ಮಾನವಿ ಪುರಸಭೆ; 7.60 ಲಕ್ಷ ಬಜೆಟ್
ಕ.ಪ್ರ. ವಾರ್ತೆ ರಾಯಚೂರು ಮಾ.4
ರಸ್ತೆ ಮತ್ತು ಚರಂಡಿ ಆಧುನೀಕರಣಕ್ಕೆ ಒತ್ತು. ಉದ್ಯಾನವನಗಳ ಅಭಿವೃದ್ಧಿ, ಪಾದಚಾರಿ ರಸ್ತೆ ನಿರ್ಮಾಣ, ಪಟ್ಟಣಕ್ಕೆ 24 ಗಂಟೆ ಸಮರ್ಪಕ ನೀರು ಪೂರೈಕೆಗೆ ಕ್ರಮದ ಭರವಸೆ ನೀಡಿರುವ ಮಾನವಿ ಪುರಸಭೆ ಅಧ್ಯಕ್ಷ ನಜೀರುದ್ದೀನ್ ಖಾದ್ರಿ 7.60 ಲಕ್ಷ ಉಳಿತಾಯದ ಬಜೆಟ್ ಮಂಡಿಸಿದರು.
ಮಾನವಿ ಪಟ್ಟಣದ ಪುರಸಭೆ ನೂತನ ಸಭಾಂಗಣದಲ್ಲಿ ಮಂಗಳವಾರ 2014- 15ನೇ ಸಾಲಿನ ಆಯವ್ಯಯ ಪತ್ರವನ್ನು ಮಂಡಿಸಿದರು. ಒಟ್ಟು 115,15,82,000 ಆದಾಯ ನಿರೀಕ್ಷಿಸಿದ್ದು, ಅಭಿವೃದ್ಧಿ, ಸಿಬ್ಬಂದಿ ವೇತನ ಸೇರಿ 115,08,22,000 ವೆಚ್ಚ ಮಾಡಲು ಉದ್ದೇಶಿಸಿದ್ದಾಗಿ ತಿಳಿಸಿ, 7.60 ಲಕ್ಷ ಉಳಿತಾಯ ಮಾಡುವ ಗುರಿ ಹೊಂದಲಾಗಿದೆ.
ನಿರೀಕ್ಷಿತ ಅನುದಾನ: ನಿರಂತರ ನೀರು ಸರಬರಾಜು ಯೋಜನೆಗೆ 54.65 ಕೋಟಿ, 13ನೇ ಹಣಕಾಸು ಯೋಜನೆಯಡಿ 2 ಕೋಟಿ, ಎಸ್‌ಎಫ್‌ಸಿ ವಿಶೇಷ ಯೋಜನೆಯಡಿ 3 ಕೋಟಿ, ಎಚ್‌ಕೆಡಿಬಿಯ 1 ಕೋಟಿ, ಆಶ್ರಯ ಯೋಜನೆಗೆ 1.20 ಕೋಟಿ, ನಗರೋತ್ಥಾನ ಅನುದಾನದಡಿ 5 ಕೋಟಿ, ವೇತನಾನುದಾನ 1.57 ಕೋಟಿ, ಸರ್ಕಾರದಿಂದ ಲಭ್ಯವಾಗುವ ಬಗ್ಗೆ ಬಜೆಟ್‌ನಲ್ಲಿ ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.
ಆದಾಯ ನಿರೀಕ್ಷೆ: ಪುರಸಭೆ ತನ್ನದೇ ಆದ ಸಂಪನ್ಮೂಲಗಳಿಂದ ಹಣ ಕ್ರೂಢೀಕರಿಸುವ ಉದ್ದೇಶ ಹೊಂದಿದ್ದು ಅಭಿವೃದ್ಧಿ ಶುಲ್ಕದ ರೂಪದಲ್ಲಿ 15 ಲಕ್ಷ, ಮಳಿಗೆಗಳ ಬಾಡಿಗೆ 13 ಲಕ್ಷ, ಕಟ್ಟಡ ಶುಲ್ಕ 10 ಲಕ್ಷ, ಬ್ಯಾಂಕಿನ ಬಡ್ಡಿ 20 ಲಕ್ಷ, ಆಸ್ತಿ ತೆರಿಗೆ ಆದಾಯ 57 ಲಕ್ಷ, ಖಾತಾ ಬದಲಾವಣೆ ಶುಲ್ಕ 40 ಲಕ್ಷ ಆದಾಯದ ನಿರೀಕ್ಷೆ ಬಜೆಟ್ ಮೂಲಕ ಪ್ರಕಟಿಸಿದ್ದಾರೆ.
