ರಾಯಚೂರು

ಅವಕಾಶ ಸಿಕ್ಕಲ್ಲೆಲ್ಲ ಪ್ರಚಾರ

Published On :

ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಏ.11
ಲೋಕಸಭೆ ಚುನಾವಣೆಯ ಮತದಾನದ ದಿನಗಳು ಸಮೀಪಿಸುತ್ತಿದ್ದಂತೆಯೇ ವಿವಿಧ ರಾಜಕೀಯ ಪಕ್ಷಗಳು ಪ್ರಚಾರ ಚುರುಕುಗೊಳಿಸಿದ್ದಾರೆ. ಉರಿಬಿಸಿಲಿನ ಮಧ್ಯೆಯೂ ಮದುವೆ ಸಮಾರಂಭ, ಸಂತೆ, ಸತ್ತವರ ಮನೆ ಸೇರಿದಂತೆ ಸಿಕ್ಕ ಸಿಕ್ಕ ಅವಕಾಶಗಳನ್ನು ಬಳಸಿ ಪ್ರಚಾರಕ್ಕೆ ಮುಂದಾಗುತ್ತಿರುವುದು ಕಂಡುಬಂದಿದೆ.
ಕಳೆದ ಮಾರ್ಚ್ ಅಂತ್ಯದಿಂದ ಜಿಲ್ಲೆ ಸೇರಿದಂತೆ ಲೋಕಸಭೆ ಕ್ಷೇತ್ರದಲ್ಲಿ ಕಂಡುಬರುತ್ತಿರುವ ಚುನಾವಣೆ ಪ್ರಚಾರದ ವೈಖರಿಯಿದು.
ಹೈ.ಕ. ಭಾಗ ಎಂದಿಗೂ ಬೇಸಿಗೆಯಲ್ಲಷ್ಟೇ ಅಲ್ಲ ಸರ್ವಕಾಲಕ್ಕೂ ಹಿಂದುಳಿಯುವಿಕೆ ಮತ್ತು ಬಿರುಬಿಸಿಲಿಗೆ ಫುಲ್ ಫೇಮಸ್. ಹಾಗಾಗಿ ಇಲ್ಲಿಗೆ ಭೇಟಿ ನೀಡುವ ಮೊದಲು ಬಿರುಬಿಸಿಲು ಎದುರಿಸಲು ಸಿದ್ಧರಾಗಿರಬೇಕು. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಪ್ರಚಾರಕ್ಕೆ ಅಷ್ಟಾಗಿ ರಾಜ್ಯಮಟ್ಟದ ನಾಯಕರು ಆಗಮಿಸಿಲ್ಲ.
ಇನ್ನು ರಾಜ್ಯದಲ್ಲಿ ಏಕಕಾಲಕ್ಕೆ ಮತದಾನ ನಡೆಯುವುದರಿಂದ ಎಲ್ಲ ಪ್ರಭಾವಿ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿಯೇ ಪ್ರಚಾರದಲ್ಲಿ ಬ್ಯುಸಿಯಾಗಿದ್ದು, ರಾಯಚೂರು ಲೋಕಸಭೆ ಕ್ಷೇತ್ರಕ್ಕೆ ಇದುವರೆಗೆ ಕಾಂಗ್ರೆಸ್ ಯುವ ನಾಯಕ ರಾಹುಲ್‌ಗಾಂಧಿ, ಯಡಿಯೂರಪ್ಪ ಅವರನ್ನು ಹೊರತುಪಡಿಸಿ ರಾಜ್ಯಮಟ್ಟದ ನಾಯಕರು ಪ್ರಚಾರಕ್ಕೆ ಆಗಮಿಸಿಲ್ಲ.
ಬಿರುಬಿಸಿಲ ಅಬ್ಬರ: ಜಿಲ್ಲೆ ಸೇರಿದಂತೆ ಇಡೀ ಹೈ.ಕ. ಭಾಗದಲ್ಲಿ ಈಗ ಬಿಸಿಲು ಬರೀ ಬಿಸಿಲಿನದ್ದೇ ಅಬ್ಬರ. ಜತೆಗೆ ಲೋಕಸಭೆ ಚುನಾವಣೆಯ ಪ್ರಚಾರದ ಬಿಸಿ ಬೇರೆ. ಹಾಗಾಗಿ ಕಣದಲ್ಲಿ 11 ಅಭ್ಯರ್ಥಿಗಳಿದ್ದರೂ ಹಣಾಹಣಿ ಕಾಣುತ್ತಿರುವುದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ಎಂಬುದು ಗೌಪ್ಯವೇನಲ್ಲ.
ಬಿಸಿಲು ಅಬ್ಬರದ ಪ್ರಚಾರಕ್ಕೆ ಕಡಿವಾಣ ಹಾಕಿದೆ ಎನ್ನಬಹುದು. ಕಳೆದ 15 ದಿನಗಳಿಂದ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ದಿನಾಲೂ ತಾಪಮಾನ 40ರಿಂದ 42ರ ಆಸುಪಾಸಿನಲ್ಲಿದೆ. ಪರಿಣಾಮ ಚುನಾವಣೆ ಪ್ರಚಾರ ಮಾಡುವುದು ಅಭ್ಯರ್ಥಿಗಳ ಪಾಲಿಗೆ ಬಹುದೊಡ್ಡ ಸವಾಲೇ ಸರಿ.
