ಬೇಡಿಕೆ ಈಡೇರಿಕೆಗೆ ಆಗ್ರಹ
ರಾಯಚೂರು: ಸರ್ಕಾರಿ ನೌಕರರ ಸಾಮಾಜಿಕ ಭದ್ರತೆಯ ಏಕೈಕ ಮೂಲ ನಿವೃತ್ತಿ ವೇತನವನ್ನು ಖಾಸಗೀಕರಣಗೊಳಿಸುವ ನಿವೃತ್ತಿ ವೇತನ ಖಾಸಗೀಕರಣ ಮಸೂದೆಯನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಗುರುವಾರ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು ಜಿಲ್ಲಾಧಿಕಾರಿ ಮೂಲಕ ಸಿಎಂಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರ ನಿವೃತ್ತಿ ವೇತನ ಖಾಸಗೀಕರಣ ಮಸೂದೆಯನ್ನು ಈಗಾಗಲೇ ಅಂಗೀಕರಿಸಿದೆ. ಮಸೂದೆ ವಿರುದ್ಧ ರಾಜ್ಯ ಸರ್ಕಾರಿ ನೌಕರರು ಹಾಗೂ ಕೇಂದ್ರ ಸರ್ಕಾರಿ ನೌಕರರು ಇತ್ತೀಚೆಗೆ ಬೃಹತ್ ಪಾರ್ಲಿಮೆಂಟ್ ಚಲೋ ಮೂಲಕ ಪ್ರತಿಭಟಿಸಿದ್ದಾರೆ. ನೌಕರರ ನಿವೃತ್ತಿ ವೇತನದ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸುವಂಥ ಯಾವುದೇ ಹುನ್ನಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಸೇವೆ ಕಾಯಂಗೊಳಿಸಿ: ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ವೇತನ ಮತ್ತು ಇತರೆ ಭತ್ಯೆಯಲ್ಲಿನ ತಾರತಮ್ಯ ನಿವಾರಣೆಯಾಗದೇ ಮುಂದುವರಿದಿದೆ. ಕೇಂದ್ರ ಸರ್ಕಾರ ತನ್ನ ಸಿಬ್ಬಂದಿಗೆ 7ನೇ ವೇತನ ಆಯೋಗವನ್ನು ಘೋಷಿಸಿದೆ. ಇದರಿಂದಾಗಿ ವೇತನ ತಾರತಮ್ಯ ಹೆಚ್ಚಲಿದ್ದು, ರಾಷ್ಟ್ರೀಯ ವೇತನ ನೀತಿ ರೂಪಿಸಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಎಲ್ಲ ಹುದ್ದೆಗಳನ್ನು ನಿಯಮಗಳ ಪ್ರಕಾರ ಕಾಯಂ ಆಗಿ ನೇಮಿಸಿಕೊಳ್ಳಬೇಕು. ಸರ್ಕಾರದ ಸೇವೆಗಳಲ್ಲಿ ಗುತ್ತಿಗೆ ಆಧಾರದ ನೇಮಕಾತಿ ರದ್ದುಗೊಳಿಸಬೇಕು. ಗುತ್ತಿಗೆ, ದಿನಗೂಲಿ ಮತ್ತಿತರೆ ರೀತಿಯಲ್ಲಿ ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವವರಿಗೆ ಕಾಯಂಗೊಳಿಸಿ ವೇತನ ನೀಡಬೇಕೆಂದು ಆಗ್ರಹಿಸಿದರು.
ವೇತನ ತಾರತಮ್ಯ ಹೋಗಲಾಡಿಸಿ: ಕೋಮುವಾದಿ, ಪ್ರತ್ಯೇಕತಾವಾದಿ ಶಕ್ತಿಗಳನ್ನು ಸೋಲಿಸಲು ಎಲ್ಲ ರೀತಿಯಿಂದ ಕ್ರಮ ಕೈಗೊಳ್ಳಬೇಕು. ಶೇ.50ರಷ್ಟು ತುಟ್ಟಿ ಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸುವುದು, ವೇತನ ತಾರತಮ್ಯ ಹೋಗಲಾಡಿಸಲು ಸಂಘಟನೆಯಿಂದ ಈ ವೇಳೆ ಒತ್ತಾಯಿಸಲಾಯಿತು.
ಸಂಘಟನೆಯ ಅಧ್ಯಕ್ಷ ಅಮರೇಶ್ವರ, ಉಪಾಧ್ಯಕ್ಷರಾದ ಕೆ. ನಾರಾಯಣ, ತಾಯರಾಜ್ ಮರ್ಚಟ್ಹಾಳ್, ಷಣ್ಮುಖಪ್ಪ, ವಿರೂಪಾಕ್ಷಿ, ಪ್ರಧಾನ ಕಾರ್ಯದರ್ಶಿ ಮಾರುತಿ, ಖಜಾಂಚಿ ಸಿದ್ದರಾಮಪ್ಪಗೌಡ, ಪ್ರಕಾಶ್, ಸಿಐಟಿಯುನ ಚನ್ನಬಸವಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

