ರಾಯಚೂರು

ಆಮೆಗತಿ ಕಾಮಗಾರಿ; ಗುಡುಗು

Published On :

ಕ.ಪ್ರ. ವಾರ್ತೆ   ಗುಲ್ಬರ್ಗ   ಜ.13
ರೇಲ್ವೆ ಮಂಡಳಿಯ ಗಮನ ಸೆಳೆದು ನೆನೆಗುದಿಗೆ ಬಿದ್ದಿರುವ ಈ ಕಾಮಗಾರಿಗೆ ಹೆಚ್ಚುವರಿಯಾಗಿ 60 ಕೋಟಿ ಹಣ ಇಲಾಖೆ ನೀಡಿದರೆ ರಾಜ್ಯ ಸರ್ಕಾರದಿಂದಲೂ ಅಷ್ಟೇ ಹಣ ಹರಿದು ಬಂದಿದೆ. 120 ಕೋಟಿ ಹಣ ಲಭ್ಯವಿದ್ದರೂ ಅದ್ಯಾಕೆ ಕಾಮಗಾರಿ ವೇಗ ಪಡೆದುಕೊಳ್ಳುತ್ತಿಲ್ಲವೋ? ಇಲ್ಲಿರುವ ಅಧಿಕಾರಿಗಳು ಅದ್ಯಾಕೆ ಈ ಕಾಮಗಾರಿ ಬಗ್ಗೆ ಆಸಕ್ತಿ ತೋರುತ್ತಿಲ್ಲವೋ? ಎಂದು ಸಚಿವ ಖರ್ಗೆ, ಕಾಮಗಾರಿ ನಿರ್ಮಾಣ ಹೊಣೆ ಹೊತ್ತಿರುವ ರೇಲ್ವೆ ವಿಕಾಸ ನಿಗಮ ಹಾಗೂ ದಕ್ಷಿಣ ಮಧ್ಯ ರೇಲ್ವೆ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಗುಲ್ಬರ್ಗ- ಬೀದರ್ ರೈಲು ಮಾರ್ಗ ಯೋಜನೆಯ ಭಾಗವಾಗಿರುವ ಗುಲ್ಬರ್ಗ ಸೀಮೆಯ ಮೊದಲ ರೈಲು ನಿಲ್ದಾಣವಾಗಿರುವ ತಾಜಸುಲ್ತಾನಪುರದಲ್ಲಿ 30 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣ ಕಟ್ಟಡ, ಗೂಡ್ಸ್ ಶೆಡ್, ಗೋದಾಮು ನಿಮಾರ್ಣಕ್ಕೆ ಸೋಮವಾರ ಅಡಿಗಲ್ಲು ಹಾಕಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಈ ನಿಮಾರ್ಣ ಕಾಮಗಾರಿ ಕುರಿತಂತೆ ತಮ್ಮ ಮನದೊಳಗಿನ ಅಸಮಾಧಾನ ಬಹಿರಂಗವಾಗಿಯೇ ಹೊರಹಾಕಿದರು.
ಹಣ- ಭೂಮಿ ಇದೆ, ಕೆಲ್ಸ ಯಾಕೆ ಮಾಡುತ್ತಿಲ್ಲ: ಹಣ, ಭೂಮಿ ಕೊರತೆ ಎಂದು ಹಿಂದೆಲ್ಲಾ ಹೇಳುತ್ತ ಕಾಮಗಾರಿಯತ್ತ ಕ್ಯಾರೆ ಎನ್ನದವರು ಈಗ ಇವೆರಡೂ ಇದ್ದರೂ ಕೆಲಸ ಮಾಡುತ್ತಿಲ್ಲ ಯಾಕೆ? ಯೋಜನೆ ಬೇಗ ಪೂರ್ಣಗೊಳ್ಳಲಿ ಎಂಬ ಉದ್ದೇಶದಿಂದ ಇಡೀ ಯೋಜನೆಯನ್ನು ಸೇತುವೆ, ಮಾರ್ಗ ನಿರ್ಮಾಣ, ನಿಲ್ದಾಣ ಕಾಮಗಾರಿ ಎಂದು ಏಕಕಾಲದಲ್ಲೇ ಶುರುಮಾಡಿರುವಾಗ ಯಾಕೆ ವೇಗದಲ್ಲಿ ಕಾಮಗಾರಿ ಮಾಡಿಮುಗಿಸಬಾರದು ಎಂದು ಪ್ರಶ್ನಿಸುತ್ತಲೇ ವೇದಿಕೆಯಲ್ಲಿದ್ದ ದಕ್ಷಿಣ ಮಧ್ಯ ರೇಲ್ವೆ ವ್ಯವಸ್ಥಾಪಕ ಪಿ.ಕೆ. ಶ್ರೀವಾಸ್ತವ್, ಗುಲ್ಬರ್ಗ ಜಿಲ್ಲಾಧಿಕಾರಿ ಡಾ. ಪ್ರಕಾಶ  ಇವರನ್ನು ಉದ್ದೇಶಿಸಿ ಕಾಮಗಾರಿ ಆಗಾಗ ಪರಿಶೀಲಿಸಿ, ಎಲ್ಲಿಯಾದರೂ ಲೋಪ ಕಂಡಲ್ಲಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುತ್ತದೆ ಎಂದು ಗುಡುಗಿದರು.
