ರಾಯಚೂರು

ರೈಲೂ ಇಲ್ಲ, ಶಿಳ್ಳೆಯೂ ಇಲ್ಲ...

Published On :

 ಜಗನ್ನಾಥ ಆರ್. ದೇಸಾಯಿ
ಕ.ಪ್ರ. ವಾರ್ತೆ    ರಾಯಚೂರು    ಫೆ.12
ಮುಂಬರುವ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಭರವೆಸಗಳ ಮಹಾಪೂರದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ರೈಲು ಪ್ರಯಾಣಿಕರಿಗೆ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ನಿರಾಸೆ ಮೂಡಿಸಿದ್ದಾರೆ. ಕಳೆದ ಬಜೆಟ್‌ಗಳಲ್ಲಿ ಪ್ರಕಟಿಸಿದ್ದ ಉದ್ದೇಶಿತ ರೈಲು ಯೋಜನೆಗಳಿಗೆ ಅಗತ್ಯ ನೆರವು ದೊರಕದಿರುವುದು ಜನತೆಯ ಬೇಸರಕ್ಕೆ ಕಾರಣವಾಗಿದೆ.
ರೇಲ್ವೆ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ ಮಂಡಿಸಿದ ರೇಲ್ವೆ ಬಜೆಟ್‌ನಲ್ಲಿ ಜಿಲ್ಲೆಗೆ ದಕ್ಕಿದ್ದು ಕೇವಲ ಎರಡು ರೈಲುಗಳ ಸಂಚಾರ ವಿಸ್ತರಣೆ ಮಾತ್ರ ಎಂದೇ ಹೇಳಬಹುದು. ಸಚಿವರು ಹೈದ್ರಾಬಾದ್ ಕರ್ನಾಟಕ ಭಾಗದವರೇ ಆಗಿದ್ದರೂ ಹೆಚ್ಚಿನದು ಜಿಲ್ಲೆಗೆ ಸಿಕ್ಕಿಲ್ಲ ಎಂಬುದು ಸ್ಪಷ್ಟ.
ದಿನವೂ ಸಂಚಾರ: ಪ್ರಸಕ್ತ ಬಜೆಟ್‌ನಲ್ಲಿ ಇದುವರೆಗೆ ಜಿಲ್ಲೆಯ ಮೂಲಕ ವಾರದಲ್ಲಿ ಮೂರು ದಿನಕ್ಕೊಮ್ಮೆ ಹಾದು ಹೋಗುತ್ತಿದ್ದ ಬೀದರ್- ಯಶವಂತಪುರ ರೈಲು ಇನ್ನು ಮುಂದೆ ದಿನವೂ ಸಂಚರಿಸಲಿದೆ. ಹಾಗೆಯೇ ಸಿಕಿಂದ್ರಾಬಾದ್‌ನಿಂದ ಹುಬ್ಬಳ್ಳಿಗೆ ವಾರದಲ್ಲಿ ಮೂರು ಬಾರಿ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್ ರೈಲು ಇನ್ನು ಮುಂದೆ ದಿನವೂ ಸಂಚರಿಸಲಿದೆ ಎಂದು ಪ್ರಸ್ತಾಪಿಸಲಾಗಿದೆ. ಆದರೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ರಾಯಚೂರು- ಗುಲ್ಬರ್ಗ ಮಧ್ಯೆ ಫಾಸ್ಟ್ ಪ್ಯಾಸೆಂಜರ್, ಗುಲ್ಬರ್ಗ- ಬೆಂಗಳೂರು ಮಧ್ಯೆ ಫಾಸ್ಟ್ ಪ್ಯಾಸೆಂಜರ್ ರೈಲು ಸಂಚಾರ ಆರಂಭದಂಥ ಬೇಡಿಕೆಗಳಿಗೆ ಮನ್ನಣೆ ದೊರೆತಿಲ್ಲ.
ಮುಂದೆಯೂ ಸೀಟಿಲ್ಲ: ಅದೇ ರೀತಿ ಬೆಂಗಳೂರಿಗೆ ತೆರಳಲು ರಾಯಚೂರಿನ ಪ್ರಯಾಣಿಕರು ಕಳೆದ ಅನೇಕ ವರ್ಷಗಳಿಂದ ಸೀಟು ದೊರೆಯದೇ ಪರದಾಡುವಂಥ ಸ್ಥಿತಿಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರೇಲ್ವೆ ಸಚಿವರಿಗೆ ಅನೇಕ ಬಾರಿ ಅವರ ಭೇಟಿ ವೇಳೆ ಬೆಂಗಳೂರಿಗೆ ತೆರಳುವ ಲಿಂಕ್ ಎಕ್ಸ್‌ಪ್ರೆಸ್ ರೈಲಿನಲ್ಲಿ ರಾಯಚೂರಿನ ಪ್ರಯಾಣಿಕರಿಗೆ ಕೋಟಾ ಹೆಚ್ಚಳ ಮಾಡುವಂತೆ ಇರಿಸಿದ್ದ ಬೇಡಿಕೆಯೂ ಸಚಿವರಿಗೆ ಕೇಳಿಸಿದಂತಿಲ್ಲ.
