗುಂಡಪ್ಪ ಮೇಟಿ ಅವರೂ ಇತ್ತೀಚೆಗೆ ಕಾಂಗ್ರೆಸ್ ಸೇರಿದ್ದಾರೆ. ಹಾಗಾಗಿ ಪಕ್ಷದಲ್ಲಿ ಚುನಾವಣೆ ಅಬ್ಬರವೇ ಮಾಯವಾಗಿದೆ. ಹೊರ ಜಿಲ್ಲೆಯ ಅಭ್ಯರ್ಥಿ ಎಂದು ಕರೆಯಿಸಿಕೊಂಡಿರುವ ಜೆಡಿಎಸ್ ಅಭ್ಯರ್ಥಿ ಡಿ.ಬಿ. ನಾಯಕ ಅವರು ಸದ್ಯದ ಮಟ್ಟಿಗೆ ಕ್ಷೇತ್ರದಲ್ಲಿ ಏಕಾಂಗಿಯಂತಾಗಿದ್ದಾರೆ.
ಒಂದು ಕಾಲದಲ್ಲಿ ಬಿಸಿಲ ನಾಡಲ್ಲಿ ನೀರು ಹರಿಸಿ ರೈತರ ಕೃಷಿ ಉತ್ಪನ್ನಗಳ ಅಭಿವೃದ್ಧಿಗೆ ಕೃಷ್ಣಾ ನದಿ ನೀರಾವರಿ ಯೋಜನೆಗಳ ಮೂಲಕ ಪ್ರಗತಿಗೆ ದಾರಿ ಮಾಡಿದ್ದ ದೇವೇಗೌಡರ ಪಕ್ಷದ ಅಭ್ಯರ್ಥಿ ಸದ್ಯದ ಲೋಕಸಭೆ ಚುನಾವಣೆಯಲ್ಲಿ ಪ್ರಭಾವ ಬೀರುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಜಿಲ್ಲಾ ಜೆಡಿಎಸ್ ಸಹ ಚುನಾವಣೆಯ ಹಿನ್ನೆಲೆಯಲ್ಲಿ ಸಂಘಟನೆಗೆ ಮುಂದಾಗದಿರುವುದು ಸದ್ಯದ ಸಮಸ್ಯೆಗೆ ಮೂಲ ಕಾರಣ ಎಂದೇ ಹೇಳಲಾಗುತ್ತಿದೆ.
-ಅಮರೇಶಸ್ವಾಮಿ ಬಲ್ಲಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

