ರಾಯಚೂರು

ಎಪಿಎಂಸಿ ಹಮಾಲರಿಂದ ಧರಣಿ

Published On :

ಮಸ್ಕಿ: ಹಮಾಲರಿಗೆ ಅಧಿಕೃತ ಪರವಾನಗಿ ಪತ್ರ ನೀಡಬೇಕು. ಕೆಲಸದ ಸಮಯ ನಿಗದಿಗೊಳಿಸಬೇಕೆಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪಟ್ಟಣದ ಮಲ್ಲಿಕಾರ್ಜುನ ಹಮಾಲರ ಸಂಘದ ಕಾರ್ಯಕರ್ತರು ಎಪಿಎಂಸಿ ಯಲ್ಲಿ ಸಾಂಕೇತಿಕ ಧರಣಿ ನಡೆಸಿದರು.
ಪಟ್ಟಣದ ಗಚ್ಚಿನಮಠದಿಂದ ಪ್ರಾರಂಭಗೊಂಡ ಪ್ರತಿಭಟನಾ ರ್ಯಾಲಿ ಹಳೆ ಬಸ್ ನಿಲ್ದಾಣ, ಮುದಗಲ್ ಕ್ರಾಸ್, ಸಂತೆ ಬಜಾರ, ಮೇನಬಜಾರ್, ಕನಕ ವೃತ್ತ, ವಾಲ್ಮೀಕಿ ವೃತ್ತದ ಮೂಲಕ ಎಪಿಎಂಸಿ ಆವರಣ ತಲುಪಿ ಸಾಂಕೇತಿಕ ಧರಣಿ ನಡೆಸಿ ಲಿಂಗಸ್ಗೂರು ಎಪಿಎಂಸಿ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ನ ರಾಜ್ಯ ಉಪಾಧ್ಯಕ್ಷ ಶೇಕ್ಷಾಖಾದ್ರಿ ಮಾತನಾಡಿ, ಮಸ್ಕಿ ಹಮಾಲರು ಎಪಿಎಂಸಿ ಯಿಂದ ಹಮಾಲರಿಗೆ ಲೈಸನ್ಸ್ ನೀಡಲು 2013ರ ಸೆ.19ರಂದು ಅರ್ಜಿ ಸಲ್ಲಿಸಿದ್ದು, ಕೂಡಲೇ ಹಮಾಲರಿಗೆ ಲೈಸನ್ಸ್ ನೀಡಬೇಕು ಎಂದು ಆಗ್ರಹಿಸಿದರು.
ನವೀಕರಣ: ಮುದಗಲ್ ಭಾಗದ ಹಮಾಲರ ಲೈಸನ್ಸ್‌ಗಳನ್ನು ಸರ್ಕಾರದ ಆದೇಶದಂತೆ ಹತ್ತು ವರ್ಷಕ್ಕೊಮ್ಮೆ ನವೀಕರಣ ಮಾಡಬೇಕು. ಮಸ್ಕಿ ಹಾಗೂ ಮುದಗಲ್ ಎಪಿಎಂಸಿ ಗಳಲ್ಲಿ ಹಮಾಲಿ ಕಾರ್ಮಿಕರಿಗಾಗಿ ಶ್ರಮಿಕರ ಭವನ ನಿರ್ಮಿಸಿ ಮೂಲ ಸೌಲಭ್ಯ ಒದಗಿಸಬೇಕು ಎಂದರು.
ಮುದಗಲ್ ಹಮಾಲಿ ಕಾರ್ಮಿಕರ ಮಕ್ಕಳಿಗೆ ಶಿಕ್ಷಾ ಸಹಯೋಗ ವಿದ್ಯಾರ್ಥಿ ವೇತನ ಪಾವತಿಸಲು ಕ್ರಮ ಜರುಗಿಸಬೇಕು. ಹಮಾಲಿ ಕಾರ್ಮಿಕರ ಬೇಡಿಕೆಯಂತೆ ಕೆಲಸದ ಸಮಯ ನಿಗದಿಗೊಳಿಸಬೇಕು. ಮಸ್ಕಿ ಹಾಗೂ ಮುದಗಲ್ ಗ್ರಾಮಗಳಲ್ಲಿ ಹಮಾಲಿ ಕಾರ್ಮಿಕರಿಗೆ ನಿವೇಶನ ನೀಡಿ ಹಮಾಲರ ಕಾಲನಿ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ಫೆಡರೇಷನ್ ಜಿಲ್ಲಾಧ್ಯಕ್ಷ ಯಂಕಪ್ಪ ಕೆಂಗಲ್, ಕಾರ್ಯದರ್ಶಿ ಶಿವಪ್ಪ, ಹನುಮಂತಪ್ಪ ಭಜಂತ್ರಿ, ದುರುಗಪ್ಪ ಬುದ್ದಿನ್ನಿ, ದಾವಲಸಾಬ್ ತಲೇಖಾನ, ಬಸಪ್ಪ ಸೋಮಲಾಪುರ, ರಂಗಪ್ಪ ಕುರಕುಂದಿ, ದಸ್ತಗಿರಿಸಾಬ್, ಹನುಮಂತಪ್ಪ ತೋರಣದಿನ್ನಿ, ಆದಪ್ಪ ನಗನೂರ, ಗದ್ದೆಪ್ಪ ಮುದಗಲ್, ಮೌಲಾಸಾಬ್ ಮುದಗಲ್, ಗ್ಯಾನಪ್ಪ ಮುದಗಲ್, ಬಾಬು ಸಾಬ್ ಗುಡಿಹಾಳ, ಶಾಮೀದ ತೆಗ್ಗಿನಮನಿ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.