ಇನ್ನು ಕಳೆದ ಅನೇಕ ದಶಕಗಳಿಂದ ಕುಂಟುತ್ತಲೇ ಸಾಗಿರುವ ಮುನಿರಾಬಾದ್- ಮಹೆಬೂಬ್‌ನಗರ ಉದ್ದೇಶಿತ ರೈಲು ಮಾರ್ಗದ ನಿರ್ಮಾಣಕ್ಕೆ ರೇಲ್ವೆ ಸಚಿವರು ಹೆಚ್ಚಿನ ಅನುದಾನ ಒದಗಿಸಿದಂತೆ ಕಾಣುತ್ತಿಲ್ಲ. ಇದುವರೆಗೆ ಪ್ರತಿ ಬಜೆಟ್‌ನಲ್ಲಿ 50 ಕೋಟಿಯಷ್ಟೇ ಮಂಜೂರಾಗಿದ್ದರಿಂದ ಹಾಗೂ ರಾಜ್ಯ ಸರ್ಕಾರ ತನ್ನ ಪಾಲಿನ ಹಣ ಕೇಂದ್ರಕ್ಕೆ ಪಾವತಿ ಮಾಡದ್ದರಿಂದ ಈಗಲೂ ಈ ರೇಲ್ವೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆಯಿಂದ ಹೊರಬಂದಿಲ್ಲ ಎಂಬುದು ವಾಸ್ತವ.
ಗದ್ವಾಲ್‌ಗೆ ಎಕ್ಸ್‌ಪ್ರೆಸ್ ರೈಲು ನಿರೀಕ್ಷೆ ಹುಸಿ: ಕಳೆದ ವರ್ಷಾಂತ್ಯಕ್ಕೆ ರಾಯಚೂರು- ಗದ್ವಾಲ್ ಮಧ್ಯೆ ನೂತನ ಡೆಮೋ ರೈಲು ಸಂಚಾರ ಆರಂಭಗೊಂಡಿದೆ. ಡೆಮೋ ರೈಲು ದರವೇನೋ ಕಡಿಮೆಯೇ. ಆದರೆ ಈ ರೈಲು ಗದ್ವಾಲ್ ಮೂಲಕ ಹೈದರಾಬಾದ್‌ಗೆ ತಲುಪಲು ಸದ್ಯ 6- 7 ಗಂಟೆ ತೆಗೆದುಕೊಳ್ಳುತ್ತಿದೆ. ಹೀಗಾಗಿ ಜಿಲ್ಲೆಯ ಜನತೆ ಪ್ರಸಕ್ತ ಬಜೆಟ್‌ನಲ್ಲಿ ಈ ನೂತನ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ರೈಲು ಓಡಾಟದ ನಿರೀಕ್ಷೆಯಲ್ಲಿದ್ದವರಿಗೆ ಬಜೆಟ್ ನಿರಾಸೆಗೊಳಿಸಿದೆ.
ಇನ್ನು ಗದಗ- ವಾಡಿ ಉದ್ದೇಶಿತ ರೈಲು ಮಾರ್ಗಕ್ಕೆ ಸಂಬಂಧಿಸಿ ಬಜೆಟ್‌ನಲ್ಲಿ ಸದ್ಯಕ್ಕೆ ಹೆಚ್ಚಿನ ಮಹತ್ವ ನೀಡಿದಂತೆ ಕಾಣುತ್ತಿಲ್ಲ. ಆದರೆ ಬಿಡಿಗಾಸು ಮಾತ್ರ ದೊರೆತಿರುವ ಸಾಧ್ಯತೆಯಿದೆ. ಇನ್ನು ತಿರುಪತಿಗೆ ತೆರಳುವ ಹರಿಪ್ರಿಯಾ ಎಕ್ಸ್‌ಪ್ರೆಸ್ ರೈಲಿನಲ್ಲಿಯೂ ರಾಯಚೂರಿಗರಿಗೆ ಹೆಚ್ಚಿನ ಸೀಟಿನ ಅವಕಾಶ ಕಲ್ಪಿಸುವ ನಿರೀಕ್ಷೆಗೆ ಬೆಲೆ ಬಂದಂತಿಲ್ಲ. ಒಟ್ಟಾರೆಯಾಗಿ ಬಹು ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆಗೆ ರೇಲ್ವೆ ಬಜೆಟ್ ಕಳೆದ ಸಾಲಿನಂತೆಯೇ ನಿರಾಸೆ ತಂದಿರುವುದಂತೂ ಸತ್ಯ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.