ರಾಯಚೂರು

ಆಯುಷ್ ವೈದ್ಯ ಪದ್ಧತಿಯತ್ತ...

Published On :

ರಾಯಚೂರು: ಉತ್ತಮ ಆರೋಗ್ಯದಿಂದ ಮಾತ್ರ ಬದುಕಿನಲ್ಲಿ ಉನ್ನತವಾದುದನ್ನು ಸಾಧಿಸಲು ಸಾಧ್ಯ. ಉತ್ತಮ ಆರೋಗ್ಯ ಕಾಪಾಡಿಕೊಳ್ಳುವತ್ತ ಎಲ್ಲರೂ ಗಮನಹರಿಸಬೇಕು. ಈ ನಿಟ್ಟಿನಲ್ಲಿ ದೇಶೀಯ ಚಿಕಿತ್ಸಾ ಪದ್ಧತಿ ಆಯುಷ್‌ನತ್ತ ಇತ್ತೀಚಿನ ದಿನಗಳಲ್ಲಿ ಜನತೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಹೇಳಿದರು.
ನಗರದ ಜಿಲ್ಲಾ ಆಯುಷ್ ಇಲಾಖೆ, ಜಿಲ್ಲಾಡಳಿತ ಮತ್ತಿತರೆ ಸಂಸ್ಥೆಗಳ ಆಶ್ರಯದಲ್ಲಿ ಶುಕ್ರವಾರದಿಂದ ಆರಂಭಗೊಂಡ ಮೂರು ದಿನಗಳ ಆಯುಷ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಆಯುಷ್ ವೈದ್ಯಕೀಯ ಚಿಕಿತ್ಸಾ ಪದ್ಧತಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಸರು ಗಳಿಸುತ್ತಿದೆ. ಅಡ್ಡ ಪರಿಣಾಮಗಳಿಲ್ಲದ ಇಂಥ ಚಿಕಿತ್ಸಾ ಪದ್ಧತಿಯತ್ತ ಜನತೆ ಮಾರು ಹೋಗುತ್ತಿದ್ದಾರೆಂದು ಹೇಳಿದರು.
ಆಯುಷ್ ಪದ್ಧತಿ ಮರೆಯಾಗಿತ್ತು: ಕಳೆದ ಕೆಲ ದಶಕಗಳ ಹಿಂದೆ ಆಯುರ್ವೇದಿಕ್ ವೈದ್ಯಕೀಯ ಪದ್ಧತಿ ಹೆಚ್ಚು ಜನಜನಿತವಾಗಿತ್ತು.  ಹಾಗೆಯೇ ಮನೆ ಔಷಧ ಮನೆಗಳಲ್ಲಿ ಎಲ್ಲರಿಗೂ ತಿಳಿದಿರುತ್ತಿತ್ತು. ಆದರೆ ಇನ್ನಿತರೆ ವೈದ್ಯ ಪದ್ಧತಿಗಳು ಅಸ್ತಿತ್ವಕ್ಕೆ ಬಂದ ನಂತರದಲ್ಲಿ ವೈದ್ಯಕೀಯ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಕಂಡು ಆಯುಷ್ ಪದ್ಧತಿಯನ್ನು ಮರೆಯಾಗಿತ್ತು ಎಂದು ಹೇಳಿದರು.
ಈಚಿನ ದಿನಗಳಲ್ಲಿ ಇನ್ನಿತರೆ ವೈದ್ಯಕೀಯ ಚಿಕಿತ್ಸೆ ವೇಳೆ ಅಡ್ಡಪರಿಣಾಮದಿಂದ ತೊಂದರೆ ಅನುಭವಿಸಿದ ಅನೇಕರು ಪುನಾ ದೇಶೀಯ ವೈದ್ಯಪದ್ಧತಿಯಾದ ಆಯುಷ್‌ಗೆ ಮೊರೆ ಹೋಗುತ್ತಿದ್ದು, ಜಿಲ್ಲಾ ಆಯುಷ್ ಇಲಾಖೆಯು ಜನತೆಗೆ ನೀಡುವ ಸೇವೆಗಳ ಬಗ್ಗೆ ಹೆಚ್ಚು ಮಾಹಿತಿ ಒದಗಿಸುವಂತೆ ಸಲಹೆ ನೀಡಿದರು.
ಮಾತೃ ವೈದ್ಯ ಪದ್ಧತಿ: ಮುಖ್ಯ ಅತಿಥಿ ಜಿಪಂ ಸಿಇಒ ವಿಜಯ ಜೋತ್ಸ್ನಾ ಮಾತನಾಡಿ, ಆಯುರ್ವೇದ ಪದ್ಧತಿಯನ್ನು ಮಾತೃ ವೈದ್ಯ ಪದ್ಧತಿ ಎಂದು ಕರೆಯಬಹುದು. ದೇಶೀಯ ವೈದ್ಯ ಪದ್ಧತಿಯಾಗಿದ್ದ ಈ ಕ್ಷೇತ್ರವು ಆಧುನಿಕ ಯುಗದಲ್ಲಿ ಮರೆಯಾಗಿತ್ತು. ಆದರೆ ಸದ್ಯ ಜನತೆ ಮತ್ತೆ ಆಯುಷ್ ವೈದ್ಯಕೀಯ ಚಿಕಿತ್ಸೆಯತ್ತಲೇ ಹೆಜ್ಜೆ ಹಾಕುತ್ತಿದ್ದಾರೆಂದರು.
ಸಮಾರಂಭದಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಜೀಡಿ ಅಮರಗುಂಡಪ್ಪ, ಡಾ. ಶಂಕ್ರಗೌಡ ಪಾಟೀಲ್ ಸೇರಿ ಜಿಲ್ಲಾ ಆಯುಷ್ ಇಲಾಖೆಯ ಸಿಬ್ಬಂದಿ ಮತ್ತು ಜನತೆ ಪಾಲ್ಗೊಂಡಿದ್ದರು.
  ಇದೇ ವೇಳೆ ಜಿಲ್ಲಾಧಿಕಾರಿ ಮತ್ತು ಜಿಪಂ ಸಿಇಒ ಅವರು ಆರೋಗ್ಯ ಮೇಳದಲ್ಲಿರಿಸಿದ್ದ ವಿವಿಧ ಮಾಹಿತಿ ನೀಡುವ ಪ್ರದರ್ಶನವನ್ನು ವೀಕ್ಷಿಸಿದರು.
 ಜಿಲ್ಲಾ ಆಯುಷ್ ಆರೋಗ್ಯ ಮೇಳವು ನಗರದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.