ಸಂಪನ್ಮೂಲಗಳ ಮಿತ ಬಳಕೆ ಅವಶ್ಯ
ಕ.ಪ್ರ. ವಾರ್ತೆ ರಾಯಚೂರು ಏ.22
ನಮ್ಮೆಲ್ಲ ಅವಶ್ಯಕತೆಗಳನ್ನು ಪೂರೈಸಲು ಲಭ್ಯವಿರುವುದು ಒಂದೇ ಭೂಮಿ ಎಂಬುದನ್ನು ಮರೆಯಬಾರದು. ಭೂಮಿ ಮಾನವನಿಗೆ ಒದಗಿಸುತ್ತಿರುವ ಗಾಳಿ, ನೀರು, ಆಹಾರ ಹಾಗೂ ಇತರೆ ಸಂಪನ್ಮೂಲಗಳನ್ನು ಹಿತಮಿತವಾಗಿ ಬಳಸಿ ಪರಿಸರ ಸಂರಕ್ಷಣೆ ಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವು ಅವಶ್ಯಕತೆಯಿದೆ ಎಂದು ಜಿಪಂ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ, ಕ್ಯಾಷುಟೆಕ್ ಸಂಸ್ಥೆ, ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯ, ವಿಶ್ವೇಶ್ವರಾಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ, ವಿವಿಧ ಮಹಾವಿದ್ಯಾಲಯಗಳು, ತಾಂತ್ರಿಕ ಕಾಲೇಜುಗಳು, ಸ್ವಯಂ ಸೇವಾ ಸಂಸ್ಥೆಗಳು, ಭಾರತ ಜ್ಞಾನ ವಿಜ್ಞಾನ ಸಮಿತಿ, ಎಆರ್ವಿ ಸಿಮೆಂಟ್ ಸೊಸೈಟಿ ಶಕ್ತಿನಗರ ಹಾಗೂ ಹಾರು ಬೂದಿಯಿಂದ ಇಟ್ಟಿಗೆ ತಯಾರಿಸುವ ಸಣ್ಣ ಉದ್ದಿಮೆದಾರರ ಸಂಘದಿಂದ ಆಯೋಜಿಸಿದ್ದ ವಿಶ್ವಭೂಮಿ ದಿನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ಎಚ್ಚರಿಕೆ: ಭೂಮಿಯನ್ನು ಕಲುಷಿತಗೊಳ್ಳದಂತೆ ಎಚ್ಚರಿಕೆ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಹೆಚ್ಚಿನ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವುದರಿಂದಾಗಿ ನಗರಗಳಲ್ಲಿ ನೀರು, ತ್ಯಾಜ್ಯ ನಿರ್ವಹಣೆ, ಆಹಾರ ವಿತರಣೆ, ಸಾರಿಗೆ ಮುಂತಾದವುಗಳ ಮೇಲೆ ಬೇಡಿಕೆ ತೀವ್ರತೆಯ ಒತ್ತಡ ಹೆಚ್ಚುತ್ತಿದೆ. ಬೇಡಿಕೆ ಹಾಗೂ ಪೂರೈಕೆಯಲ್ಲಿ ಸಮನ್ವಯತೆ ಕೊರತೆಯಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ ಎಂದರು.
ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂಧನದ ಹಿತಮಿತ ಬಳಕೆ, ಪರಿಸರದ ಹಿತಕಾಯುವ ರೀತಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮುಂದಿನ ದಿನಗಳಲ್ಲಿ ಸಂಪನ್ಮೂಲಗಳ ಕೊರತೆಯಾಗುವುದನ್ನು ತಡೆಯಲು ಜಾಗೃತರಾಗಬೇಕಿದೆ ಎಂದು ಕರೆ ನೀಡಿದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚೆನ್ನೈನ ಎಸ್ಆರ್ಎಂಯು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ರಾಜಮಾನೆ ಮತ್ತು ಜಯಲಕ್ಷ್ಮಿ, ರಾಯಚೂರು ಸಹಾಯಕ ಆಯುಕ್ತ ಎಂ.ಪಿ. ಮಾರುತಿ, ಡಿಡಿಪಿಐ ರಾಮಾಂಜನೇಯ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಇಂದಿರಾ, ಡಿ.ಎಚ್.ಒ. ಡಾ. ನಾರಾಯಣ, ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಪ್ರೊ. ಸಿ.ಡಿ. ಪಾಟೀಲ್, ಎಸ್.ಎಲ್.ಎನ್. ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ.ಎಸ್.ಬಿ. ಚಟ್ಟಿ, ಬಿಇಒ ಮಲ್ಲಿಕಾರ್ಜುನ, ನಗರಸಭೆ ಪ್ರಭಾರಿ ಆಯುಕ್ತ ವೆಂಕಟೇಶ ಸೇರಿದಂತೆ ಅನೇಕರಿದ್ದರು.
ಜಾಥಾ: ವಿವಿಧ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಜಾಥಾ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಅಂಬೇಡ್ಕರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪರಿಸರ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

