ಬನ್ನಿ'ಗೋಳ' ಕೇಳೋರ್ಯಾರು?
ಕ.ಪ್ರ. ವಾರ್ತೆ ಮುದಗಲ್ ಮಾ.5
ತಾಲೂಕಿನ ಬನ್ನಿಗೋಳ ಗ್ರಾಮದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದ್ದರಿಂದ ಗ್ರಾಮಸ್ಥರ ಗೋಳು ಕೇಳುವವರಾರು ಎಂಬ ಯಕ್ಷಪ್ರಶ್ನೆ ಎದುರಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಳವಾಗಿದ್ದರೂ ಕುಗ್ರಾಮದಂತಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಕೋಟಿ ಕೋಟಿ ಅನುದಾನ ಬಿಡುಗಡೆ ಮಾಡುತ್ತಿದೆ. ಅನುದಾನವೇನೋ ಕಾಗದದಲ್ಲೇ ಖರ್ಚಾಗುತ್ತಿದೆ ವಿನಃ ಅಭಿವೃದ್ಧಿ ಕೆಲಸಗಳು ಮಾತ್ರ ಶೂನ್ಯ.
ಶೌಚಾಲಯ ಸಮಸ್ಯೆ: ಗ್ರಾಮದಲ್ಲಿ ಮೂರು ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು ಇಲ್ಲಿನ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯವಿಲ್ಲ, ಮಹಿಳೆಯರು ಬಯಲಲ್ಲೇ ಬಹಿರ್ದೆಸೆಗೆ ತೆರಳಬೇಕು. ಇದರಿಂದಾಗಿ ರಾತ್ರಿ ಇಲ್ಲವೇ ಬೆಳಕಾಗುವ ಮನ್ನ ಮಾತ್ರವೇ ಶೌಚಾಲಯಕ್ಕೆ ಹೋಗು ದುಸ್ಥಿತಿ ಬಂದಿದೆ. ಮುಖ್ಯ ರಸ್ತೆಯಲ್ಲಿ ಶೌಚಾಲಯ ಇದ್ದರೂ ಮುಳ್ಳು ಕಂಟಿಯಲ್ಲಿ ಮುಳುಗಿ ಹೋಗಿದೆ. ಅದರ ದುರಸ್ತಿಗೆ ಗ್ರಾಮ ಪಂಚಾಯಿತಿ ಇಂದಿಗೂ ಮುಂದಾಗಿಲ್ಲ.
ಗ್ರಾಮದಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಳ್ಳಲು ಸಾರ್ವಜನಿಕರು ಮನಸ್ಸು ಮಾಡಿದರೂ ಅನುದಾನ ನೀಡುವಲ್ಲಿ ಗ್ರಾಮ ಪಂಚಾಯಿತಿ ಸಂಪೂರ್ಣ ವಿಫಲವಾಗಿದೆ. ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ರಸ್ತೆ ಕೆಸರು ಗದ್ದೆ: ಗ್ರಾಮದ ಮುಖ್ಯ ರಸ್ತೆಯಲ್ಲಿ ಚರಂಡಿ ನೀರು ಹರಿಯುತ್ತಿದ್ದುದರಿಂದ ರಸ್ತೆ ಕೆಸರು ಗದ್ದೆಯಾಗಿ ಪರಿವರ್ತನೆಗೊಂಡಿದೆ. ಈ ರಸ್ತೆ ಮುದಗಲ್ನಿಂದ ಸುಕ್ಷೇತ್ರ ಅಂಕಲಿಮಠ, ಮುದೇನೂರು ಸೇರಿದಂತೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಹೊಂದಿದೆ. ಅಲ್ಲದೆ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಮೇಲ್ದರ್ಜೆಗೆ ಏರಿಸಿ ರಾಜ್ಯ ಹೆದ್ದಾರಿಯನ್ನಾಗಿ ಘೋಷಣೆ ಮಾಡಿ ನಾಲ್ಕು ವರ್ಷಗಳೇ ಕಳೆದಿದೆ. ಆದರೆ ಲೋಕೋಪಯೋಗಿ ಇಲಾಖೆಯವರು ರಸ್ತೆ ದುರಸ್ತಿ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಇದ್ದ ಕಾರಣ ರಸ್ತೆಯಲ್ಲಿ ಸಂಚರಿಸುವವರಿಗೆ ಸಂಚಕಾರ ತಂದಿದೆ.
ಕುಡಿಯುವ ನೀರು: ಗ್ರಾಮಕ್ಕೆ ಕುಡಿಯುವ ನೀರು ಸಮಸ್ಯೆ ಹೆಚ್ಚಿದೆ. ಇರುವ ಒಂದೇ ತೆರೆದಬಾವಿ ನೀರು ಇಡೀ ಗ್ರಾಮಕ್ಕೆ ಸರಬರಾಜು ಆಗುತ್ತಿದೆ. ಅಂತರ್ಜಲ ಕುಸಿದಿದ್ದರಿಂದ ಈ ಬಾವಿಗೆ ಕೊಳವೆಬಾವಿ ನೀರು ಬಿಡಲಾಗುತ್ತಿದೆ. ಅದು ವಿದ್ಯುತ್ ಇದ್ದಾಗ ಮಾತ್ರ ನೀರು ಸಿಗುತ್ತದೆ. ಇಲ್ಲದಿದ್ದರೆ ನೀರಿಗಾಗಿ ಪರದಾಟ ತಪ್ಪಿದ್ದಲ್ಲ.
ನಿರುಪಯುಕ್ತ ಕಟ್ಟಡ: ಸರ್ಕಾರ ಗ್ರಾಮ ಪಂಚಾಯಿತಿಗಳ ಸಬಲೀಕರಣಗೊಳಿಸಲು ಅನೇಕ ಯೋಜನೆಗಳಲ್ಲಿ ಅನುದಾನ ನೀಡುತ್ತಿದೆ. ಆ ಅನುದಾನದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಸುಮಾರು 10 ಲಕ್ಷ ವೆಚ್ಚ ಮಾಡಿ ಕಟ್ಟಲಾಗಿದೆ. ಆದರೆ ಕಟ್ಟಡ ಕಾಮಗಾರಿ ಗುಣಮಟ್ಟದಲ್ಲಿ ಆಗದೆ ಇದ್ದ ಕಾರಣ ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸಿಲ್ಲ. ಈ ಕಟ್ಟಡ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.
ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿಯೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಪಂ ಅಧೀನದಲ್ಲಿರುವ ಗ್ರಾಮಗಳ ಪರಿಸ್ಥಿತಿ ಹೇಗಿರಬೇಡ ನೀವೇ ಊಹಿಸಿ.. ಇನ್ನಾದರೂ ಆಡಳಿತ ಮಂಡಳಿಯಾಗಲೀ, ಚುನಾಯಿತ ಜನಪ್ರತಿನಿಧಿಗಳಾಗಲಿ ಗ್ರಾಪಂ.ಗೆ ಚುರುಕು ಮುಟ್ಟಿಸಿ ಮೂಲಭೂತ ಸೌಲಭ್ಯ ಕಲ್ಪಿಸಲು ಮುಂದಾಗಬೇಕಿದೆ.
ಪಂಪಯ್ಯ ಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

