ರಾಯಚೂರು

ಕಾರಹುಣ್ಣಿಮೆಗೆ ಸಿದ್ಧತೆ

Published On :

ಕ.ಪ್ರ. ವಾರ್ತೆ ,  ಆಳಂದ ,  ಜೂ. 10
ಕೃಷಿಯ ಹಲವು ಏಳು ಬೀಳುಗಳ ನಡುವೆ ರೈತರು ಮತ್ತೆ ತಮ್ಮ ಹಂಗಾಮಿನ ಸಿದ್ಧತೆ ಮುನ್ನ ಬರುವ ಕಾರುಹುಣ್ಣಿಮೆ ಜೂ.13ರಂದು ಸಂಭ್ರಮದಿಂದ ಆಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಶಾಂತಿ ಸುವ್ಯವಸ್ಥೆಗಾಗಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ ಏರ್ಪಡಿಸುವ ಮೂಲಕ ಠಾಣಾಧಿಕಾರಿಗಳು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ರೈತರಲ್ಲಿ ಮನವಿ ಮಾಡಿದ್ದಾರೆ.
ಖರೀದಿ: ಈ ಭಾಗದ ವೈಶಿಷ್ಟ್ಯಗಳಲ್ಲಿ ಒಂದಾಗಿರುವ ಈ ಸಾಂಪ್ರದಾಯಿಕ ಹಬ್ಬವು ವಿಶೇಷವಾಗಿ ತಮ್ಮ ಎತ್ತು, ದನ ಕರುಗಳಿಗೆ ಶೃಂಗರಿಸಿ ಪೂಜೆ ಕೈಗೊಳ್ಳುತ್ತಾರೆ. ಅದಕ್ಕೂ ಮುನ್ನ ವಿವಿಧ ಬಗೆ ಅಲಂಕಾರಿಕ ವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತಾರೆ. ಈಗಾಗಲೇ ಮಾರುಕಟ್ಟೆಗೆ ವ್ಯಾಪಾರಿಗಳು ದೂರದಿಂದ ಬಂದು ಅಂಗಡಿಗಳನ್ನು ಹಾಕಿದ್ದಾರೆ. ರೈತರು ಮಾರುಕಟ್ಟೆಗೆ ಹೆಚ್ಚಿನ ರೀತಿಯಲ್ಲಿ ಖರೀದಿಗೆ ಒಲವು ತೋರಿದ್ದರಿಂದ ವ್ಯಾಪಾರ ಬಲು ಜೋರಾಗಿ ನಡೆಯುತ್ತಿದೆ.
ಪೂಜೆ: ಸಾಂಪ್ರದಾಯಿಕವಾಗಿ ಕೃಷಿ ಚಟುವಟಿಕೆ ಆರಂಭಿಸುವ ಮುನ್ನಾ ಈ ಕಾರಹುಣ್ಣಿಮೆ ಹಬ್ಬವು ಬರುವುದರಿಂದ ರೈತರಲೂ ಹೊಸ ಹುರುಪ ಮೂಡಿಸುತ್ತದೆ. ಇದಕ್ಕೆ ಹೊನ್ನುಗ್ಗಿ ಎಂತಲೂ ಆಚರಿಸಲಾಗುತ್ತದೆ. ಅಂದು ತಮ್ಮ  ಜಾನುವಾರುಗಳಿಗೆ ಮೈತೊಳೆದು ಎತ್ತು, ಎಮ್ಮೆ, ಕೊಣ, ಆಕಳು ಹೋರಿಗಳನ್ನು ಪೂಜೆ ಮಾಡಿ ನೈವೇದ್ಯವನ್ನು ಉಣಬಡಿಸಿ ಹಣೆಗೆ ಬಾಸಿಂಗ ಕಟ್ಟುತ್ತಾರೆ. ಮೈಗೆ ವಿವಿಧ ಬಣ್ಣದ ಅಲಂಕಾರಿಕೆ ಮಾಡುತ್ತಾರೆ. ಅಲ್ಲದೆ, ಎತ್ತು, ಹೋರಿಗಳಿಗೆ  ಆಭರಣಗಳು ತೊಡಿಸುತ್ತಾರೆ. ನಂತರ ಸಂಜೆ ಗ್ರಾಮದ ಅಗಸಿಯ ಮುಂದೆ ಹೋರಿ, ಎತ್ತುಗಳನ್ನು ತಂದು ಕರಿಹರಿದು, ಬಾಜಿ ಬಜಂತ್ರಿ ಮೂಲಕ ಸಾಲಾಗಿ ಮೆರವಣಿಗೆ ಮೂಲಕ ಸಂಭ್ರಮ, ಉಲ್ಲಾಸಭರಿತರಾಗಿ ಮನೆಗೆ ಕೊಂಡೊಯ್ಯುತ್ತಾರೆ.
ಜೇವರ್ಗಿಯಲ್ಲಿ
