ಬಿಪಿಎಲ್ ಕಾರ್ಡುದಾರರ ಪರದಾಟ
ವಿಶೇಷ ವರದಿ
ಕ.ಪ್ರ. ವಾರ್ತೆ ರಾಯಚೂರು ಜ.23
ಗ್ರಾಮೀಣ ಮಟ್ಟದಲ್ಲಿ ಗ್ರಾಪಂ ಸಿಬ್ಬಂದಿ ನಿರಾಸಕ್ತಿ. ಕಾಮ್ ಮಾಂಗೋ ಅಭಿಯಾನದಲ್ಲಿ ಫುಲ್ ಬ್ಯುಸಿ ಎಂಬ ನೆಪ. ಆನ್‌ಲೈನ್‌ನಲ್ಲಿ ಮುಗಿಯದ ನೋಂದಣಿ ಪ್ರಕ್ರಿಯೆ. ಸಿಬ್ಬಂದಿ ಕೊರತೆಯ ಸಮಸ್ಯೆ ಸೇರಿ ವಿವಿಧ ಅಡೆತಡೆಗಳಿಂದಾಗಿ ಜಿಲ್ಲೆಯಲ್ಲಿ ಫೆ.15ರ ಗಡವು ಸಮೀಪಿಸಿದರೂ ಬಿಪಿಎಲ್ ಪಡಿತರ ಚೀಟಿ ವಿತರಣೆ ವಿಳಂಬವಾಗುತ್ತಲೇ ಸಾಗಿದೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ದಿನವಿಡೀ ಪಡಿತರ ಚೀಟಿ ವಿತರಣೆಯಲ್ಲಿಯೇ ತೊಡಗಿದ್ದರೂ ಜನತೆಗೆ ಮಾತ್ರ ಒಟ್ಟಾರೆ ಸೌಲಭ್ಯದ ಬಗ್ಗೆ ಅಸಮಾಧಾನ ಮಾತ್ರ ಹೋಗಿಲ್ಲ. ಪಡಿತರ ಚೀಟಿ ವಿತರಣೆ ವ್ಯವಸ್ಥೆ ದಿನಗಳೆದಂತೆ ಗೊಂದಲ ಗೂಡಾಗುತ್ತಿರುವುದು ಎದ್ದು ಕಾಣುತ್ತಿದೆ.
ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಕಾರ್ಡುದಾರರಿಗೆ ಆಹಾರ ಧಾನ್ಯ ಕಡಿಮೆ ಬೆಲೆಯಲ್ಲಿ ಸರ್ಕಾರ ಒದಗಿಸುತ್ತಿರುವುದು ಹಾಗೂ ಆರೋಗ್ಯ ಕಾರ್ಯಕ್ರಮಗಳಡಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಚಿಕಿತ್ಸೆಯಂಥ ಆಕರ್ಷಕ ಸೌಲಭ್ಯಗಳಿಂದಾಗಿ ಬಿಪಿಎಲ್ ಕಾರ್ಡಿಗೆ ಜಿಲ್ಲೆಯಲ್ಲಿ ಎಲ್ಲಿಲ್ಲದ ಬೇಡಿಕೆ ಕಂಡುಬಂದಿದೆ.
45700 ಅರ್ಜಿಗಳ ಪರಿಶೀಲನೆ ಜಾರಿ: ಈಗಾಗಲೇ ಕಳೆದ ವರ್ಷ ಸರ್ಕಾರಿ ನೌಕರರು ಸೇರಿದಂತೆ ಸ್ಥಿತಿವಂತರ ಬಳಿ ಬಿಪಿಎಲ್ ಕಾರ್ಡುಗಳು ಪತ್ತೆಯಾಗಿದ್ದು, ಅದರಿಂದ ಜಿಲ್ಲಾಡಳಿತ ಇಕ್ಕಟ್ಟಿಗೆ ಸಿಲುಕಿತ್ತು. ಜಿಲ್ಲಾಧಿಕಾರಿ ಆಗ ಸಮಗ್ರ ತನಿಖೆ ನಡೆಸಿ ಎರಡು ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಕೈಗೊಂಡಾಗಿದೆ. ಹಾಗಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಬಿಪಿಎಲ್ ಕಾರ್ಡು ವಿತರಣೆ ನಿಟ್ಟಿನಲ್ಲಿ ಎಚ್ಚರಿಕೆಯ ಹೆಜ್ಜೆಯಿರಿಸುತ್ತಿದೆ.
