ಅತ್ಯಾಚಾರಕ್ಕೆ ಆಕ್ರೋಶ
ಕ.ಪ್ರ. ವಾರ್ತೆ ರಾಯಚೂರು ಜೂ. 17
ಲಿಂಗಸ್ಗೂರು ತಾಲೂಕಿನ ಗೋನವಾಟ್ಲ ತಾಂಡಾದಲ್ಲಿ ಕುರಿಗಳನ್ನು ಕಾಯಲು ತೆರಳಿದ್ದ ಅಪ್ರಾಪ್ತೆ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಘಟನೆಯನ್ನು ಖಂಡಿಸಿ ನಗರದಲ್ಲಿ ಮಂಗಳವಾರ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಹಾಗೂ ಇನ್ನಿತರೆ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಎಐಎಂಎಸ್ಸೆಸ್, ಎಐಡಿವೈಒ, ಆರ್ಕೆಎಸ್ ಸಂಘಟನೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ, ಲಿಂಗಸ್ಗೂರು ತಾಲೂಕಿನಲ್ಲಿ ಬಾಲಕಿಯ ಮೇಲೆ ಇಬ್ಬರು ಅತ್ಯಾಚಾರ ಎಸಗಿದ ಘಟನೆಯನ್ನು ಖಂಡಿಸಿದರು.
ಸಿಂಧನೂರು ತಾಲೂಕಿನ ರೌಡಕುಂದಾ ಗ್ರಾಮದಲ್ಲಿ ಕುರಿ ಮೇಯಿಸಲು ತೆರಳಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ ನೀರಿಗೆ ದೂಡಿದ ಘಟನೆ ನಡೆದ ವಾರದಲ್ಲಿಯೇ ಮತ್ತೊಂದು ಅತ್ಯಾಚಾರದ ಘಟನೆ ಜಿಲ್ಲೆಯಲ್ಲಿ ನಡೆದಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಹಿಳಾ ದೌರ್ಜನ್ಯ ಪ್ರಕರಣ ಹೆಚ್ಚಳ: ಸಿನೆಮಾ, ಅಂತರ್ಜಾಲ, ವಿದ್ಯುನ್ಮಾನ ಮಾಧ್ಯಮಗಳು ಹಾಗೂ ಮೊಬೈಲ್ಗಳಲ್ಲಿ ವ್ಯಾಪಕವಾಗಿ ಅಶ್ಲೀಲತೆಯನ್ನು ಹರಡಲಾಗುತ್ತಿದೆ. ಅದರಿಂದಾಗಿಯೇ ಮಹಿಳೆಯರು ಹಾಗೂ ಯುವತಿಯರು ಅಭದ್ರತೆಯ ಪರಿಸರದಲ್ಲಿ ಜೀವನ ನಡೆಸುವಂತಾಗಿದೆ. ಅಶ್ಲೀಲತೆಗೆ ಕಡಿವಾಣ ಹಾಕುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಪರಿಣಾಮ ಮಹಿಳಾ ದೌರ್ಜನ್ಯದ ಪ್ರಕರಣಗಳು ಹೆಚ್ಚಿವೆ ಎಂದು ಆರೋಪಿಸಿದರು.
ಕೃಷಿ ಸಂಬಂಧಿ ಚಟುವಟಿಕೆಗಳು, ದನಕುರಿಗಳನ್ನು ಮೇಯಿಸಲು, ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಪ್ರದೇಶದ ಯುವತಿಯರು ಒಬ್ಬಂಟಿಯಾಗಿ ತಿರುಗುವುದು ಸಾಮಾನ್ಯ ಸಂಗತಿ. ಹಾಗೆಯೇ ನಗರ ಪ್ರದೇಶದಲ್ಲಿಯೂ ಶಾಲಾ- ಕಾಲೇಜುಗಳು, ಮನೆಪಾಠ, ಉದ್ಯೋಗದ ಕಾರಣಕ್ಕೆ ಮಹಿಳೆಯರು ಹಾಗೂ ಯುವತಿಯರು ಒಬ್ಬಂಟಿಯಾಗಿ ಅಲೆದಾಡುವ ಅನಿವಾರ್ಯತೆಯಿದೆ. ಅಂಥವರಲ್ಲಿ ಜಿಲ್ಲೆಯಲ್ಲಿ ನಡೆದ ಇತ್ತೀಚೆಗೆ ನಡೆದ ಎರಡು ಅತ್ಯಾಚಾರದ ಘಟನೆಗಳು ಆತಂಕವನ್ನು ಮೂಡಿಸಿವೆ ಎಂದು ದೂರಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅತ್ಯಾಚಾರದ ಘಟನೆಗಳು ಪಾಲಕರನ್ನು ಆತಂಕಕ್ಕೆ ಸಿಲುಕಿಸಿವೆ. ಜಿಲ್ಲಾದ್ಯಂತ ಮಹಿಳೆಯರಿಗೆ ಹಾಗೂ ಯುವತಿಯರಿಗೆ ಸೂಕ್ತ ಭದ್ರತೆ ಕಲ್ಪಿಸಬೇಕು. ಲಿಂಗಸ್ಗೂರು ಮತ್ತು ಸಿಂಧನೂರು ತಾಲೂಕಿನಲ್ಲಿ ನಡೆದ ಅತ್ಯಾಚಾರದ ಪ್ರಕರಣಗಳ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಜಸ್ಟಿಸ್ ವರ್ಮಾ ಆಯೋಗದ ಶಿಫಾರಸುಗಳನ್ನು ಕೂಡಲೇ ಜಾರಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.
