ಎಪಿಕ್ ಕಾರ್ಡ್ ಕಡ್ಡಾಯ
ರಾಯಚೂರು: ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ಪಡಿತರ ಚೀಟಿಗೆ ಮೊಬೈಲ್ ಸಂಖ್ಯೆ ಹಾಗೂ ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ್ ಸಂಖ್ಯೆ ಜೋಡಿಸುವ ಕಾರ್ಯ ಜಾರಿಗೆ ತರಲಾಗಿದ್ದು, ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ತಮ್ಮ ಮತದಾರರ ಎಪಿಕ್ ಕಾರ್ಡ್ ಮತ್ತಿತರೆ ವಿವರಗಳನ್ನು ಸೇರ್ಪಡೆಗೊಳಿಸಲು ಆಹಾರ ಮತ್ತು ನಾಗರಿಕ ಇಲಾಖೆ ತಿಳಿಸಿದೆ. ಜಿಲ್ಲೆಯ ಪಡಿತರ ಚೀಟಿದಾರರು ಎಪಿಕ್ ಕಾರ್ಡ್, ಆಧಾರ್ ಕಾರ್ಡ್ ಹಾಗೂ ಮೊಬೈಲ್ ಸಂಖ್ಯೆಗಳನ್ನು ಹಾಗೂ ಕುಟುಂಬದ ಮುಖ್ಯಸ್ಥರ ಎಪಿಕ್ ಹಾಗೂ ಇತರೆ ಸದಸ್ಯರ ಎಪಿಕ್ ಕಾರ್ಡಿನ ಮಾಹಿತಿ ದಾಖಲಿಸಬೇಕಿದೆ.
ಆಧಾರ ಕಾರ್ಡ್ ಹೊಂದಿದವರು 9212357123ಗೆ ಈ ಎಲ್ಲ ಮಾಹಿತಿ ಎಸ್ಎಂಎಸ್ ಕಳಿಸುವ ಮೂಲಕ ಸೇರ್ಪಡೆಗೊಳಿಸಬಹುದು. ಇದರಿಂದ ಪಡಿತರ ಚೀಟಿದಾರರು ಆಹಾರ ಧಾನ್ಯ ಹಂಚಿಕೆ, ಎತ್ತುವಳಿ ಹಾಗು ಇನ್ನಿತರ ಮಾಹಿತಿಗಳನ್ನು ಈ ಮೊಬೈಲ್ ಸಂಖ್ಯೆಗೆ ಪಡೆಯಬಹುದಾಗಿದೆ. ಒಂದು ಮೊಬೈಲ್ನಿಂದ 3ಕ್ಕಿಂತ ಹೆಚ್ಚಿನ ಬಾರಿಗೆ ಎಸ್ಎಂಎಸ್ ಕಳಿಸುವಂತಿಲ್ಲ. ಮೊಬೈಲ್ ಇಲ್ಲದವರು ಹತ್ತಿರದ ಗ್ರಾಪಂ ಅಥವಾ ತಹಸೀಲ್ದಾರ್ ಕಚೇರಿಯ ಆಹಾರ ವಿಭಾಗಕ್ಕೆ ತೆರಳಿ ಮಾಹಿತಿ ಒದಗಿಸಲು ಸೂಚಿಸಲಾಗಿದೆ. ರಾಯಚೂರು ನಗರದವರು ಇಲಾಖೆಯ ಕಚೇರಿಗೆ ತೆರಳಿ ಆಹಾರ ನಿರೀಕ್ಷಕರು ಹಾಗೂ ತಾಲೂಕು ಕಚೇರಿಗಳಲ್ಲಿರುವ ಆಹಾರ ವಿಭಾಗದ ಶಿರಸ್ತೇದಾರರಲ್ಲಿ ಸಂಪರ್ಕಿಸಿ ಸೇರ್ಪಡೆಗೊಳಿಸಲು ಕಚೇರಿ ತಿಳಿಸಿದೆ.
ಕವಿಗೋಷ್ಠಿ ಕಾರ್ಯಕ್ರಮ ಯಶಸ್ವಿ
ರಾಯಚೂರು: ನಗರದ ವಿ.ಎಸ್. ಕಾಂತನವರ ಪ್ರತಿಷ್ಠಾನದಿಂದ ಈಚೆಗೆ ಅಭಿನಂದನೆ ಹಾಗೂ ಕವಿಗೋಷ್ಠಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇಲ್ಲಿನ ಕಾಂತನವರ್ ಸಭಾಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈಚೆಗೆ ಡಾ. ರಾಜ್ಕುಮಾರ್ ಅಭಿಮಾನಿಗಳ ಸಂಘದಿಂದ ನವರಂಗ ಭೂಷಣ ಪ್ರಶಸ್ತಿ ಪಡೆದ ವಿ.ಎಸ್. ಕಾಂತನವರ್ ಹಾಗೂ ಅಖಿಲ ಭಾರತ ಕಣ್ವಸಭಾದಿಂದ ಕಣ್ವರತ್ನ ಪ್ರಶಸ್ತಿ ಗಳಿಸಿದ ಸತ್ಯನಾರಾಯಣ ಮುಂಜುಂದಾರ್ ಅವರನ್ನು ಸನ್ಮಾನಿಸಲಾಯಿತು. ಪರಿಮಳಾ ಜಾಲಿಹಾಳ ಅಭಿನಂದನಾ ಭಾಷಣ ಮಾಡಿದರು. ಅರುಣ್ ಕಾಂತನವರ್, ಬಾನು ಬೇಗಂ, ತಿರುಪತಿ ಜೋಷಿ, ವೆಂಕಟೇಶ ನವಲಿ, ಮಂಜುನಾಥ್ ಗುತ್ತೇದಾರ್, ಬಿ.ಎಸ್. ಮಮತಾ ಸೇರಿ ಅನೇಕರಿದ್ದರು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕವಿಗಳು ಕವಿತೆ ವಾಚಿಸಿದರು. ಪ್ರೊ.ಪಿ. ಮಲ್ಲಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ. ರಾವ್, ಆರ್.ಜಿ. ಶಾಸ್ತ್ರಿ ಇದ್ದರು.