ಹಣ ವೆಚ್ಚ ಮಾಡಿ, ಜೊತೆಗೆ ಭೌತಿಕ ಗುರಿಯನ್ನೂ ಸಾಧಿಸಿರಿ. ಗುಣಮಟ್ಟದ ಕಾಮಗಾರಿ ಮಾಡಬೇಕು, ಎಲ್ಲಿಯೂ ರಾಜಿ ಮಾತೇ ಇಲ್ಲ. ರೇಲ್ವೆ ಮೂಲ ಸೌಕರ್ಯದಲ್ಲಿ ಈ ಭಾಗದಲ್ಲಿ ಹೆಚ್ಚಿನ ಸಾಧನೆ ಮಾಡುವ ತಮ್ಮ ನಿರೀಕ್ಷೆಗೆ ಅಧಿಕಾರಿಗಳಿಂದಲೂ ಸ್ಪಂದನೆ ದೊರಕಬೇಕೆಂದರು.
3 ವರ್ಷದಲ್ಲಾದರೂ ಯೋಜನೆ ಮುಗಿಸುವ ಸಂಕಲ್ಪ: 1996-97ರಲ್ಲಿ ಅನುಮೋದನೆಗೊಂಡಿರುವ ಗುಲ್ಬರ್ಗ- ಬೀದರ್ ರೇಲ್ವೆ ಮಾರ್ಗ ಯೋಜನೆಗೆ ವೇಗ ದೊರಕಿದಲ್ಲಿ ಕೊನೆಪಕ್ಷ 3 ವರ್ಷದಲ್ಲಾದರೂ ಈ ಕಾಮಗಾರಿ ಮುಗಿಸಬಹುದು ಎಂಬುದು ಖರ್ಗೆ ಲೆಕ್ಕಾಚಾರ. 110.40 ಕಿ.ಮೀ. ಉದ್ದದ ಹೊಸ ಮಾರ್ಗ ಹಾಕುವ ಈ ಕಾಮಗಾರಿ ತನ್ನ ಮೂಲ 369.70 ಕೋಟಿ ಅಂದಾಜು ವೆಚ್ಚಿದಿಂದ ಪರಿಷ್ಕೃತಗೊಂಡು ಇದೀಗ 839.83 ಕೋಟಿ ಅಂದಾಜು ವೆಚ್ಚದ ಯೋಜನೆಯಾಗಿದೆ. ಇದುವರೆಗೂ ಗುಲ್ಬರ್ಗ- ಬೀದರ್ ಕಾಮಗಾರಿಗೆ 401 ಕೋಟಿ ವೆಚ್ಚ ಮಾಡಲಾಗಿದೆ. ಸದರಿ ಕಾಮಗಾರಿಯನ್ನು ಪೂರ್ಣಗೊಳಿಸಲು 3 ಹಂತಗಳಲ್ಲಿ ಅದನ್ನು ವಿಂಗಡಿಸಲಾಗಿದ್ದು ಅದು ಹೀಗಿದೆ.
1) ಮೊದಲ ಹಂತ- ಖಾನಾಪುರ- ಹುಮನಾಬಾದ್- 37.20 ಕಿ.ಮೀ.
2) ಎರಡನೇ ಹಂತ- ಹುಮನಾಬಾದ್-ಹಳ್ಳಿಖೇಡ- 16.50 ಕಿ.ಮೀ.
3) ಮೂರನೇ ಭಾಗ- ಹಳ್ಳಿಖೇಡ- ಗುಲ್ಬರ್ಗ- 56.70 ಕಿ.ಮೀ.
ಈಗಾಗಲೇ ಈ ಯೋಜನೆಯ ಖಾನಾಪುರ- ಹುಮನಾಬಾದ್ ಮಾರ್ಗ ಕಾಮಗಾರಿ ಪೂರ್ಣಗೊಂಡು ಅಲ್ಲೀಗ ಪ್ರಯಾಣಿಕರ ರೈಲು ಸಂಚಾರ ಶುರುವಾಗಿದೆ. ಇದೀಗ ಯೋಜನೆಯಡಿಯಲ್ಲಿ ಗುಲ್ಬರ್ಗದಿಂದ 10 ಕಿ.ಮೀ. ವರೆಗೆ ಹೊಸ ಮಾರ್ಗ ಹಾಕುವ ಕೆಲಸ ಪೂರ್ಣಗೊಂಡಿದೆ. ಗುಲ್ಬರ್ಗದಿಂದ 11 ಕಿ.ಮೀ. ಅಂತರದಲ್ಲಿರುವ ಸುಲ್ತಾನಪುರ ಈ ಮಾರ್ಗದ ಮೊದಲ ರೈಲು ನಿಲ್ದಾಣ.
