ರಾಯಚೂರು

ನೀರಿನ ಅಭಾವ ನೀಗಿಸಲು ಜ.25ರ ಗಡವು

Published On :

ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಜ.21
ತುಂಗಭದ್ರಾ ಎಡದಂಡೆಯಿಂದ ನೀರು ದೊರೆಯದ ವಿಚಾರ ರೈತರು ಸಂಘರ್ಷಕ್ಕಿಳಿಯುವ ಎಲ್ಲ ಸಾಧ್ಯತೆಗಳಿಗೆ ದಾರಿ ಮಾಡಿಕೊಡುತ್ತಿದೆ. ರೈತರು ಬೆಳೆದ ಬೆಳೆಗಳಿಗೆ ಸಮರ್ಪಕ ನೀರು ದೊರೆಯದೇ ಆರ್ಥಿಕ ಸಂಕಷ್ಟದಿಂದ ಪಾರು ಮಾಡುವಂತೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಶಾಸಕರಿಗೆ ಮೊರೆ ಹೋಗಿರುವ ರೈತರ ಮುಖಂಡರು, ಸಮಸ್ಯೆ ಪರಿಹಾರಕ್ಕೆ ಜ.25ರ ಗಡುವು ನಿಗದಿಗೊಳಿಸಿದ್ದಾರೆ.
ಪ್ರತಿ ವರ್ಷ ಬೇಸಿಗೆಯ ಆರಂಭದೊಂದಿಗೆ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಕಾಡುತ್ತಿತ್ತು. ಆದರೆ ಪ್ರಸಕ್ತ ವರ್ಷ ಬೇಸಿಗೆಯ ಆರಂಭಕ್ಕೂ ಮುನ್ನವೇ ಕುಡಿಯುವ ನೀರಿಗೆ ಹಾಗೂ ರೈತರ ಬೆಳೆಗಳಿಗೆ ನೀರಿನ ಅಭಾವ ಕಾಡತೊಡಗಿದೆ. ನೀರಿನ ನಿರ್ವಹಣೆ ಯಲ್ಲಿನ ವೈಫಲ್ಯವೇ ಅಭಾವಕ್ಕೆ ದಾರಿ ಮಾಡಿದೆ ಎಂಬ ಆರೋಪ ವ್ಯಾಪಕವಾಗಿದೆ.
ಬೆಳೆಗೆ ನೀರಿನ ಅಭಾವ: ರಾಯಚೂರು ನಗರಕ್ಕೆ ಸದ್ಯ ಕುಡಿಯುವ ನೀರಿನ ಅಭಾವ. ರಾಂಪುರ ಕೆರೆಯಲ್ಲಿ ನೀರು ತಳಕಚ್ಚಿದ್ದರಿಂದ ಗಣೇಕಲ್ ಜಲಾಶಯದಲ್ಲಿರುವ 10 ಅಡಿ ನೀರಿನಲ್ಲಿಯೇ ಕೆಲ ಪ್ರಮಾಣದ ನೀರು ರಾಂಪುರ ಕೆರೆಗೆ ಹರಿಸಿಕೊಳ್ಳುವ ಕಾರ್ಯ ಆರಂಭಗೊಂಡಿದೆ. ಆದರೆ ಅದೇ ವೇಳೆ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ರೈತರು ಸುಮಾರು 60 ಸಾವಿರ ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಹತ್ತಿ, ಮೆಣಸಿನಕಾಯಿ, ಜೋಳದ ಬೆಳೆಗೆ ನೀರಿಲ್ಲದಂಥ ಪರಿಸ್ಥಿತಿಯಿದೆ. ಈ ಬೆಳೆಗಳಿಗೆ ಜ.1ರ ನಂತರದಲ್ಲಿ ಸಮರ್ಪಕ ನೀರು ದೊರೆತಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ತುಂಗಭದ್ರಾ ಎಡದಂಡೆ ಕಾಲುವೆಯ 104ನೇ ಮೈಲ್ ಕೆಳ ಭಾಗದಲ್ಲಿ ಎರಡು ಅಡಿಗಿಂತ ಕಡಿಮೆ ನೀರು ಕಾಲುವೆಯಲ್ಲಿದೆ. ಅದರಿಂದಾಗಿ ರೈತರಿಗೆ ನೀರು ದೊರೆಯುತ್ತಿಲ್ಲ. ಇದರಿಂದ ಮಾನವಿ ತಾಲೂಕು ಮತ್ತು ರಾಯಚೂರು ತಾಲೂಕಿನ ಅನೇಕ ಗ್ರಾಮಗಳ ರೈತರು ಬೆಳೆದ ಬೆಳೆಗೆ ನೀರಿನ ಅಭಾವ ಕಾಡುತ್ತಿದೆ.