ಸರ್ಕಾರ ಮಾಧ್ಯಮಗಳ ಮೂಲಕ ಅಶ್ಲೀಲತೆ ಹರಡುವಿಕೆಗೆ ಕಡಿವಾಣ ಹಾಕಬೇಕು. ಅಂತರ್ಜಾಲ, ಮೊಬೈಲ್ಗಳ ದುರ್ಬಳಕೆಗೆ ತಡೆಯೊಡ್ಡಬೇಕು. ಅತ್ಯಾಚಾರ ಪ್ರಕರಣದಲ್ಲಿ ಶಾಮೀಲಾಗಿರುವವರಿಗೆ ಜಾಮೀನು ನೀಡದಂಡೆ ಎಚ್ಚರಿಕೆ ವಹಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದರು.
ಪದವಿ ಕೋರ್ಸುಗಳ ಆರಂಭಕ್ಕೆ ಒತ್ತಾಯ: ನಗರದ ಮಹಿಳಾ ಸರ್ಕಾರಿ ಪದವಿ ಕಾಲೇಜಿಗೆ ಮುಂಜೂರಾದ 7 ವಿವಿಧ ಕೋರ್ಸುಗಳ ಆರಂಭಕ್ಕೆ ಆಗ್ರಹಿಸಿದ ಸಂಘಟನೆ ಕಾರ್ಯಕರ್ತರು, ಹೊಸದಾಗಿ ಮಹಿಳಾ ಪದವಿ ಕಾಲೇಜು ಮಂಜೂರಾಗಿದ್ದು 7 ಕೋರ್ಸುಗಳ ಆರಂಭಿಸುವತ್ತ ಆಡಳಿತ ಕೂಡಲೇ ಮುಂದಾಗುವಂತೆ ಆಗ್ರಹಿಸಿದರು.
ಗ್ರಾಮೀಣ, ಬಡ, ಹಾಗೂ ಹಿಂದುಳಿದ ಕುಟುಂಬದವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ವಿದ್ಯಾರ್ಥಿನಿಯರಿಗೆ ಮಹಿಳಾ ಪದವಿ ಕಾಲೇಜು ಮಂಜೂರು ಮಾಡಿದೆ. ಹೆಣ್ಣು ಮಕ್ಕಳು ಆರ್ಥಿಕ ಕಾರಣಗಳಿಗೆ ಅರ್ಧದಲ್ಲಿಯೇ ಶಿಕ್ಷಣ ಮೊಟಕುಗೊಳಿಸುವುದು ಸಾಮಾನ್ಯ ಸಮಸ್ಯೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಹೊಸ ಕಾಲೇಜಿನ ಆರಂಭ ಆಶಾದಾಯಕ ನಿರ್ಧಾರವಾಗಿದೆ ಎಂದು ತಿಳಿಸಿದರು.
ಆದರೆ ಸದ್ಯ ಕೇವಲ ಬಿಎಸ್ಡಬ್ಲು, ಬಿಬಿಎ ಹಾಗೂ ಬಿಎಸ್ಸಿ ಹೋಂ ಸೈನ್ಸ್ ಮಾತ್ರ ಆರಂಭಿಸಲು ನಿರ್ಧರಿಸಲಾಗಿದೆ. ಸರ್ಕಾರವು ಬಿಎ, ಬಿಕಾಂ, ಬಿಎಸ್ಸಿ, ಬಿಸಿಎ ಕೋರ್ಸುಗಳಿಗೂ ಮಂಜೂರಾತಿ ನೀಡಿದ್ದರೂ ಕೊಠಡಿಗಳ ಕೊರತೆ ನೆಪವೊಡ್ಡಿ ಕೇವಲ ಕೆಲವೇ ಕೋರ್ಸುಗಳನ್ನು ಆರಂಭಿಸಲು ಮುಂದಾಗಿರುವುದು ಸರಿಯಲ್ಲ ಎಂದು ಟೀಕಿಸಿದರು.
ಕೂಡಲೇ ಕೊಠಡಿಗಳ ಅಭಾವ ಪರಿಹರಿಸಿ ಎಲ್ಲ 7 ಕೋರ್ಸುಗಳನ್ನು ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಆರಂಭಿಸಬೇಕು. ವಿದ್ಯಾರ್ಥಿನಿಯರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ಸರೋಜಾ ಗೋನ್ವಾರ, ಪ್ರಮೋದಕುಮಾರ್, ಚನ್ನಬಸವ ಜಾನೇಕಲ್, ರಾಮಣ್ಣ ಎಂ. ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