ತಂತ್ರ: ಬಿಸಿಲಿನಿಂದ ಪಾರಾಗಲು ಬೆಳ್ಳಂಬೆಳಗ್ಗೆಯೇ ಅಭ್ಯರ್ಥಿಗಳು ಮತದಾರರ ಮನೆ ಮನೆಗೆ ತೆರಳಿ ಮತ ಯಾಚಿಸುತ್ತಿದ್ದಾರೆ. ಹಾಗೆಯೇ ಸಂಜೆ ಆರಂಭಗೊಳ್ಳುವ ಪ್ರಚಾರ ರಾತ್ರಿ 10ರವರೆಗೆ ಸಾಗುತ್ತಿದೆ. ಇನ್ನುಳಿದಂತೆ ಮಧ್ಯಾಹ್ನದ ವೇಳೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಆಯೋಜನೆಯ ಸಿದ್ಧಪಡಿಸುವಿಕೆ, ಬೆಂಬಲಿಗರೊಂದಿಗೆ ಮಾತುಕತೆಗೆ ಮೀಸಲಿಡುವ ಕಾರ್ಯ ಅಭ್ಯರ್ಥಿಗಳು ಮಾಡುತ್ತಿದ್ದಾರೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ, ತಾವು ಸ್ಥಳೀಯರಾಗಿರುವುದರಿಂದ ಬಿರುಬಿಸಿಲು ಅಷ್ಟಾಗಿ ಬಾಧಿಸುತ್ತಿಲ್ಲ. ಆದರೆ ಬೇಗ ದಣಿವಾಗುವುದು ಸಹಜ. ಬೇಸಿಗೆಯ ದಿನಗಳಾಗಿದ್ದರಿಂದ ಮತದಾರರ ಲಭ್ಯತೆ ಯಾಧರಿಸಿ ಮತ ಯಾಚಿಸಬೇಕಾಗುತ್ತದೆ ಎಂದಿದ್ದಾರೆ.
ಅವಕಾಶ: ಒಂದೆಡೆ ಬಿರುಬಿಸಿಲು ಕಾಡುತ್ತಿದ್ದರೆ ಮತ್ತೊಂದೆಡೆ ರಾಜಕೀಯ ನಾಯಕರು ಹಾಗೂ ಪಕ್ಷಗಳ ಕಾರ್ಯಕರ್ತರು ಮದುವೆ ಸಮಾರಂಭ, ಸಂತೆ, ಜಾತ್ರೆ ಸೇರಿ ಯಾವುದೇ ಸಂದರ್ಭ ಸಿಕ್ಕರೂ ಅಂಥ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಅವಕಾಶ ಸಿಕ್ಕಾಗಲೆಲ್ಲ ತೆರಳಿ ಕಾರ್ಯಕ್ರಮಗಳಿಗೆ ಹಾಜರಾತಿ ಜತೆಗೆ ಮತಯಾಚನೆ ಕಾರ್ಯವನ್ನೂ ಮಾಡಿ ಮುಗಿಸುತ್ತಿದ್ದಾರೆ.
ಮತದಾರರ ನಿರಾಸಕ್ತಿ: ಬೇಸಿಗೆಯ ಬಿರುಬಿಸಿಲ ದಿನಗಳಲ್ಲಿ ಚುನಾವಣೆ ಬಂದಿರುವುದು ಮತದಾರರಿಗೇನೂ ಆತಂಕ ತಂದಿಲ್ಲ. ಆದರೆ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿಸಿರುವುದಂತೂ ನಿಜ. ಮತದಾರರು ಬೆಳಗ್ಗೆ ಮತ್ತು ಸಂಜೆ ವೇಳೆ ಮಾತ್ರ ಅಭ್ಯರ್ಥಿಗಳಿಗೆ ಲಭ್ಯರಾಗುತ್ತಿದ್ದಾರೆ. ಮಧ್ಯಾಹ್ನದ ವೇಳೆ ಮತಯಾಚನೆಗೆ ತೆರಳಿದರೆ ಬೇಸರಿಸಿಕೊಳ್ಳುವುದು ಸಹಜ. ಹಾಗಾಗಿ ಅಭ್ಯರ್ಥಿಗಳು ಮತದಾರರ ಮನಸ್ಥಿತಿ ಅರಿತು ಪ್ರಚಾರ ಮಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.