ಕುಡಿಯೋ ನೀರಲ್ಲಿ ಸತ್ತ ಹಕ್ಕಿ ಪುಕ್ಕಟೆ
ಸಿಂಧನೂರು: ನಗರಸಭಾ ಆಡಳಿತ ಮಂಡಳಿಯ ಅವ್ಯವಸ್ಥೆ, ಹದಗೆಟ್ಟ ಆಡಳಿತದಿಂದಾಗಿ ಜನತಾ ಕಾಲೋನಿಯಲ್ಲಿ ಮಂಗಳವಾರ ಬಿಟ್ಟ ಕುಡಿಯುವ ನೀರಿನಲ್ಲಿ ಸತ್ತ-ಪ್ರಾಣಿ, ಪಕ್ಷಿಗಳ ಚರ್ಮ, ಕೋಳಿಗಳ ಪುಕ್ಕ ಮಿಶ್ರಣಗೊಂಡು ನಲ್ಲಿಯಲ್ಲಿ ಬರುವುದನ್ನು ಕಂಡ ನಾಗರೀಕರು ಆಕ್ರೋಶ ವ್ಯಕ್ತಪಡಿಸಿದರು.
ಎರಡು ತಿಂಗಳಿನಿಂದ ನಗರದ ಜನತೆ ಸತ್ತ ಪ್ರಾಣಿ-ಪಕ್ಷಿಗಳ ಪುಕ್ಕ, ತ್ಯಾಜಗಳು ನೀರಿನಲ್ಲಿ ಮಿಶ್ರಣಗೊಂಡು ಬರುತ್ತಿರುವ ನೀರನ್ನೇ ಸೇವಿಸುವ ಪರಿಸ್ಥಿತಿ ಬಂದೊದಗಿದೆ. ಮನೆಯಲ್ಲಿ ತುಂಬಿದ್ದ ನೀರು ಹೊರಗೆ ಚೆಲ್ಲಿ ವಾರ್ಡ್ನ ನಗರಸಭಾ ಸದಸ್ಯರಾದ ಎಕ್ಬಾಲ್ ಸಾಬ್ಗೆ ತಿಳಿಸಲು ಮನೆಗೆ ಹೋದರೆ ಊರಿಗೆ ಹೋಗಿದ್ದಾರೆ ಎನ್ನುತ್ತಾರೆ.
ಇದರಿಂದ ಕುಪಿತಗೊಂಡ ಜನ ನಗರಸಭೆಯವರ ವಿರುದ್ಧ ಹಿಡಿಶಾಪ ಹಾಕಿದರು. ವಾರ್ಡ್ ನಿವಾಸಿ ಮಂಜುನಾಥ ಚವ್ಹಾಣ ಮಾಧ್ಯಮದ ಪ್ರತಿನಿಧಿಗಳ ಎದುರು ಈ ಕುರಿತಂತೆ ತಮ್ಮ ಅಳಲನ್ನು ತೋಡಿಕೊಂಡರು.
ಕಾಲೋನಿಯಲ್ಲಿನ ಸಮಸ್ಯೆಗಳನ್ನು ಅನೇಕ ಬಾರಿ ಹೇಳಲು ಹೋದರೆ ಒಮ್ಮೆಯಾದರೂ ಸರಿಯಾಗಿ ಸಮಸ್ಯೆಗೆ ಸ್ಪಂದಿಸಿಲ್ಲ. ನಾವು ಇಂತಹ ನೀರನ್ನು ಕುಡಿದು ಬದುಕುವ ಸ್ಥಿತಿ ಬಂದೊದಗಿದೆ. ನಮ್ಮನ್ನು ಗೆಲ್ಲಿಸಿ, ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತೇವೆ ಎಂದಿದ್ದವರೆಲ್ಲರೂ ಮಾಯವಾಗಿದ್ದಾರೆ.
ಕುಡಿಯುವ ನೀರಿನಲ್ಲಿ ಏನೇ ಬಂದರೂ ಸಹ ಜನರ ಸಮಸ್ಯೆಗೆ ಸ್ಪಂದಿಸದೇ ತಾವು ಮಾತ್ರ ತಮ್ಮ ಮನೇಲಿ ಬಿಸ್ಲೇರಿ ನೀರು ಕುಡಿದು ಮಲಗುತ್ತಿದ್ದಾರೆ ಎಂದು ವಾರ್ಡ್ನ ಜನತೆ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ನಗರಸಭಾಧ್ಯಕ್ಷ ಜಾಫರ್ ಜಾಗೀರದಾರ, ಎ.ಇ.ಇ.ಗಂಗಾಧರ, ಪೌರಾಯುಕ್ತ ಬಿ.ಪ್ರಹ್ಲಾದ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

