ಮನೆಗಳಿಗೆ ನುಗ್ಗಿದ ನೀರು
ಸಿಂಧನೂರು: ನಗರದ 6ನೇ ವಾರ್ಡ್‌ನ ಕಾಟಿಬೇಸ್‌ನಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದಾಗಿ ವಾರ್ಡ್‌ನ ಎಲ್ಲ ಮನೆಗಳಿಗೆ ನೀರು ನುಗ್ಗಿ ವಾರ್ಡ್‌ನ ರಸ್ತೆ ಸಂಪೂರ್ಣ ಹಾಳಾಗಿದೆ.
ಇದರ ಬಗ್ಗೆ ನಗರಸಭೆ ಆಡಳಿತ ಪಕ್ಷಕ್ಕೆ ತಿಳಿಸಿದರೆ ಸಂಬಂಧ ಇಲ್ಲದಂತೆ ಕುಳಿತಿರುವುದು ನೋಡಿದರೆ ಪ್ರತಿ ಪಕ್ಷದ ಸದಸ್ಯರಿಗೆ ಮಲತಾಯಿ ಧೋರಣೆ ಎಸಗುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಹಾಜಿ ಮಸ್ತಾನ ಆರೋಪಿಸಿದರು.
ಗುರುವಾರ ತಮ್ಮ ವಾರ್ಡ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ವಾರ್ಡ್‌ನಲ್ಲಿ ಹಲವು ಮೂಲಭೂತ ಸೌಲಭ್ಯಗಳು ಇಲ್ಲದಿರುವುದರಿಂದ ತಾವು ಅನೇಕ ಸಾರಿ ನಗರಸಭೆಯಲ್ಲಿ ಚರ್ಚಿಸಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಪೊಲೀಸ್ ಸ್ಟೇಷನ್ ಎದುರಿಗೆ ಇರುವ ವಾರ್ಡ್‌ಗೆ ಹೋಗುವ ಮುಖ್ಯ ರಸ್ತೆ ಸಂಪೂರ್ಣ ಹಾಳಾಗಿದ್ದು, ಶಾಲಾ ಮಕ್ಕಳು ಪ್ರತಿನಿತ್ಯ ಕೆಸರು ತುಳಿದುಕೊಂಡು ಹೋಗುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಗಂಗಾನಗರದಲ್ಲಿ ಮನೆಗೆ ಚರಂಡಿ ನೀರು; ಆಕ್ರೋಶ: ನಗರದ ಹೊರ ವಲಯದಲ್ಲಿರುವ ಗಂಗಾನಗರ ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದು ಮಳೆಯ ನಿಂತ ನೀರು ಹಾಗೂ ಚರಂಡಿ ನೀರು ತಮ್ಮಣ್ಣ ಎನ್ನುವವರ ಮನೆಗೆ ನುಗ್ಗಿದೆ. ಇದರಿಂದಾಗಿ ಕುಟುಂಬದ ಸದಸ್ಯರೆಲ್ಲ ಬುಧವಾರ ರಾತ್ರಿ ಜಾಗರಣೆ ಮಾಡಿದ್ದಾರೆ.
14ನೇ ವಾರ್ಡ್ ಸದಸ್ಯ ನನ್ನು ಮೇಸ್ತ್ರಿ ಅವರು ತಮ್ಮಣ್ಣನವರ ಮನೆಗೆ ಹೋಗಿ ಅವರ ಕಷ್ಟದಲ್ಲಿ ಸ್ಪಂದಿಸಿ ಮನೆಯಲ್ಲಿದ್ದ ನೀರನ್ನು ಹೊರಹಾಕಲು ಸಹಕರಿಸಿದ್ದಾರೆ. ಹಲವಾರು ಬಾರಿ ನಗರಸಭೆ ಅಧಿಕಾರಿಗಳಿಗೆ ಚರಂಡಿ ಸ್ವಚ್ಛಗೊಳಿಸುವಂತೆ ಹೇಳಿದಾಗ್ಯೂ ಕ್ಯಾರೆ ಎನ್ನುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ಶಾಮೀದ್‌ಸಾಬ ಬೇಸರ ವ್ಯಕ್ತಪಡಿಸಿದ್ದಾರೆ. ನಗರಸಭೆ ಅಧಿಕಾರಿಗಳು ಚರಂಡಿ ಸ್ವಚ್ಛಗೊಳಿಸಲು ಮುತುವರ್ಜಿ ವಹಿಸಬೇಕೆಂದು ಗಂಗಾನಗರ ನಿವಾಸಿಗಳು ಒತ್ತಾಯಿಸಿದ್ದಾರೆ.
ಕೆರೆಯಂತಾದ ಅವೈಜ್ಞಾನಿಕ ಸಿಸಿ ರಸ್ತೆ: ನಗರದ ನಟರಾಜ ಕಾಲೋನಿಯಲ್ಲಿರುವ ಬುಧವಾರ ರಾತ್ರಿ ಬಿದ್ದ ಮಳೆಯಿಂದಾಗಿ ಎರಡು ದಿನಗಳ ಹಿಂದೆ ನೂತನವಾಗಿ ನಿರ್ಮಿಸಿದ್ದ ಸಿಸಿ ರಸ್ತೆ ಕೆರೆಯಾಗಿ ಪರಿವರ್ತನೆಗೊಂಡಿದ್ದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ನಾಮನಿರ್ದೇಶಿತ ಸದಸ್ಯೆ ದೇವಿರಮ್ಮ ಮತ್ತು ನಿವೃತ್ತ ಪ್ರಾಚಾರ್ಯ ಶಾಶ್ವತಸ್ವಾಮಿ ಮುಕ್ಕುಂದಿಮಠ ಅವರು ಮನೆಗಳ ಮಧ್ಯ ಭಾಗದಲ್ಲಿರುವ ಸಿಸಿ ರಸ್ತೆ ಪಕ್ಕದಲ್ಲಿ ಚರಂಡಿಯಿಲ್ಲ. ಅಲ್ಲದೇ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದರಿಂದ ಮಳೆಯ ನೀರೆಲ್ಲ ರಸ್ತೆಯ ಮೇಲೆ ನಿಂತಿದೆ. ಇದರಿಂದಾಗಿ ಸಂಚಾರ ಸ್ಥಗಿತಗೊಂಡಿದೆ.
ಮಳೆ ಬಂದಾಗೊಮ್ಮೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡರೆ ಓಣಿಯಲ್ಲಿ ತಿರುಗಾಡುವದಾದರೂ ಹೇಗೆಂದು ಅಲ್ಲಿಯ ನಿವಾಸಿಗಳು ನೋವಿನಿಂದ ಪ್ರಶ್ನಿಸುತ್ತಿದ್ದಾರೆ. ನಗರಸಭೆ ಅಧ್ಯಕ್ಷರು ಈ ಸಮಸ್ಯೆಯನ್ನು ಹೇಗೆ ಪರಿಹರಿಸುತ್ತಾರೆ ಎಂದು ಕಾದುನೋಡಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