ಸುಲ್ತಾನಪುರ ರೈಲು ನಿಲ್ದಾಣದ ವಿಶೇಷತೆಗಳು:
1) ಗುಲ್ಬರ್ಗದಿಂದ 11 ಕಿ.ಮೀ. ದೂರ, ಗುಲ್ಬರ್ಗ- ಬೀದರ್ ಗುಲ್ಬರ್ಗ ಸೀಮೆಯ ಮೊದಲ ರೈಲು ನಿಲ್ದಾಣ.
2) 2 ಅಂತಸ್ತು ನಿಲ್ದಾಣ, 2 ಉಚ್ಛ ವೇದಿಕೆಗಳು, 3 ಪ್ಯಾಸೆಂಜರ್ ಲೈನ್, 2 ಗೂಡ್ಸ್ ಶೆಡ್, ಎಂಜಿನ್ ಎಸ್ಕೇಪ್ ಲೈನ್ ಹೊಂದಿರುತ್ತದೆ.
3) ನಿಜಾಮ ತಾಂತ್ರಿಕತೆ- ಸಂಯೋಜನೆ, ಗುಲ್ಬರ್ಗ ನಗರದ ಭೂಕಕ್ಷೆಗೆ ಅನುಗುಣವಾಗಿ ನಿಲ್ದಾಣ ನಕಾಶೆ.
4) ವಿಶ್ರಾಂತಿ ಕೋಣೆ, ಒಳದಾರಿ, ಯಾತ್ರಿಕರ ದಟ್ಟಣೆ ನಿವಾರಣೆಗೆ ಸೂಕ್ತ ವ್ಯವಸ್ಥೆ.
5) ಗುಲ್ಬರ್ಗ ಗೂರ್ಡ್ ಯಾರ್ಡ್ನ ದಟ್ಟಣೆ ನಿವಾರಣೆಗೋಸ್ಕರ ಸುಲ್ತಾನಪುರದಲ್ಲಿ ನೂತನ ಗೂಡ್ಸ್ ಶೆಡ್ ಸಹಕಾರಿ.
6) ಉಚ್ಛ ಮಟ್ಟದ ಗೂಡ್ಸ್ ವೇದಿಕೆ, ಸುಲಭದಲ್ಲಿ ಸಾಮಗ್ರಿ- ಸರಂಜಾಮುಗಳನ್ನು ಹೊಂದಿಸಲು ಅನುಕೂಲ.
7) ರೈಲು ನಿಲ್ದಾಣ- ಗೂಡ್ಸ್ ಶೆಡ್ ಅಂದಾಜು ವೆಚ್ಚ- 30 ಕೋಟಿ.
8) ಯಾತ್ರಿಗಳಿಗೆ ಅನುಕೂಲಕರವಾಗಿರುವ ಎಸ್ಕಲೇಟರ್ ಸೌಕರ್ಯ, ಪಾದಚಾರಿ ಪಥ ಇತ್ಯಾದಿಗಳ ನಿರ್ಮಾಣ.
9) ಸಂಪೂರ್ಣ ಆಧುನಿಕೃತವಾಗಿರಲಿದೆ ಸುಲ್ತಾನಪುರ ರೈಲು ನಿಲ್ದಾಣ.
ರೇಲ್ವೆ ಯೋಜನೆಗಳ ಗ್ರಹಣ ಮೋಕ್ಷ: ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ, ಮಾಜಿ ಸಿಎಂ ಧರಂಸಿಂಗ್ ಮಾತನಾಡುತ್ತ ಖರ್ಗೆಯವರು ರೈಲ್ವೆ ಸಚಿವರಾದ ನಂತರ ನೆನೆಗುದಿಗೆ ಬಿದ್ದಂತಹ ಯೋಜನೆಗಳಿಗೆ ಮೋಕ್ಷ ದೊರಕುತ್ತಿದೆ ಎಂದರಲ್ಲದೆ, ಖರ್ಗೆಯವರನ್ನು 'ರೇಲ್ವೆ ಸೌಕರ್ಯ ಸುಧಾರಕರು' ಎಂದು ಹೊಗಳಿದರು.
ದಕ್ಷಿಣ ಮಧ್ಯ ರೇಲ್ವೆ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಶ್ರೀವಾಸ್ತವ್, ಗುಲ್ಬರ್ಗ ಶಾಸಕರಾದ ಅಲ್ಲಂಪ್ರಭು ಪಾಟೀಲ್, ಕೆ.ಬಿ. ಶಾಣಪ್ಪ, ರಾಮಕೃಷ್ಣ, ಸುಲ್ತಾನಪುರ ಗ್ರಾಪಂ ಅಧ್ಯಕ್ಷೆ ಕವಿತಾ ಚನ್ನಪ್ಪ ತಂಗಾ, ಜಿಪಂ ಸದಸ್ಯೆ ಸೌಮ್ಯ ಪಾಟೀಲ್, ಜಿಪಂ ಜನಪ್ರತಿನಿಧಿಗಳು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.