ರಾಯಚೂರು

ಅಕಾಲಿಕ ಮಳೆಗೆ ರೈತ ಕಂಗಾಲು

Published On :

ರಾಯಚೂರು: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಗಿನ ಜಾವ ಸುರಿದ ಧಾರಾಕಾರ ಅಕಾಲಿಕ ಮಳೆಗೆ ರೈತರು ಬೆಳೆದ ವಿವಿಧ ಬೆಳೆಗಳು ಹಾನಿಗೀಡಾಗಿದ್ದು, ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಆಲಿಕಲ್ಲು ಮಳೆಗೆ ರೈತರು ಬೆಳೆದ ತಂಬಾಕು ಮತ್ತಿತರೆ ಬೆಳೆ ಹಾಳಾಗಿದೆ.
ನಗರದಲ್ಲಿ ಗುರುವಾರ ಬೆಳಗಿನ 2 ಗಂಟೆ ಸುಮಾರಿಗೆ ಆರಂಭಗೊಂಡ ಅಕಾಲಿಕ ಮಳೆ 4 ಗಂಟೆಗಳ ಕಾಲ ಧಾರಾಕಾರವಾಗಿ ಸುರಿಯಿತು. ಅದರಿಂದಾಗಿ ನಗರದಲ್ಲಿ ವಿದ್ಯುತ್ ಕಡಿತಗೊಂಡಿತು. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ಆತಂಕದಲ್ಲಿಯೇ ರಾತ್ರಿ ಕಳೆಯುವಂತಾಯಿತು.
ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನಗರದ ಸಿಯಾತಲಾಬ್, ಬಂಗೀ ಕುಂಟಾ ಮತ್ತಿತರೆ ತಗ್ಗು ಪ್ರದೇಶಗಳಲ್ಲಿ ರಸ್ತೆ ಮೇಲೆ ಮಳೆಯ ನೀರು ನಿಂತಿದ್ದರಿಂದ ಸಂಚಾರಕ್ಕೆ ವ್ಯತ್ಯಯವಾಯಿತು. ಇದರಿಂದಾಗಿ ವಾಹನ ಸವಾರರು ಪ್ರಯಾಸಪಡುತ್ತಲೇ ವಾಹನ ಚಲಾಯಿಸುವಂತಾಯಿತು.
ಉತ್ತಮ ಇಳುವರಿ, ಅಪಾರ ಹಾನಿ: ಈ ಮಧ್ಯೆ ತಾಲೂಕಿನ ಯರಮರಸ್ ಕ್ಯಾಂಪ್, ಕಡಗಂದೊಡ್ಡಿ, ಮಾಸದೊಡ್ಡಿ, ಆತ್ಕೂರು, ಜೇಗರಕಲ್, ಗಾಜರಾಳ, ಗುಂಡ್ರವೇಲಿ, ಬುಡದಿನ್ನಿ ಮತ್ತಿತರೆಡೆ ಭಾರೀ ಮಳೆ ಸುರಿದಿದ್ದು, ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆದಿದ್ದ ವಿವಿಧ ಬೆಳೆ ಹಾನಿಗೀಡಾಗಿದೆ.
