ರಾಯಚೂರು

'ಭದ್ರಾ' ಮಂಡಳಿಗೆ ಮೂಗುದಾರ

Published On :

 ಎ.ಜಿ. ಕಾರಟಗಿ
ಕಾರಟಗಿ: ತುಂಗಭದ್ರಾ ಮಂಡಳಿಯ ಕಾರ್ಯವೈಖರಿ, ಬದಲಾವಣೆ ಹಾಗೂ ನಿಷ್ಪಕ್ಷಪಾತ ಕಾರ್ಯ ನಿರ್ವಹಣೆಗಾಗಿ ಮಾರ್ಪಾಡು ಕಾರ್ಯಸೂಚಿ ಜಾರಿಗೊಳಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ಬಳ್ಳಾರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಸಚಿವರ, ಶಾಸಕರ, ರೈತ ಪ್ರತಿನಿಧಿಗಳ ಮತ್ತು ನೀರಾವರಿ ತಜ್ಞರ ಒತ್ತಾಸೆ ಮೇರೆಗೆ ಸರ್ಕಾರ ಮೂರು ಪ್ರಮುಖ ಅಂಶಗಳನ್ನು ಗೊತ್ತುಪಡಿಸಿದ್ದು, ಅವುಗಳನ್ನು ತಿದ್ದುಪಡಿ ಮಾಡಿ, ಕೇಂದ್ರ ಜಲ ಆಯೋಗಕ್ಕೆ ಕಳುಹಿಸಲಿದೆ.
ರಾಜ್ಯದಲ್ಲಿ ಗರಿಷ್ಠ ನೀರಾವರಿ ಸೌಲಭ್ಯ ನೀಡುವ ತುಂಗಭದ್ರಾ ಅಣೆಕಟ್ಟೆಯಲ್ಲಿ ಆಂಧ್ರ ಪ್ರದೇಶಕ್ಕೂ ಪಾಲಿದೆ. ಆದರೆ, ಆಡಳಿತ ಮಂಡಳಿಯಲ್ಲಿ ಅವರ ಪಾರುಪತ್ಯವೇ ಜಾಸ್ತಿ. ಇದನ್ನು ತಪ್ಪಿಸುವಂತೆ ರಾಯಚೂರು ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಫೆ.7ರಂದು ಬೆಂಗಳೂರಿನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ನೀರಾವರಿ ಕಾರ್ಯದರ್ಶಿ, ನೀರಾವರಿ ತಜ್ಞರು ಸೇರಿ ತುಂಗಭದ್ರಾ ಅಣೆಕಟ್ಟೆಯಲ್ಲಿ ಆಂಧ್ರಪ್ರದೇಶದ ಹಿಡಿತ ಮತ್ತು ಅದರಿಂದ ರಾಜ್ಯದ ರೈತರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಗಂಭೀರವಾಗಿ ಚರ್ಚಿಸಿದ್ದಾರೆ. ನಾನಾ ಕಾರಣ ಮುಂದೊಡ್ಡಿ ಆಂಧ್ರ ಪ್ರದೇಶ ಅಣೆಕಟ್ಟೆಯಿಂದ ಹೆಚ್ಚು ನೀರು ಪಡೆಯುತ್ತಿದೆ. ಕಳ್ಳತನದಿಂದಲೂ ಬಿಡಿಸಿಕೊಳ್ಳುತ್ತಿದೆ. ಈ ಬಗ್ಗೆ ಇಲ್ಲಿನ ರೈತರು ಹೋರಾಟ ನಡೆಸಿದ್ದರು. ಮುಖ್ಯವಾಗಿ ಜಂಟಿ ರಾಜ್ಯಗಳ ನೀರಾವರಿ ಯೋಜನೆಯಾಗಿದ್ದರಿಂದ ಒಂದು ಮಂಡಳಿ ಇದ್ದರೂ ಅದು ಆಂಧ್ರಮಯವಾಗಿದೆ.
ಮೂರಂಶಗಳ ತಿದ್ದುಪಡಿ: ಈಗ ಮಂಡಳಿಯಲ್ಲಿ ಆಂಧ್ರ ಪ್ರದೇಶದ ಅಧೀಕ್ಷಕ ಎಂಜಿನಿಯರ್ ಇದ್ದಾರೆ. ಇನ್ನು ಮುಂದೆ ರಾಜ್ಯದ ಒಬ್ಬ ನೀರಾವರಿ ಅಧಿಕಾರಿಯೂ ಮಂಡಳಿಯಲ್ಲಿ ಅಧೀಕ್ಷಕ ಎಂಜಿನಿಯರ್ ಹುದ್ದೆ ಅಲಂಕರಿಸಬೇಕು. ಜಂಟಿ ಸಹಭಾಗಿತ್ವದ ಯೋಜನೆಯಲ್ಲಿ ಎರಡೂ ರಾಜ್ಯಗಳ ಅಧಿಕಾರಿಗಳು ಇರಲಿ ಎಂಬ ವಾದ ಮುಂದಿಡಲಾಗಿದೆ.
ಅಣೆಕಟ್ಟೆ ನೀರಿನ ಕುರಿತಾದ ಕೃಷ    ನ ಲೆಕ್ಕದ ಪದ್ಧತಿ ತಪ್ಪಿಸಬೇಕಿದೆ. ಪ್ರತಿ ವರ್ಷ ಕನಿಷ್ಠ 10-20 ಟಿಎಂಸಿ ನೀರನ್ನು ನಕಾರಾತ್ಮಕ ಒಳಹರಿವು (ನೆಗೆಟಿವ್ ಇನ್‌ಫ್ಲೋ) ದಾಖಲಿಸುವುದು ಬದಲಾಯಿಸಬೇಕು. ಕುಡಿಯುವ ನೀರಿನ ನೆಪ ಹೇಳಿ ಆಂಧ್ರ ಪ್ರದೇಶ ಮೇ ತಿಂಗಳಲ್ಲಿ ಪಡೆಯಬೇಕಾದ ನೀರನ್ನು ಈಗಲೇ ಪಡೆಯುತ್ತಿದೆ. ಇದಕ್ಕೂ ಅಂತ್ಯ ಹಾಡಬೇಕೆಂದು ರಾಯಚೂರು ಭಾಗದ ಜನಪ್ರತಿನಿಧಿಗಳು ಪಟ್ಟು ಹಿಡಿದಿದ್ದಾರೆ. ರಾಜ್ಯ ಸರ್ಕಾರ ಈ ಮೂರು ಅಂಶಗಳ ತಿದ್ದುಪಡಿಗೆ ಮುಂದಾಗಿರುವ ಕುರಿತು ಸಿಂಧನೂರು ಶಾಸಕ ಬಾದರ್ಲಿ ಹಂಪನಗೌಡ ಸುಳಿವು ನೀಡಿದ್ದಾರೆ. ನಾವು ಐದು ಅಂಶ ಪ್ರಸ್ತಾಪಿಸಿದ್ದೆವು. ನೀರಾವರಿ ಕಾರ್ಯದರ್ಶಿಗಳು ಮೂರಂಶಗಳ ತಿದ್ದುಪಡಿಯನ್ನು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಇದಕ್ಕೆ ಕೇಂದ್ರ ಜಲ ಆಯೋಗ ಸಮ್ಮತಿಸುವುದೇ ಎಂದು ಕಾದು ನೋಡಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.