ಅಧಿಕಾರಿಗಳು ವಿಫಲ: ಎಡದಂಡೆಯಲ್ಲಿ ನೀರಿನ ಸಮಸ್ಯೆಗೆ ಮೇಲ್ಭಾಗದಲ್ಲಿನ ರೈತರ ಅತಿಯಾದ ನೀರಿನ ಬಳಕೆ ಕಾರಣ ಎಂಬುದು ಹೊಸತಲ್ಲ. ಆದರೆ ಅಂಥ ಅಕ್ರಮ ಹಾಗೂ ಅತಿಯಾದ ಬಳಕೆ ತಡೆಯುವಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ವಿಫಲವಾಗಿದ್ದಾರೆಂಬುದು ಅಷ್ಟೇ ಸತ್ಯ. ಅದರಿಂದಾಗಿ ರೈತರು ತೊಂದರೆಗೆ ಸಿಲುಕುವಂತಾಗಿದೆ.
ಜಿಲ್ಲಾಡಳಿತ ಕುಡಿಯುವ ನೀರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈಗಾಗಲೇ ಗಣೇಕಲ್‌ನಲ್ಲಿನ ನೀರು ರಾಂಪುರ ಕೆರೆಗೆ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಂಡಿದೆ. ಇತ್ತೀಚೆಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರನ್ನು ಭೇಟಿ ಮಾಡಿರುವ ಎಡದಂಡೆ ಕಡೆಯ ಭಾಗದ ರೈತ ಮುಖಂಡರು, ರೈತರು ಎದುರಿಸುತ್ತಿರುವ ಸಮಸ್ಯೆಯನ್ನು ವಿವರಿಸಿದ್ದಾರೆ.
ರೈತರು ಹೋರಾಟ ಅನಿವಾರ್ಯ: ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ಎಡದಂಡೆ ಕಾಲುವೆಯ 104ನೇ ಮೈಲ್ ಕೆಳಭಾಗದ ರೈತರ ಹೋರಾಟ ಸಮಿತಿ ಮುಖಂಡರಾದ ಮಹಾಂತೇಶ್ ಪಾಟೀಲ್ ಅತ್ತನೂರು ಹಾಗೂ ಸಿದ್ದನಗೌಡ ಅವರು, ಎಡದಂಡೆಯಲ್ಲಿ ನೀರಿನ ಹರಿವಿಲ್ಲ. ಪರಿಣಾಮ ರೈತರಿಗೆ ನೀರಿಲ್ಲದಂಥ ಸ್ಥಿತಿಯಿದೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರ ಗಮನಕ್ಕೆ ತರಲಾಗಿದೆ. ಜ.25ರವರೆಗೆ ಕಾಲಾವಕಾಶ ನೀಡಲಾಗಿದೆ. ಆನಂತರದಲ್ಲಿ ರೈತರು ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಕಳೆದೆರಡು ವರ್ಷಗಳಿಗಿಂತ ಪ್ರಸಕ್ತ ವರ್ಷ ಬೇಸಿಗೆ ಸಾಕಾಗುವಷ್ಟು ನೀರಿದೆ. ಆದರೂ ನಿರ್ವಹಣೆಯಲ್ಲಿನ ಲೋಪದಿಂದ ಸಮಸ್ಯೆ ಉದ್ಭವವಾಗಿದೆ. ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಬಳಸಿ ನೀರಿನ ಮಟ್ಟ ಕಾಯ್ದುಕೊಂಡು ರೈತರಿಗೆ ಸರ್ಮಪಕ ನೀರೊದಗಿಸುವುದು ಜನಪ್ರತಿನಿಧಿಗಳ ಪಾಲಿಗೆ ಸದ್ಯಕ್ಕೆ ಬಹುದೊಡ್ಡ ಸವಾಲೇ ಸರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.