ಈಗ್ಗೆ ನಾಲ್ಕು ತಿಂಗಳ ಹಿಂದೆ ಅಧ್ಯಕ್ಷ ಖಾದ್ರಿ ಅವರು ಅಧಿಕಾರಕ್ಕೆ ಬಂದಾಗ ನೀಡಿದ ಭರವಸೆಯಂತೆ ನಗರದ ಸ್ವಚ್ಛತೆ ಮತ್ತು ಹಸಿರೀಕರಣಕ್ಕೆ ಬಜೆಟ್‌ನಲ್ಲಿ ಗಮನಹರಿಸಿದ್ದಾರೆ. ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ನಿರ್ವಹಣೆಗೆ ಅತೀ ಹೆಚ್ಚು ಹಣ ಮೀಸಲಿರಿಸಿದ್ದಾರೆ. ರಸ್ತೆಗಳ ಎರಡೂ ಬದಿಯಲ್ಲಿ ಸಿಮೆಂಟ್ ಪಾದಚಾರಿ ಮಾರ್ಗ ನಿರ್ಮಿಸಲು 4 ಕೋಟಿ, ಸುಸಜ್ಜಿತ ಚರಂಡಿ ನಿರ್ಮಾಣಕ್ಕೆ 5 ಕೋಟಿ ಒದಗಿಸುವ ಭರವಸೆ ನೀಡಿದ್ದಾರೆ.
ಅಸಮಾಧಾನ: ಬಜೆಟ್ ಕುರಿತು ಚರ್ಚೆ ನಡೆಸಲು ನಿರಾಸಕ್ತಿ ತೋರಿದ ಸದಸ್ಯರು ಹಿಂದಿನ ಸಭೆಗಳ ನಡಾವಳಿ, ವಾರ್ಡ್‌ಗಳಿಗೆ ಅನ್ಯಾಯವಾಗಿರುವ ವಿಚಾರ ಪ್ರಸ್ತಾಪಿಸಿ ಅಧ್ಯಕ್ಷರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ತಾವು ಪ್ರತಿನಿಧಿಸುವ 12ನೇ ವಾರ್ಡ್‌ಗೆ ಅಭಿವೃದ್ಧಿ ಅನುದಾನದ ವಿಚಾರದಲ್ಲಿ ಘೋರ ಅನ್ಯಾಯ ಮಾಡಲಾಗಿದೆ. ಮೀಸಲಾದ ಹಣ ಬೇರೆಡೆ ವರ್ಗಾಯಿಸಲಾಗಿದೆ ಎಂದು ಸದಸ್ಯೆ ಲಕ್ಷ್ಮಿದೇವಿ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಸಭೆಯಲ್ಲಿ ಅಗೌರವ: 10ನೇ ವಾರ್ಡಿನಲ್ಲಿ ಸದಸ್ಯರಾಗಿರುವ ತಮ್ಮ ಸೂಚನೆಯನ್ನು ಪರಿಗಣಿಸುತ್ತಿಲ್ಲ. ಹಿಂದಿನ ಸಭೆಯಲ್ಲಿ ಅಧ್ಯಕ್ಷರು ತಮಗೆ ಅಗೌರವ ತೋರಿದ್ದರೆಂದು ಸದಸ್ಯೆ ಶ್ರೀದೇವಿ ದೂರಿದರು. ಶಾಸಕ ಹಂಪಯ್ಯ ನಾಯಕ ಇಬ್ಬರನ್ನೂ ಸಮಾಧಾನಪಡಿಸಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯಕ್ಷ ದೊಡ್ಡಬಸವರಾಜ್, ಮುಖ್ಯಾಧಿಕಾರಿ ವೆಂಕಟೇಶ್, ಪ್ರತಿಪಕ್ಷ ನಾಯಕ ರಾಜಾ ಮಹೇಂದ್ರ ನಾಯಕ ಸೇರಿ ಪುರಸಭೆಯ ಸದಸ್ಯರು, ಅಧಿಕಾರಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