ಈ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಬಿಳಿ ಜೋಳ ಬೆಳೆ ನೆಲಕ್ಕೊರಗಿದೆ. ಇನ್ನೂ ಕೆಲವೆಡೆ ರೈತರ ಹೊಲದಲ್ಲಿ ರಾಶಿ ಮಾಡಲು ತೆನೆ ಕತ್ತರಿಸಿಟ್ಟಿದ್ದ ಬಿಳಿ ಜೋಳವು ಮಳೆಯಿಂದಾಗಿ ಹಾಳಾಗುವ ಭೀತಿ ಎದುರಾಗಿದೆ. ಇನ್ನು ಕಡಗಂದೊಡ್ಡಿ, ಕಟ್ಲಟ್ಕೂರು ಮತ್ತಿತರೆ ಗ್ರಾಮಗಳಲ್ಲಿ ರೈತರು ಬೆಳೆದಿದ್ದ ಹತ್ತಿ ಬೆಳೆಯು ಭಾರೀ ಮಳೆಯಿಂದಾಗಿ ಹಾಳಾಗಿದೆ. ಹತ್ತಿ ಬಿಡಿಸಲು ಕೂಲಿ ಕಾರ್ಮಿಕರ ಕೊರತೆಯಿಂದಾಗಿ ವಿಳಂಬವಾಗಿದ್ದು ಅಕಾಲಿಕ ಮಳೆಗೆ ಹತ್ತಿ ಸಿಲುಕಿ ಹಾಳಾಗುವಂತೆ ಮಾಡಿದೆ. ಹತ್ತಿ ಗಿಡದಲ್ಲಿನ ಹತ್ತಿಯು ಮಳೆಯ ರಭಸಕ್ಕೆ ಸಿಲುಕಿ ಕಿತ್ತು ನೆಲಕ್ಕೊರಗಿದೆ. ಇನ್ನೂ ಕೆಲವೆಡೆ ಹತ್ತಿ ಮಳೆಯಿಂದಾಗಿ ಉತ್ತಮ ಇಳುವರಿ ಬಂದಿದ್ದರೂ ದರ ದೊರೆಯುವ ನಿರೀಕ್ಷೆಯಿಲ್ಲದಂತೆ ನಾಶವಾಗಿದೆ.
ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಿ: ಅದೇ ರೀತಿ ತಾಲೂಕಿನ ಮಾಸದೊಡ್ಡಿ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ರೈತರು ಬೆಳೆದಿದ್ದ ತಂಬಾಕು, ಹೂಕೋಸು ಬೆಳೆಯು ಆಲಿಕಲ್ಲಿನ ಹೊಡೆತಕ್ಕೆ ಸಿಲುಕಿ ಸಂಪೂರ್ಣ ಪ್ರಯೋಜನಕ್ಕೆ ಬಾರದಂತಾಗಿದೆ. ಅಕಾಲಿಕ ಮಳೆಯಿಂದಾಗಿ ರೈತರ ಕೈಗೆ ಬಂದಿದ್ದ ತುತ್ತು ಬಾಯಿಗಿಲ್ಲದಂತಾಗಿದೆ.
ಈ ಕುರಿತು 'ಕನ್ನಡಪ್ರಭ'ಕ್ಕೆ ಮಾತನಾಡಿದ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಗೌಡ ಕಡಗಂದೊಡ್ಡಿ, ಅಕಾಲಿಕ ಮಳೆಯಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ತರಕಾರಿ ಮತ್ತಿತರೆ ಬೆಳೆಗಳ ಬೆಲೆ ಈಗಾಗಲೇ ಸಾಕಷ್ಟು ಕುಸಿತ ಕಂಡಿದ್ದು, ದರ ಕುಸಿತದ ಭೀತಿಯಲ್ಲಿದ್ದ ರೈತರು ಈಗ ಅಕಾಲಿಕ ಮಳೆಯಿಂದಾಗಿ ಭಾರೀ ಎದುರಿಸುವಂತಾಗಿದೆ. ಸರ್ಕಾರ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ಜಿಲ್ಲೆಯ ಸಿಂಧನೂರು, ಲಿಂಗಸ್ಗೂರು, ಮಾನವಿ ಹಾಗೂ ದೇವದುರ್ಗ ತಾಲೂಕಿನ ವಿವಿಧೆಡೆ ಗುರುವಾರ ಬೆಳಗಿನ ಜಾವ ಮಳೆಯಾಗಿದ್ದು, ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಮಳೆ ವಿವರ: ನಗರದಲ್ಲಿ ಗುರುವಾರ ಬೆಳಗಿನ ಜಾವ ಅತೀ ಹೆಚ್ಚು ಮಳೆ ರಾಯಚೂರು ತಾಲೂಕಿನ ಯರಮರಸ್ 56.7 ಮಿ.ಮೀ. ಸುರಿದಿದೆ. ರಾಯಚೂರು ನಗರದಲ್ಲಿ 50.2 ಮಿ.ಮೀ., ಯರಗೇರಾ- 4 ಮಿ.ಮೀ., ಗಿಲ್ಲೆಸೂಗೂರು- 6 ಮಿ.ಮೀ., ಕಲ್ಮಲಾ-43.4 ಮಿ.ಮೀ., ಜೇಗರಕಲ್- 8.6 ಮಿ.ಮೀ., ದೇವಸೂಗೂರು- 34 ಮಿ.ಮೀ., ಚಂದ್ರಬಂಡಾ- 40 ಮಿ.ಮೀ. ಮಳೆಯಾಗಿದೆ.