ಸಂಭ್ರಮದ ಕಾರ ಹುಣ್ಣಿಮೆ ಆಚರಣೆ  ನಡೆಯಲಿದೆ. ರೈತರು ಮುಂಗಾರು ಹಂಗಾಮಿನ ಸಂಭ್ರಮದ ಹಬ್ಬ ಇದಾಗಿರುವುದರಿಂದ ಜಾನುವಾರಗಳಿಗೆ ಶೃಂಗರಿಸುವ ವಸ್ತುಗಳನ್ನು ಖರೀದಿಸುವುದರಲ್ಲಿ ರೈತರು ನಿರತರಾಗಿದ್ದಾರೆ. ಈ ಬಾರಿ ಕಳೆದ ವರ್ಷಕ್ಕಿಂತ ಜಾನುವಾರಗಳ ಶೃಂಗಾರ ಮಾಡುವ ವಸ್ತುಗಳ ಬೆಲೆಗಳು ಹೆಚ್ಚಳವಾಗಿದ್ದರೂ, ರೈತರು ಖರೀದಿಸುವ ಭರಾಟೆಯಲ್ಲಿದ್ದಾರೆ. ಗುರುವಾರ ಹೊನ್ನುಗ್ಗಿ ಇದ್ದ ಕಾರಣ ಬುಧವಾರ ಪಟ್ಟಣದ ಮಾರುಕಟ್ಟೆಯಲ್ಲಿ ಎತ್ತುಗಳಿಗೆ ಮಗಡಾ, ಗೋಮಡೆ, ಕುರಣಿ, ಘಂಟಿ ಸರಗಳು, ಕೊಂಬಿಗೆ ಹಚ್ಚುವ ಬಣ್ಣಗಳನ್ನು  ಖರೀದಿಸುತ್ತಿದ್ದಾರೆ.
ಮಳೆ-ಮಂದಹಾಸ: ಮಿರಗಾ ಮಳೆ ಪ್ರವೇಶಕ್ಕೂ ಮುನ್ನ ತಾಲ್ಲೂಕಿನಲ್ಲಿ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಕಾರಹುಣ್ಣಿಮೆ ಸಂಭ್ರಮದಿಂದ ಆಚರಿಸಲು ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ.
ತಾಲೂಕಿನ ಕೆಲವು ಗ್ರಾಮಗಳಲ್ಲಿ ಕಾಲು ಬಂಡೆಗಳನ್ನು ಓಡಿಸಲು ತಯಾರಿಯಲ್ಲಿ ರೈತರು ತೊಡಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕಾರ ಹುಣ್ಣಿಮೆ ಆಚರಣೆಗೆ ಎಲ್ಲಿಲ್ಲದ ಮಹತ್ವ ರೈತರು ನೀಡುತ್ತಾರೆ. ಎತ್ತುಗಳಿಗೆ ಸ್ನಾನ ಮಾಡಿಸಿ ಶೃಂಗರಿಸಿದ ನಂತರ ಹೋಳಿಗೆ, ಕಿಚಡಿ ತಿನ್ನಿಸುತ್ತಾರೆ.
ಮಠದಲ್ಲಿ ಕಾರ್ಯಕ್ರಮ: ಕಾರ ಹುಣ್ಣಿಮೆ ಮುನ್ನಾ ದಿನ ಗುರುವಾರ ಹೊನ್ನುಗಿ ದಿನದಂದು ಮನೆಯಲ್ಲಿನ ಜಾನುವಾರಗಳಿಗೆ ಜೋಳದಿಂದ ತಯಾರಿಸಿದ ಕಿಚಡಿಯನ್ನು ಆಹಾರವಾಗಿ ನೀಡಲಾಗುತ್ತದೆ. ಜೇವರ್ಗಿ ಪಟ್ಟಣದ ಷಣ್ಮುಖ ಶಿವಯೋಗಿಗಳ ಮಠದ ಆವರಣದಲ್ಲಿ ಕರಿ ಹರಿಯುವ ಕಾರ್ಯಕ್ರಮ ನಡೆಯಲಿದೆ. ಶುಕ್ರವಾರ ಸಂಜೆ 5 ಗಂಟೆಗೆ ಹೂಗಾರ ಮನೆಯಿಂದ ಕರಿ ಹರಿವ ಕುಂಭದ ಮೆರವಣಿಗೆ ಮಠದ ಆವರಣದವರೆಗೆ ನಡೆಯಲಿದೆ. ನಂತರ ಸಾಲಾಗಿ ನಿಲ್ಲಿಸಿದ ಎತ್ತುಗಳನ್ನು ಏಕಕಾಲಕ್ಕೆ ಓಡಿಸಲಾಗುತ್ತದೆ. ಮುಂದೆ ಓಡಿಹೋದ ಎತ್ತನು ಹಿಡಿದ ರೈತ ಕರಿ ಹರಿಯುತ್ತಾನೆ. ಕರಿ ಹರಿದ ಎತ್ತಿನ ಮೆರವಣಿಗೆ ನಡೆಸಲಾಗುತ್ತದೆ. ಕಾರು ಹುಣ್ಣಿಮೆ ದಿನದಂದು ಮನೆಯಲ್ಲಿ ಸಿಹಿಯಾದ ಹೋಳಿಗೆ ಮಾಡಿ ಸೇವಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.