ಜಿಲ್ಲೆಯಲ್ಲಿ ಇದುವರೆಗೆ ಬಿಪಿಎಲ್ ಮತ್ತು ಎಪಿಎಲ್ ಸೇರಿ ಒಟ್ಟು 1,74,823 ಅರ್ಜಿಗಳು ಬಂದಿದ್ದು, ಕೇವಲ 17 ಸಾವಿರ ಅರ್ಜಿಗಳ ವಿಲೇವಾರಿಯಾಗಿದ್ದು, ಅದರಲ್ಲಿ 12011 ಬಿಪಿಎಲ್ ಕಾರ್ಡುಗಳನ್ನು ಮಾತ್ರ ಇದುವರೆಗೆ ವಿತರಿಸಲಾಗಿದೆ. 5223 ಎಪಿಎಲ್ ಕಾರ್ಡು ವಿತರಿಸಲಾಗಿದೆ. 74511 ಅರ್ಜಿಗಳನ್ನು ಪರಿಶೀಲಿಸಲಾಗಿದೆ. ಇನ್ನೂ 45700 ಅರ್ಜಿಗಳ ಪರಿಶೀಲನೆ ಜಾರಿಯಲ್ಲಿದೆ ಎಂದು ಆಹಾರ ಇಲಾಖೆ ತಿಳಿಸಿದೆ.
ಸದ್ಯ ನಗರ ಪ್ರದೇಶದಲ್ಲಿ ಅರ್ಜಿಗಳ ಪರಿಶೀಲನೆ ಬಹುತೇಕ ಮುಗಿದಿದ್ದು, ನಗರದ ಪಡಿತರ ಚೀಟಿ ಅರ್ಜಿದಾರರಿಗೆ ಪಡಿತರ ಚೀಟಿಯನ್ನು ವಾರ್ಡುವಾರು ಜನತೆಗೆ ಕರೆದು ವಿತರಿಸಲಾಗುತ್ತಿದೆ. ಪಡಿತರ ಚೀಟಿ ನೀಡಿಕೆಯಲ್ಲಿನ ವಿಳಂಬದಿಂದ ಅನುಮಾನಗೊಂಡ ಅನೇಕರು ನಾಲ್ಕೈದು ಬಾರಿ ಆನ್‌ಲೈನ್‌ನಲ್ಲಿ ಪುನಃ ಪುನಃ ಅರ್ಜಿ ಸಲ್ಲಿಸುತ್ತಿರುವುದು ಇಲಾಖೆಯನ್ನು ಗೊಂದಲಕ್ಕೆ ಸಿಲುಕಿಸುತ್ತಿದೆ ಎಂದು ಗೊತ್ತಾಗಿದೆ. ಇಂಥ ಗೊಂದಲದಿಂದಾಗಿಯೇ ಇದುವರೆಗೆ 4027 ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಗ್ರಾಪಂ ಸಿಬ್ಬಂದಿ ನಿರಾಸಕ್ತಿ: ಇನ್ನುಳಿದಂತೆ ಗ್ರಾಮೀಣ ಪ್ರದೇಶದಲ್ಲಿಯೇ ಬಿಪಿಎಲ್ ಆಕಾಂಕ್ಷಿಗಳ ಪ್ರಮಾಣ ಸಹಜವಾಗಿಯೇ ಹೆಚ್ಚಿದ್ದು, ಸಲ್ಲಿಕೆಯಾದ ಅರ್ಜಿಗಳ ಪರಿಶೀಲನೆ ಕಾರ್ಯ ಕುಂಠಿತಗೊಂಡಿದೆ. ಸರ್ಕಾರದ ವಿವಿಧ ಇಲಾಖೆಗಳ ಮಧ್ಯೆ ಸಮನ್ವಯದ ಕೊರತೆ ಮತ್ತು ಅನ್ಯ ಇಲಾಖೆಯ ಕಾರ್ಯ ನಾವೇಕೆ ಮಾಡಬೇಕೆಂಗ ಗ್ರಾಪಂ ಸಿಬ್ಬಂದಿಯ ಉಪೇಕ್ಷೆಯಿಂದಾಗಿಯೇ ಬಡವರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಗ್ರಾಪಂ ಸಿಬ್ಬಂದಿ ಇದುವರೆಗೆ ಆಹಾರ ಇಲಾಖೆಯ ಕಾರ್ಯ ಸರಿಯಾಗಿ ನಿರ್ವಹಸಿಲ್ಲ. ಸದ್ಯ ಕಾಮ್ ಮಾಂಗೋ ಅಭಿಯಾನದ ಹೆಸರಿನಲ್ಲಿ ಪಡಿತರ ಚೀಟಿ ಅರ್ಜಿಗಳ ಪರಿಶೀಲನೆಯನ್ನು ಗ್ರಾಪಂ ಪಿಡಿಒಗಳು ಮಾಡುತ್ತಿಲ್ಲ ಎಂಬ ಮಾತು ಕೇಳಿಬಂದಿದೆ.
ಗಡವು ಫೆ.15ರವರೆಗೆ ವಿಸ್ತರಣೆ: ಈ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಪಶುಪತಿ ಅವರು, ಗ್ರಾಪಂ ಸಿಬ್ಬಂದಿಯ ಅಸಹಕಾರದಿಂದಾಗಿ ಗ್ರಾಮೀಣ ಭಾಗದಲ್ಲಿ ಪಡಿತರ ಚೀಟಿ ಬಿಪಿಎಲ್ ಅರ್ಜಿಗಳ ಪರಿಶೀಲನೆ ವಿಳಂಬವಾಗಿದೆ. ಎಪಿಎಲ್‌ಗೆ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ತಡವಾಗುತ್ತಿಲ್ಲ. ಶೀಘ್ರದಲ್ಲಿಯೇ ಜಿಪಂ ಸಿಇಒ ಅವರಿಗೆ ಈ ಬಗ್ಗೆ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿಂದೆ ಜಿಲ್ಲೆಗೆ ಭೇಟಿ ನೀಡಿದ್ದ ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು ಕಳೆದ ವರ್ಷದ ಡಿಸೆಂಬರ್ ಅಂತ್ಯಕ್ಕೆ ಪಡಿತರ ಚೀಟಿ ವಿತರಣೆ ಪ್ರಕ್ರಿಯೆ ಪೂರ್ಣಗೊಳಿಸಲು ಗಡವು ನಿಗದಿಗೊಳಿಸಿದ್ದರು. ಆದರೆ ಈಗ ಗಡವು ಫೆ.15ರವರೆಗೆ ವಿಸ್ತರಣೆಯಾಗಿದೆ.
ಆಹಾರ ಇಲಾಖೆಗೆ ಇತರೆ ಇಲಾಖೆಗಳ ಸಿಬ್ಬಂದಿಯ ಅಸಹಕಾರ, ಆಹಾರ ಇಲಾಖೆಯಲ್ಲಿನ ಸಿಬ್ಬಂದಿಯ ಕೊರತೆ ಸೇರಿ ಅನೇಕ ಕಾರಣಗಳಿಂದಾಗಿ ಫೆ.15ರ ವೇಳೆಗೆ ಎಲ್ಲ ಅರ್ಜಿದಾರರಿಗೆ ಪಡಿತರ ಚೀಟಿ ನೀಡಿಕೆ ದೊರೆಯುವುದು ಅನುಮಾನ ಎಂಬಂತೆ ಕಾಣುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