ಮಾನವಿ ತಾಲೂಕಿನ ಮಲ್ಲಟ ಗ್ರಾಮದಲ್ಲಿ 12 ಮಿ.ಮೀ., ಕುರುಕುಂದಾ- 9 ಮಿ.ಮೀ., ಕವಿತಾಳ- 9 ಮಿ.ಮೀ. ಮತ್ತು ಪಾಮನ ಕಲ್ಲೂರು- 2.2 ಮಿ.ಮೀ. ಮಳೆ ಸುರಿದಿದೆ. ಇನ್ನು ಲಿಂಗಸ್ಗೂರಿನಲ್ಲಿ 17 ಮಿ.ಮೀ., ಅದೇ ತಾಲೂಕಿನ ಹಟ್ಟಿ- 25 ಮಿ.ಮೀ., ಮುದಗಲ್‌ನಲ್ಲಿ 15.8 ಮಿ.ಮೀ. ಮಳೆಯಾಗಿದೆ. ದೇವದುರ್ಗ ಪಟ್ಟಣದಲ್ಲಿ 28.9 ಮಿ.ಮೀ. ಮಳೆ ಬಿದ್ದರೆ, ಅದೇ ತಾಲೂಕಿನ ಅರಕೇರಾದಲ್ಲಿ 44.8 ಮಿ.ಮೀ., ಗಬ್ಬೂರು- 49.4 ಮಿ.ಮೀ., ಗಲಗ- 22.2 ಮಿ.ಮೀ. ಹಾಗೂ ಜಾಲಹಳ್ಳಿಯಲ್ಲಿ 36.8 ಮಿ.ಮೀ. ಮಳೆಯಾಗಿದೆ.
ಸಿಂಧನೂರಿನಲ್ಲಿ 12.3 ಮಿ.ಮೀ., ಜವಳಗೇರಾ- 1.8 ಮಿ.ಮೀ., ಸಾಲಗುಂದಾ-5.4 ಮಿ.ಮೀ., ಬಳಗಾನೂರು- 2 ಮಿ.ಮೀ., ಗುಡದೂರು- 4.2 ಮಿ.ಮೀ., ತುರ್ವಿಹಾಳ- 3 ಮಿ.ಮೀ., ಗುಂಜಳ್ಳಿ- 4.2 ಮಿ.ಮೀ., ಜಾಲಿಹಾಳದಲ್ಲಿ 8 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಸಮೀಕ್ಷೆಗೆ ಸೂಚನೆ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರ ಬೆಳಗಿನ ಜಾವ ಸುರಿದ ಅಕಾಲಿಕ ಮಳೆಯಿಂದಾದ ಬೆಳೆ ಹಾನಿ ಬಗ್ಗೆ ಸಮೀಕ್ಷೆಗೆ ಜಿಲ್ಲಾಡಳಿತ ಮುಂದಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬೆಳೆ ಹಾನಿಯ ಅಂದಾಜಿಸಲು ಕೃಷಿ ಇಲಾಖೆಯ ಮೂಲಕ ಸಿಬ್ಬಂದಿಗೆ ಸೂಚನೆ ನೀಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.